ಸ್ಯಾನ್ ಫ್ರಾನ್ಸಿಸ್ಕೋ: ಟ್ವಿಟರ್ ಕಂಪನಿಯಿಂದ ವಜಾಗೊಂಡಿದ್ದ ಮೂವರು ಉನ್ನತ ಅಧಿಕಾರಿಗಳು ತಾವು ಭರಿಸಿರುವ ಕಾನೂನು ವೆಚ್ಚಗಳನ್ನು ಮರುಪಾವತಿಸುವಂತೆ ಇಲಾನ್ ಮಸ್ಕ್ ವಿರುದ್ದ ದಾವೆ ಹೂಡಿದ್ದಾರೆ ಎಂದು ತಿಳಿದುಬಂದಿದೆ.
ಟ್ವಿಟರ್ ಮಾಜಿ ಸಿಇಓ ಪರಾಗ್ ಅಗರವಾಲ್, ಮುಖ್ಯ ಹಣಕಾಸು ಅಧಿಕಾರಿ ನೆಡ್ ಸೆಗಲ್ ಮತ್ತು ಮುಖ್ಯ ಕಾನೂನು ಸಲಹೆಗಾರ ವಿಜಯ್ ಗಡ್ಡೆ ದಾವೆ ಹೂಡಿದವರು. ದೈತ್ಯ ಮೈಕ್ರೋಬ್ಲಾಗಿಂಗ್ ವೇದಿಕೆಯಾದ ಟ್ವಿಟರ್‌ಅನ್ನು ಇಲಾನ್ ಮಸ್ಕ್ ಖರೀದಿಸಿದ ಬಳಿಕ ಹಲವು ಉನ್ನತ ಅಧಿಕಾರಿಗಳನ್ನು ಕೆಲಸದಿಂದ ಕಿತ್ತು ಹಾಕಿದ್ದರು. ಇಲಾನ್ ಮಸ್ಕ್ ಕಂಪೆನಿಯ ನಿಯಮಗಳ ಪ್ರಕಾರ ನಡೆದುಕೊಂಡಿಲ್ಲ ಎಂದು ಈ ಮೂವರು ಕಾನೂನು ಹೋರಾಟ ನಡೆಸಿದ್ದರು. ಈ ವೆಚ್ಚವನ್ನು ಇಲಾನ್ ಭರಿಸಬೇಕು ಎಂದು ದಾವೆ ಹೂಡಿದ್ದಾರೆ.
‘ಕಂಪೆನಿ ತಮಗೆ 1 ಮಿಲಿಯನ್ ಡಾಲರ್‌ಗಿಂತಲೂ ಹೆಚ್ಚು ಹಣವನ್ನು ಕಾನೂನುಬದ್ಧವಾಗಿ ಪಾವತಿಸಬೇಕಾಗಿದೆ‘ ಎಂದು ಮಾಜಿ ಸಿಇಓ ಪರಾಗ್ ಅಗರವಾಲ್, ನೆಡ್ ಸೆಗಲ್, ವಿಜಯ ಗಡ್ಡೆ ತಮ್ಮ ದಾವೆಯಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ಈ ವಿಷಯಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಸಂಬಂಧಿಸಿದ ಮಾಹಿತಿಗಳನ್ನು ಸಲ್ಲಿಸುವಂತೆ ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಕಮಿಷನ್ (SEC) ಮತ್ತು ಡಿಪಾರ್ಟ್‌ಮೆಂಟ್ ಆಫ್ ಜಸ್ಟಿಸ್ (DOJ)ಗೆ ನ್ಯಾಯಾಲಯವು ಸೂಚಿಸಿದೆ ಎಂದು ತಿಳಿದುಬಂದಿದ್ದು, ತನಿಖೆ ಯಾವ ಸ್ವರೂಪದಲ್ಲಿ ನಡೆಯುತ್ತದೆ ಎಂಬ ಮಾಹಿತಿಯಿಲ್ಲ
ನ್ಯಾಯಾಲಯದ ದಾಖಲೆಗಳ ಪ್ರಕಾರ ಕಳೆದ ವರ್ಷವೇ ಅಗರವಾಲ್ ಮತ್ತು ನೆಡ್ ಸೆಗಲ್ SECಗೆ ಸಾಕ್ಷ್ಯವನ್ನು ನೀಡಿದ್ದು, ಈ ವಿಚಾರವಾಗಿ ಫೆಡರಲ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿ ತಿಳಿದಿದೆ. ಟ್ವೀಟರ್‌ಅನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವ ವೇಳೆ ಕಂಪನಿಯ ನಿಯಮಗಳನ್ನು ಇಲಾನ್ ಮಸ್ಕ್ ಅನುಸರಿಸಿದ್ದಾರೆಯೇ ಎಂದು SEC ತನಿಖೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.