ಇಸ್ತಾನ್‌ಬುಲ್: ಟರ್ಕಿ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾದ ಟರ್ಕಿಷ್ ಏರ್‌ಲೈನ್ಸ್‌ನ ಪೈಲಟ್ ವಿಮಾನ ಹಾರಾಟ ಸಂದರ್ಭದಲ್ಲೇ ಮೃತಪಟ್ಟಿದ್ದಾರೆ. ಇದರಿಂದಾಗಿ ವಿಮಾನವು ನ್ಯೂಯಾರ್ಕ್‌ನಲ್ಲಿ ಬುಧವಾರ ತುರ್ತು ಭೂಸ್ಪರ್ಶ ಮಾಡಿದೆ.
ಈ ಕುರಿತಂತೆ ವಿಮಾನಯಾನ ಸಂಸ್ಥೆಯ ವಕ್ತಾರ ಯಾಹ್ಯಾ ಉಸ್ತುನ್ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
‘ಏರ್‌ಬಸ್ 350 (TK204) ವಿಮಾನವು ಅಮೆರಿಕದ ಪಶ್ಚಿಮ ಕರಾವಳಿ ಪ್ರದೇಶವಾದ ಸೀಟಲ್‌ನಿಂದ ಇಸ್ತಾನ್‌ಬುಲ್ ಕಡೆಗೆ ಮಂಗಳವಾರ ಸಂಜೆ ಪ್ರಯಾಣ ಆರಂಭಿಸಿತು. ಕ್ಯಾಪ್ಟನ್ ಇಲ್ಸೆನ್ ಪೆಲಿವೆನ್ (59) ಮಾರ್ಗದ ನಡುವೆಯೇ ಅಸ್ವಸ್ಥಗೊಂಡರು. ಅವರಿಗೆ ಪ್ರಥಮ ಚಿಕಿತ್ಸೆ ನೀಡುವ ಪ್ರಯತ್ನವೂ ವಿಫಲವಾಯಿತು. ಹೀಗಾಗಿ ತುರ್ತು ಭೂಸ್ಪರ್ಶ ಮಾಡಲು ಸಹ ಪೈಲಟ್ ನಿರ್ಧರಿಸಿದರು. ವಿಮಾನ ಕೆಳಕ್ಕಿಳಿಯುವ ಹೊತ್ತಿಗಾಗಲೇ ಮುಖ್ಯ ಪೈಲಟ್ ಮೃತಪಟ್ಟಿದ್ದರು’ ಎಂದು ತಿಳಿಸಿದೆ.
‘ಮೃತ ಪೈಲಟ್ ಅವರು 2007ರಿಂದ ಟರ್ಕಿಷ್ ಏರ್‌ಲೈನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಮಾರ್ಚ್‌ನಲ್ಲಿ ಅವರು ವೈದ್ಯಕೀಯ ಪರೀಕ್ಷೆ ತಪಾಸಣೆಗೆ ಒಳಪಟ್ಟು, ಸದೃಢ ಪ್ರಮಾಣಪತ್ರ ಸಲ್ಲಿಸಿದ್ದರು. ಅದರಲ್ಲಿ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆ ಇರುವ ಕುರಿತು ಮಾಹಿತಿ ಇರಲಿಲ್ಲ’ ಎಂದು ವಕ್ತಾರರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.