ವಾಷಿಂಗ್ಟನ್: ಅಪರೂಪದ ಮೆದುಳು ತಿನ್ನುವ ಅಮೀಬಾ ಸೋಂಕಿಗೆ ತುತ್ತಾಗಿ ಎರಡು ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ನೆವಡಾ ರಾಜ್ಯದಲ್ಲಿ ನಡೆದಿದೆ.
ವೂಡ್‌ರೂವ್ ಬಂಡಿ ಮೃತ ಬಾಲಕ.
ಸ್ವಿಮ್ಮಿಂಗ್‌ಪೂಲ್‌ನಲ್ಲಿ ಈಜುವ ವೇಳೆ ಸೋಂಕು ದೇಹವನ್ನು ಪ್ರವೇಶಿಸಿದೆ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.
ಈ ಬಗ್ಗೆ ಬಂಡಿ ತಾಯಿ ಬರೈನಾ ಫೇಸ್ಬುಕ್‌ನಲ್ಲಿ ಮಗನ ದುರಂತ ಸಾವಿನ ಬಗ್ಗೆ ಹಂಚಿಕೊಂಡಿದ್ದಾರೆ. ‘ಜಗತ್ತಿನ ಅತಿ ಶಕ್ತಿಶಾಲಿ ಮಗನನ್ನು ನಾನು ಪಡೆದಿದ್ದೆ, ಇಷ್ಟು ಧೈರ್ಯಶಾಲಿ ಮಗನನ್ನು ನೀಡಿದ್ದಕ್ಕೆ ನಾನು ದೇವರಿಗೆ ಧನ್ಯಳಾಗಿರುತ್ತೇನೆ. ಆತ ನನ್ನ ಹೀರೋ‘ ಎಂದು ಬರೆದುಕೊಂಡಿದ್ದಾರೆ.
ಆರಂಭದಲ್ಲಿ ಬಾಲಕನಿಗೆ ಜ್ವರ ಕಾಣಿಸಿಕೊಂಡಿದ್ದು, ಚಿಕಿತ್ಸೆ ನೀಡಲಾಗಿತ್ತು. ಆದರೆ ದಿನಕಳೆದಂತೆ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿದಾಗ ಮೆದುಳಿನಲ್ಲಿ ಉರಿ ಕಾಣಿಸಿಕೊಂಡಿತ್ತು. ವೈದ್ಯರು ತಪಾಸಣೆ ನಡೆಸಿದ ಬಳಿಕ ಮೆದುಳು ತಿನ್ನುವ ಅಮೀಬಾ ನೇಗ್ಲೇರಿಯಾ ಫೌಲೆರಿ ಇರುವುದು ಪತ್ತೆಯಾಗಿತ್ತು ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ತಿಳಿಸಿದೆ.
ಈ ಸೋಂಕು ಮಾರಣಾಂತಿಕವಾಗಿದೆ. ಆರಂಭದಲ್ಲಿ ತಲೆನೋವು, ವಾಕರಿಕೆ. ವಾಂತಿ, ಕುತ್ತಿಗೆ ನೋವು, ದೇಹದ ಮೇಲೆ ನಿಯಂತ್ರಣ ಇಲ್ಲದೆ ಇರುವುದು, ಆತಂಕದಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ಅಮೆರಿಕ ಸಾಂಕ್ರಾಮಿಕ ನಿಯಂತ್ರಣ ಕೇಂದ್ರ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.