ADVERTISEMENT

ಕಾಬೂಲ್‌ನ ಗುರುದ್ವಾರದ ಮೇಲೆ ಭಯೋತ್ಪಾದಕ ದಾಳಿ: ಇಬ್ಬರ ಸಾವು

ಪಿಟಿಐ
Published 18 ಜೂನ್ 2022, 13:57 IST
Last Updated 18 ಜೂನ್ 2022, 13:57 IST
ದಾಳಿಯ ಬಳಿಕ ಕಾಬೂಲ್‌ನ ಗುರುದ್ವಾರದ ಮುಂದೆ ತಾಲಿಬಾನ್‌ ಹೋರಾಟಗಾರರು ಕಾವಲು ಕಾಯುತ್ತಿರುವುದು
ದಾಳಿಯ ಬಳಿಕ ಕಾಬೂಲ್‌ನ ಗುರುದ್ವಾರದ ಮುಂದೆ ತಾಲಿಬಾನ್‌ ಹೋರಾಟಗಾರರು ಕಾವಲು ಕಾಯುತ್ತಿರುವುದು   

ಕಾಬೂಲ್/ನವದೆಹಲಿ: ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವ ಸಿಖ್ ಗುರುದ್ವಾರದ ಮೇಲೆ ಶನಿವಾರ ಭಯೋತ್ಪಾದಕರ ದಾಳಿ ನಡೆದಿದ್ದು, ಸ್ಫೋಟ ಮತ್ತು ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಅಲ್ಲದೆ ಏಳು ಜನರು ಗಾಯಗೊಂಡಿದ್ದಾರೆ ಎಂದುಅಫ್ಗಾನಿಸ್ತಾನದ ಒಳಾಡಳಿತ ಸಚಿವಾಲಯ ತಿಳಿಸಿದೆ.ಈ ಘಟನೆ ವೇಳೆ ಗುರುದ್ವಾರದಲ್ಲಿ ಸುಮಾರು 30 ಮಂದಿ ಇದ್ದರೆಂದು ಮೂಲಗಳು ತಿಳಿಸಿವೆ.

ಇದೇ ವೇಳೆ ಗುರುದ್ವಾರಕ್ಕೆ ಒಯ್ಯಲಾಗುತ್ತಿದ್ದ ಸ್ಫೋಟಕಗಳು ತುಂಬಿದ ವಾಹನ ಸ್ಥಳಕ್ಕೆ ತಲುಪದಂತೆ ತಡೆಯುವಲ್ಲಿ ಅಫ್ಗಾನಿಸ್ತಾನದ ಭದ್ರತಾ ಸಿಬ್ಬಂದಿ ಯಶಸ್ವಿಯಾಗಿದ್ದಾರೆಎಂದು ಸಚಿವಾಲಯ ಹೇಳಿದೆ.

ಈ ಕುರಿತು ಮಾಹಿತಿ ನೀಡಿರುವ ಅಫ್ಗಾನಿಸ್ತಾನ ಸಚಿವಾಲಯದ ವಕ್ತಾರ ಅಬ್ದುಲ್‌ ನಫಿ ಠಾಕೂರ್‌, ಕಾರ್ಟೆ ಪರ್ವಾನ್‌ನಲ್ಲಿರುವ ಗುರುದ್ವಾರದ ಮೇಲೆ ಶನಿವಾರ ಮುಂಜಾನೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಬಳಿಕ ಭಯೋತ್ಪಾದಕರು ಮತ್ತು ತಾಲಿಬಾನ್‌ ಪಡೆ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ಹೇಳಿದ್ದಾರೆ.

ADVERTISEMENT

‘ಭಯೋತ್ಪಾದಕರ ದಾಳಿಯಲ್ಲಿ ತಾಲಿಬಾನ್‌ ಪಡೆಯ ಒಬ್ಬ ಸದಸ್ಯ ಮತ್ತು ಅಫ್ಗಾನಿಸ್ತಾನದ ಒಬ್ಬ ಹಿಂದೂ ಪ್ರಜೆ ಮೃತಪಟ್ಟಿದ್ದಾರೆ. ಇನ್ನು ಏಳು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ’ ಎಂದು ಅವರು ದೃಢಪಡಿಸಿದರು. ದಾಳಿಯ ಜವಾಬ್ದಾರಿಯನ್ನು ಇದುವರೆಗೂ ಯಾವ ಸಂಘಟನೆಗಳು ಹೊತ್ತುಕೊಂ‍ಡಿಲ್ಲ.

ದಾಳಿಕೋರರನ್ನು ಕೊಲ್ಲಲಾಗಿದೆ ಎಂದಿರುವ ನಫಿ, ಎಷ್ಟು ಜನರನ್ನು ಹತ್ಯೆ ಮಾಡಲಾಗಿದೆ ಎಂಬುದರ ಮಾಹಿತಿ ನೀಡಲಿಲ್ಲ.

ದಾಳಿ ಖಂಡಿಸಿದ ಭಾರತ:ಕಾಬೂಲ್‌ನ ಗುರುದ್ವಾರದ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಭಾರತ ಬಲವಾಗಿ ಖಂಡಿಸಿದ್ದು, ಘಟನೆಯ ಬಗ್ಗೆ ತೀವ್ರವಾಗಿ ನಿಗಾವಹಿಸಲಾಗುವುದು ಎಂದು ಹೇಳಿದೆ.

‘ಕಾರ್ಟೆ ಪರ್ವಾನ್‌ನಲ್ಲಿರುವ ಗುರುದ್ವಾರದ ಮೇಲಿನ ಹೇಡಿತನದ ದಾಳಿಯನ್ನು ಎಲ್ಲರೂ ತೀವ್ರವಾಗಿ ಖಂಡಿಸಬೇಕು. ದಾಳಿಯ ನಂತರದ ಬೆಳವಣಿಗೆಗಳನ್ನುನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ’ ಎಂದುವಿದೇಶಾಂಗ ಸಚಿವ ಎಸ್‌. ಜೈಶಂಕರ್‌ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.