ADVERTISEMENT

ಅಕ್ರಮ ವಲಸೆ ತಡೆಗೆ ಬ್ರಿಟನ್‌ ಸರ್ಕಾರದ ಟೆಕ್‌ ಸಹಭಾಗಿತ್ವ

ಎಎಫ್‌ಪಿ
Published 7 ಆಗಸ್ಟ್ 2023, 14:42 IST
Last Updated 7 ಆಗಸ್ಟ್ 2023, 14:42 IST
ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ 
ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌    

ಲಂಡನ್‌: ಬ್ರಿಟನ್‌ಗೆ ಅಕ್ರಮವಾಗಿ ವಲಸೆ ಹೋಗುವುದನ್ನು ಪ್ರೋತ್ಸಾಹಿಸುವ ಆನ್‌ಲೈನ್‌ ಮಾಹಿತಿಗೆ ಕಡಿವಾಣ ಹಾಕಲು ಪ್ರಧಾನಿ ರಿಷಿ ಸುನಕ್‌ ಸರ್ಕಾರವು ಸಾಮಾಜಿಕ ಮಾಧ್ಯಮ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಘೋಷಿಸಿದೆ.

ಉತ್ತರ ಫ್ರಾನ್ಸ್‌ನಿಂದ ಬ್ರಿಟನ್‌ಗೆ ಸಮುದ್ರ ಮಾರ್ಗದಲ್ಲಿ ಸಣ್ಣ ದೋಣಿಗಳ ಮೂಲಕ ಬರುವ ವಲಸಿಗರನ್ನು ನಿಯಂತ್ರಿಸುವ ಭರವಸೆಯನ್ನು ಕನ್ಸರ್ವೇಟಿವ್‌ ಪಕ್ಷ ದೇಶಕ್ಕೆ ನೀಡಿದೆ. ಈ ನಿಟ್ಟಿನಲ್ಲಿ ಬ್ರಿಟನ್‌ ಸರ್ಕಾರ ನಡೆಸುತ್ತಿರುವ ಹಲವು ಪ್ರಯತ್ನಗಳು ವಿಫಲವಾಗಿವೆ. ಆದರೂ ಪ್ರಯತ್ನ ಮುಂದುವರಿಸಿರುವ ಸರ್ಕಾರ ಹೊಸ ಕ್ರಮಕ್ಕೆ ಮುಂದಾಗಿದೆ. 

ಅಕ್ರಮ ವಲಸೆ ತಡೆಗೆ ಬ್ರಿಟನ್‌ನ ‘ನ್ಯಾಷನಲ್‌ ಕ್ರೈಮ್‌ ಏಜನ್ಸಿ’ ಮತ್ತು ಸಾಮಾಜಿಕ ಮಾಧ್ಯಮಗಳಾದ ಮೆಟಾ, ಟಿಕ್‌ಟಾಕ್‌ ಮತ್ತು ಟ್ವಿಟರ್‌ಗಳ ಜತೆಗೆ ಸಹಭಾಗಿತ್ವ ಏರ್ಪಟ್ಟಿದೆ. ವಲಸಿಗರಿಗೆ ಸುಳ್ಳು ದಾಖಲೆ ಒದಗಿಸುವ, ಗುಂಪಿನಲ್ಲಿ ಹೋಗುವವರಿಗೆ ರಿಯಾಯಿತಿ ಒದಗಿಸುವ, ಮಕ್ಕಳಿಗೆ ಸ್ಥಳಾವಕಾಶ ಕಲ್ಪಿಸುವ, ಸುರಕ್ಷಿತ ಪ್ರಯಾಣದ ಆಮಿಷವೊಡ್ಡುವ ಆನ್‌ಲೈನ್‌ ಮಾಹಿತಿಗಳ ವಿರುದ್ಧ ಸಹಭಾಗಿ ಕಾರ್ಯಾಚರಣೆ ಕೈಗೊಳ್ಳಲಾಗುತ್ತದೆ ಎಂದು ಪ್ರಧಾನಿ ಕಚೇರಿ ಹೇಳಿದೆ.   

ADVERTISEMENT

‘ದೋಣಿಗಳನ್ನು (ವಲಸೆ ಬರುವವರುವನ್ನು) ತಡೆಯಬೇಕಿದ್ದರೆ ನಾವು ದುಷ್ಟರ ವ್ಯಾಪಾರ ಮಾದರಿಯನ್ನು ಮೂಲದಲ್ಲೇ ನಾಶಗೊಳಿಸಬೇಕಿದೆ‘ ಎಂದು ಪ್ರಧಾನಿ ರಿಷಿ ಸುನಕ್‌ ಹೇಳಿದ್ದಾರೆ. 

‘ಅಮಾಯಕರು ಕಾನೂನು ಬಾಹಿರವಾಗಿ ವಲಸೆ ಹೋಗಲು ಆಮಿಷವೊಡ್ಡುವ, ಅವರ ಜೀವವನ್ನು ಅಪಾಯಕ್ಕೆ ದೂಡುವವರ ಕೃತ್ಯಗಳಿಗೆ ನಮ್ಮ ಈ ಕ್ರಮದಿಂದ ಕಡಿವಾಣ ಬೀಳಿದೆ. ದುಷ್ಟರ ವಿರುದ್ಧದ ನಮ್ಮ ಹೋರಾಟವು ಸಾಮಾಜಿಕ ಮಾಧ್ಯಮಗಳ ಸಹಭಾಗತ್ವದಿಂದ ಇಮ್ಮಡಿಗೊಳ್ಳಲಿದೆ’ ಎಂದೂ ಸುನಕ್‌ ಹೇಳಿದ್ದಾರೆ.   

ಆದರೆ, ಸರ್ಕಾರದ ಈ ಕ್ರಮವನ್ನು ವಿರೋಧ ಪಕ್ಷ ಲೇಬರ್‌ ಪಾರ್ಟಿಯ ವಕ್ತಾರ ಇವೆಟ್‌ ಕೂಪರ್ ಟೀಕಿಸಿದ್ದಾರೆ. ‘ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ವಿಳಂಬವಾಗಿ, ಅತಿ ಚಿಕ್ಕ ಕ್ರಮಕ್ಕೆ ಮುಂದಾಗಿದೆ’ ಎಂದು ಹೇಳಿದ್ದಾರೆ. 

ಅಕ್ರಮ ವಲಸೆಯು ಬ್ರಿಟನ್‌ನ ಸಾರ್ವತ್ರಿಕ ಚುನಾವಣೆಯ ಚರ್ಚೆಯ ವಿಷಯವೂ ಆಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.