ವಾಷಿಂಗ್ಟನ್: ಲಾಟ್ವಿಯಾ, ಎಸ್ಟೋನಿಯಾ, ಲಿಥುವೇನಿಯಾ ಮತ್ತು ರೊಮೇನಿಯಾದಂತಹ ರಷ್ಯಾದ ಗಡಿಯಲ್ಲಿ 12,000 ಸೈನಿಕರನ್ನು ನಿಯೋಜಿಸಿರುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಉಕ್ರೇನ್ ವಿರುದ್ಧ ನಡೆಸುತ್ತಿರುವ ಯುದ್ಧದಲ್ಲಿ ವ್ಲಾಡಿಮಿರ್ ಪುಟಿನ್ ಅವರು ವಿಜಯಶಾಲಿಯಾಗುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ಶುಕ್ರವಾರ, ಡೆಮಾಕ್ರಟಿಕ್ ಕಾಕಸ್‌ನ ಸದಸ್ಯರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಉಕ್ರೇನ್‌ನಲ್ಲಿ ನಡೆಯುತ್ತಿರುವುದು ಮೂರನೇ ಮಹಾಯುದ್ಧವಲ್ಲ’ಎಂದು ಒತ್ತಿ ಹೇಳಿದರು. ಆದರೆ 'ನಾಟೊ ಒಕ್ಕೂಟದ ದೇಶಗಳ ಪ್ರತಿ ಇಂಚು ಭೂಮಿಯನ್ನೂ ನಾವು ರಕ್ಷಿಸುತ್ತೇವೆ’ಎಂಬ ಸಂದೇಶ ರವಾನಿಸುವ ಭರವಸೆ ನೀಡಿದರು.
ನ್ಯಾಟೊ, ಉತ್ತರ ಅಮೆರಿಕ ಮತ್ತು ಯುರೋಪಿನ 30 ರಾಷ್ಟ್ರಗಳ ಗುಂಪಾಗಿದೆ. ರಾಜಕೀಯ ಮತ್ತು ಮಿಲಿಟರಿ ವಿಧಾನಗಳ ಮೂಲಕ ಅದರ ಸದಸ್ಯ ರಾಷ್ಟ್ರಗಳ ಸ್ವಾತಂತ್ರ್ಯ ಮತ್ತು ಭದ್ರತೆಯನ್ನು ಖಾತರಿಪಡಿಸುವುದು ನ್ಯಾಟೊ ಉದ್ದೇಶವಾಗಿದೆ.
ರಷ್ಯಾದ ಮಿಲಿಟರಿ ಆಕ್ರಮಣವನ್ನು ಎದುರಿಸುವಲ್ಲಿ ಉಕ್ರೇನ್ ಜನರು ಗಮನಾರ್ಹವಾದ ಶೌರ್ಯ ಮತ್ತು ಧೈರ್ಯವನ್ನು ಪ್ರದರ್ಶಿಸಿದ್ದಾರೆ. ಆದರೆ, ಅಮೆರಿಕ ಒದಗಿಸುವ ಭದ್ರತಾ ನೆರವು ಅವರ ರಕ್ಷಣೆಯಲ್ಲಿ ನಿರ್ಣಾಯಕವಾಗಿದೆ ಎಂದು ಬೈಡನ್ ಹೇಳಿದರು.
‘ನಾವು ಉಕ್ರೇನ್‌ಗೆ ಬೆಂಬಲವನ್ನು ನೀಡುವ ಮೂಲಕ ಯುರೋಪ್‌ನಲ್ಲಿನ ನಮ್ಮ ಮಿತ್ರರಾಷ್ಟ್ರಗಳೊಂದಿಗೆ ನಿಲ್ಲುವುದನ್ನು ಮುಂದುವರಿಸಲಿದ್ದೇವೆ ಮತ್ತು ನ್ಯಾಟೊ ದೇಶಗಳ ಪ್ರತಿ ಇಂಚು ಭೂಮಿಯನ್ನೂ ರಕ್ಷಿಸುತ್ತೇವೆ ಎಂಬ ನಿಸ್ಸಂದಿಗ್ಧ ಸಂದೇಶವನ್ನು ಕಳುಹಿಸುತ್ತೇವೆ’ಎಂದು ಅಮೆರಿಕ ಅಧ್ಯಕ್ಷರು ತಿಳಿಸಿದರು.
‘ಅದಕ್ಕಾಗಿಯೇ ನಾನು, ರಷ್ಯಾದ ಗಡಿಯಲ್ಲಿ ಅಮೆರಿಕದ 12,000 ಯೋಧರನ್ನು ನಿಯೋಜಿಸಿಸಿದ್ದೇನೆ. ಲಾಟ್ವಿಯಾ, ಎಸ್ಟೋನಿಯಾ, ಲಿಥುವೇನಿಯಾ, ರೊಮೇನಿಯಾ ಮತ್ತು ಸೆಟ್ರಾ ದೇಶಗಳ ರಷ್ಯಾಗೆ ಹೊಂದಿಕೊಂಡ ಗಡಿಗಳಲ್ಲಿ ಈ ನಿಯೋಜನೆ ಮಾಡಲಾಗಿದೆ. ನ್ಯಾಟೊ ದೇಶಗಳ ಪ್ರದೇಶಗಳ ರಕ್ಷಣೆಯ ಬಾಧ್ಯತೆ ನಮ್ಮ ಮೇಲಿದೆ. ಆದರೂ ನಾವು ಉಕ್ರೇನ್‌ನಲ್ಲಿ ಮೂರನೇ ಮಹಾಯುದ್ಧ ನಡೆಸಲು ಹೋರಾಡುವುದಿಲ್ಲ’ಎಂದು ಹೇಳಿದರು.
ಫೆಬ್ರವರಿ 24 ರಿಂದ, ರಷ್ಯಾದ ಪಡೆಗಳು ಉಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆಗಳನ್ನು ಪ್ರಾರಂಭಿಸಿವೆ. ಉಕ್ರೇನ್‌ನ ಪ್ರದೇಶಗಳಾದ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಅನ್ನು ಸ್ವತಂತ್ರ ಪ್ರದೇಶಗಳೆಂದು ಗುರುತಿಸಿದ ಮೂರು ದಿನಗಳ ನಂತರ ಈ ಆಕ್ರಮಣ ಆರಂಭವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.