ವಾಷಿಂಗ್ಟನ್: ಟ್ವಿಟರ್ ಮಾಲಿಕತ್ವ ನಿಯಂತ್ರಣ ಬದಲಾವಣೆಗೊಂಡ 12 ತಿಂಗಳೊಳಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಪರಾಗ್ ಅಗರವಾಲ್ ಅವರನ್ನೇನಾದರೂ ಅವರ ಸ್ಥಾನದಿಂದ ವಜಾಗೊಳಿಸಿದರೆ, ಅದಕ್ಕೆ ಪ್ರತಿಯಾಗಿ ಕಂಪನಿಯು $42 ದಶಲಕ್ಷ, ಅಂದರೆ, ₹321 ಕೋಟಿಗಳನ್ನು ನೀಡಬೇಕಾಗುತ್ತದೆ ಎಂದು ಸಂಶೋಧನಾ ಸಂಸ್ಥೆ ‘ಈಕ್ವಿಲರ್’ ತಿಳಿಸಿದೆ.
ಅಗರವಾಲ್ ಅವರ ಮೂಲ ವೇತನ, ಎಲ್ಲಾ ಇಕ್ವಿಟಿ ಪಾವತಿ, ಹಲವು ಬಾಬ್ತುಗಳನ್ನು ಸೇರಿಸಿ ಈ ಮೊತ್ತವನ್ನು ಅಂದಾಜಿಸಲಾಗಿದೆ ಎಂದು ‘ಈಕ್ವಿಲರ್’ ವಕ್ತಾರರು ಹೇಳಿದ್ದಾರೆ,
‘ಈಕ್ವಿಲರ್’ನ ಅಂದಾಜಿನ ಕುರಿತು ಪ್ರತಿಕ್ರಿಯಿಸಲು ಟ್ವಿಟರ್ ಪ್ರತಿನಿಧಿಗಳು ನಿರಾಕರಿಸಿದ್ದಾರೆ.
ಟ್ವಿಟರ್‌ನಲ್ಲಿ ಈ ಹಿಂದೆ ಮುಖ್ಯ ತಂತ್ರಜ್ಞರಾಗಿದ್ದ ಅಗರವಾಲ್ ಅವರನ್ನು ನವೆಂಬರ್‌ನಲ್ಲಿ ಸಿಇಒ ಆಗಿ ನೇಮಿಸಲಾಗಿತ್ತು. 2021ರಲ್ಲಿ ಅಗರವಾಲ್ ಅವರಿಗೆ ಒಟ್ಟು $30.4 ಮಿಲಿಯನ್, ಅಂದರೆ, ₹232 ಕೋಟಿಗಳನ್ನು ಟ್ವಿಟರ್ ಪಾವತಿಸಿದೆ.
ವಿಶ್ವದ ನಂಬರ್ 1 ಶ್ರೀಮಂತ, ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರು ಟ್ವಿಟರ್ ಅನ್ನು $44 ಶತಕೋಟಿಗೆ, ಅಂದರೆ 3.36 ಲಕ್ಷ ಕೋಟಿಗೆ ಖರೀದಿಸಲು ಸೋಮವಾರ ಒಪ್ಪಂದ ಮಾಡಿಕೊಂಡರು. ಖಾಸಗಿ ಕಂಪನಿಯಾಗಿದ್ದ ಟ್ವಿಟರ್ 2013 ರಿಂದ ಸಾರ್ವಜನಿಕ ಕಂಪನಿಯಾಗಿತ್ತು.
ಏಪ್ರಿಲ್ 14 ರಂದು ಟ್ವಿಟರ್ ಖರೀದಿ ಪ್ರಸ್ತಾವವನ್ನು ಮುಂದಿಟ್ಟಾಗ ಮಸ್ಕ್ ಅವರು ಸದ್ಯದ ಟ್ವಿಟರ್ ಕಾರ್ಯನಿರ್ವಹಣೆಯಲ್ಲಿ ವಿಶ್ವಾಸವಿಲ್ಲ ಎಂದೂ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.