ಗ್ಲಾಸ್ಗೋ (ರಾಯಿಟರ್ಸ್): ವಿಶ್ವದ ಬಡ ರಾಷ್ಟ್ರಗಳಿಗೆ ನವೀಕರಿಸಬಹುದಾದ ಮೂಲದ ವಿದ್ಯುತ್ ಅನ್ನು ಪೂರೈಸುವ ವಿಶ್ವ ವಿದ್ಯುತ್ ಗ್ರಿಡ್ ಯೋಜನೆಗೆ ಭಾರತ ಮತ್ತು ಬ್ರಿಟನ್ ಚಾಲನೆ ನೀಡಿವೆ.
‘ಎರಡೂ ದೇಶಗಳು ಜಂಟಿಯಾಗಿ ಘೋಷಿಸಿರುವ ಈ ಯೋಜನೆಯು ಕಾರ್ಯಗತವಾದರೆ, ಅಗತ್ಯದಷ್ಟು ಸೌರಶಕ್ತಿ ಲಭ್ಯವಿಲ್ಲದ ದೇಶಗಳಿಗೂ ಸೌರವಿದ್ಯುತ್ ಪೂರೈಕೆ ಸಾಧ್ಯವಾಗುತ್ತದೆ. ಸೌರಶಕ್ತಿ ಆಧರಿತ ವಿದ್ಯುತ್ ಅನ್ನು ಹೆಚ್ಚು ಉತ್ಪಾದಿಸುವ ದೇಶಗಳು, ಸೌರಶಕ್ತಿ ಲಭ್ಯವಿಲ್ಲದ ದೇಶಗಳಿಗೆ ಆ ಹೆಚ್ಚುವರಿ ವಿದ್ಯುತ್ ಅನ್ನು ಪೂರೈಸಲು ಈ ಗ್ರಿಡ್ ಅನುಕೂಲ ಮಾಡಿಕೊಡುತ್ತದೆ. ಈ ಮೂಲಕ ಇಂಗಾಲದ ಹೊರಸೂಸುವಿಕೆಯನ್ನು ತಡೆಗಟ್ಟಲು ಬಡ ರಾಷ್ಟ್ರಗಳೂ ನೆರವಾಗಲು ಈ ಗ್ರಿಡ್ ಅನುವು ಮಾಡಿಕೊಡುತ್ತದೆ' ಎಂದು ಯೋಜನೆ ಚಾಲನೆ ವೇಳೆ ವಿವರಿಸಲಾಗಿದೆ.
ಜಾಗತಿಕ ವಿದ್ಯುತ್ ಗ್ರಿಡ್ ಯೋಜನೆಗೆ 80 ದೇಶಗಳು ಬೆಂಬಲ ಸೂಚಿಸಿವೆ.'ವಿಶ್ವವು ಶುದ್ಧ ಮತ್ತು ನವೀಕರಿಸಬಹುದಾದ ವಿದ್ಯುತ್‌ನತ್ತ ಚಲಿಸಬೇಕಾದರೆ, ಎಲ್ಲಾ ದೇಶಗಳನ್ನೂ ಒಳಗೊಂಡ ಈ ಜಾಗತಿಕ ಗ್ರಿಡ್ ಮಾತ್ರವೇ ಏಕೈಕ ಪರಿಹಾರ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಇರುವ ಭಾರತವು, ಪಳೆಯುಳಿಕೆ ಇಂಧನ ಕಡಿತದಲ್ಲಿ ಅಭಿವೃದ್ಧಿ ಹೊಂದಿದ ದೇಶಗಳಿಗೆ ಸಮನಾಗಿಯೇ ಗುರಿಯನ್ನು ಹಾಕಿಕೊಂಡಿದೆ. ಜಾಗತಿಕ ವಿದ್ಯುತ್ ಗ್ರಿಡ್ ಯೋಜನೆಯು ಭಾರತದ ಇಂಗಾಲ ಕಡಿತದ ಸಾಧ್ಯತೆಗಳನ್ನು ತೋರಿಸುತ್ತದೆ ಎಂದು ಇಂಪೆಕ್ಸ್ ಅಸೆಟ್ ಮ್ಯಾನೇಜ್‌ಮೆಂಟ್‌ನ ಹಿರಿಯ ಉಪಾಧ್ಯಕ್ಷೆ
ಜೂಲಿ ಗೋರ್ಟೆ ಹೇಳಿದ್ದಾರೆ.
ಗ್ಲಾಸ್ಗೋ ಹವಾಮಾನ ವೈಪರೀತ್ಯ ಶೃಂಗಸಭೆಯಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ದೆಹಲಿಗೆ ವಾಪಸ್ ಆಗಿದ್ದಾರೆ. ಅದಕ್ಕೂ ಮುನ್ನ ಹಲವು ದೇಶಗಳ ಪ್ರಧಾನಿ ಮತ್ತು ಅಧ್ಯಕ್ಷರ ಜೆತೆಗೆ ಮಾತುಕತೆ ನಡೆಸಿದರು. ಈ ಭೇಟಿಯ ವೇಳೆ, ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ನೆರವು ನೀಡಿದ್ದಕ್ಕೆ ನೇಪಾಳವು ಭಾರತಕ್ಕೆ ಧನ್ಯವಾದಗಳನ್ನು ಅರ್ಪಿಸಿದೆ.
ಬ್ರಿಟನ್‌ನಿಂದ ನೆರವು: ‘ನೆಟ್ ಝೀರೋ’ ಗುರಿ ಸಾಧಿಸಲು ಬ್ರಿಟನ್, ಜಾಗತಿಕ ಆರ್ಥಿಕ ವ್ಯವಸ್ಥೆಯನ್ನು ಮರುರೂಪಿಸಲಿದೆ ಎಂದು ಬ್ರಿಟನ್ ಹಣಕಾಸು ಸಚಿವ ರಿಷಿ ಸುನಕ್ ಹೇಳಿದ್ದಾರೆ. ಇದಕ್ಕಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಬ್ರಿಟನ್ ₹1,000 ಕೋಟಿ ನೆರವು ನೀಡಲಿದೆ ಎಂದು ಬ್ರಿಟನ್ ಘೋಷಿಸಿದೆ.
ಆರು ವರ್ಷಗಳ ಹಿಂದೆ ಪ್ಯಾರಿಸ್ ಶೃಂಗಸಭೆಯಲ್ಲಿ ಕೆಲವು ಗುರಿಗಳನ್ನು ಘೋಷಿಸಲಾಗಿತ್ತು. ಅವುಗಳನ್ನು ಸಾಧಿಸಲು ಈಗ ಬಂಡವಾಳ ಒದಗಿಸುವುದಾಗಿ ಎಂದು ಬ್ರಿಟನ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.