ದುಬೈ/ವಾಷಿಂಗ್ಟನ್:ಸಂಯುಕ್ತ ಅರಬ್ ಸಂಸ್ಥಾನದ ಮಾರ್ಸ್ ಮಿಷನ್ (ಇಎಂಎಂ) ಮತ್ತು ನಾಸಾದ ಮಾವೆನ್ ನೌಕೆಗಳು ಮಂಗಳಗ್ರಹದ ಆಕಾಶದಲ್ಲಿ ಹಸಿರು ವರ್ಣದ ಸಣ್ಣ ಬೆಳಕಿನಪುಂಜವನ್ನು ಪತ್ತೆ ಮಾಡಿದ್ದು, ಖಭೌತ ವಿಜ್ಞಾನಿಗಳಿಗೆ ಕೆಂಪು ಗ್ರಹದ ವಾತಾವರಣದಲ್ಲಿನ ಕೌತುಕದ ಅಧ್ಯಯನಕ್ಕೆ ಹೊಸ ಒಳನೋಟವೊಂದನ್ನು ಒದಗಿಸಿವೆ.
ಇದು ಮಂಗಳ ಗ್ರಹದ ಆಕಾಶದಲ್ಲಿ ಕಂಡುಬಂದಿರುವ ನೈಸರ್ಗಿಕ ಬೆಳಕಿನ ಪುಂಜವಾಗಿದೆ.ಸೌರ ಮಾರುತವು ಮಂಗಳನ ಮೇಲಿನ ವಾತಾವರಣದ ಮೇಲೆ ನೇರ ಪರಿಣಾಮ ಬೀರಿದಾಗ ಮತ್ತು ಅದು ನಿಧಾನವಾಗಿ ನೇರಳಾತೀತ ಬೆಳಕನ್ನು ಹೊರಸೂಸಿದಾಗಈ ಹೊಸ ಬೆಳಕಿನ ಪುಂಜವುರಚನೆಯಾಗುತ್ತದೆ.ಬೆಳಕಿನ ಪುಂಜ ಘಟಿಸಿದಾಗ, ಗ್ರಹದ ಸಣ್ಣ ಪ್ರದೇಶಗಳು ಹೆಚ್ಚು ಪ್ರಕಾಶಮಾನವಾಗುತ್ತವೆ ಎನ್ನುವುದನ್ನು ಈ ನೌಕೆಗಳು ಪತ್ತೆ ಮಾಡಿವೆ.
‘ನಮ್ಮ ಶೋಧನೆಯು ಪ್ರಸ್ತುತ ಇಎಂಎಂ ನೌಕೆ ಅಧ್ಯಯನ ಮಾಡುತ್ತಿರುವ ಸಂಗತಿಗಳ ದೀರ್ಘ ಪಟ್ಟಿಗೆ ಹೊಸ ಸೇರ್ಪಡೆ. ಮಂಗಳನಲ್ಲಿ ಹಗಲು ಹೇಗೆ ರೂಪುಗೊಳ್ಳುತ್ತದೆ ಎನ್ನುವುದಕ್ಕೆ ಈಗ ಸದ್ಯ ಅಸ್ತಿತ್ವದಲ್ಲಿರುವ ದೃಷ್ಟಿಕೋನಗಳಿಗೆ ಸಣ್ಣ ಬೆಳಕಿನ ಪುಂಜ ಸವಾಲೊಡ್ಡುತ್ತದೆ. ಮಂಗಳನ ವಾಯುಮಂಡಲದ ಮತ್ತು ಮ್ಯಾಗ್ನೆಟೋಸ್ಪೆರಿಕ್ ಡೈನಾಮಿಕ್ಸ್ ಬಗ್ಗೆ ನಮ್ಮ ಅರಿವು ವಿಸ್ತರಿಸುವ ಅನೇಕ ಅನಿರೀಕ್ಷಿತ ವಿದ್ಯಮಾನಗಳನ್ನು ಈ ನೌಕೆ ಪತ್ತೆ ಮಾಡಿದೆ.ಈಗ ನಾವು ಪತ್ತೆ ಮಾಡಿರುವಹೊಸ ಸಂಗತಿಗಳು,ಮಾವೆನ್ ನೌಕೆಯ ದತ್ತಾಂಶಗಳು ಜತೆಗೂಡಿ ವೈಜ್ಞಾನಿಕ ಸಂಶೋಧನೆಯ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿವೆ’ಎಂದು ಇಎಂಎಂನ ವಿಜ್ಞಾನ ಮುಖ್ಯಸ್ಥೆ ಹೆಸ್ಸಾ ಅಲ್ ಮಾತ್ರೌಷಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.