ಲಂಡನ್: ಭಾರತ ಹಾಗೂ ಬ್ರಿಟನ್ ಮಧ್ಯೆಯ ನಡೆಯುತ್ತಿರುವ ಮುಕ್ತ ವ್ಯಾಪಾರ ಒಪ್ಪಂದದ (ಎಫ್‌ಟಿಎ) ಮಾತುಕತೆ ಹಿನ್ನಲೆಯಲ್ಲಿ ಬ್ರಿಟನ್ ಕೈಗಾರಿಕೆ ಒಕ್ಕೂಟವು (ಸಿಬಿಐ) ಸೋಮವಾರ ತನ್ನ ಮೊದಲ ನಿಯೋಗವನ್ನು ಭಾರತಕ್ಕೆ ಕಳುಹಿಸಿದೆ.
ಮೂರು ದಿನಗಳ ಭೇಟಿಯಲ್ಲಿ ನಿಯೋಗವು ಮುಂಬೈ ಹಾಗೂ ನವದೆಹಲಿಗೆ ಭೇಟಿ ನೀಡಲಿದೆ. ಎಚ್‌ಎಸ್‌ಬಿಸಿ, ಐಸಿಐಸಿಐ ಬ್ಯಾಂಕ್, ಪೆರ್ನೋ ರಿಚಾ, ಟೈಡ್ ಆ್ಯಂಡ್ ವೈನ್ ಕಂಪೆನಿಗಳು ಈ ವೇಳೆ ಹಾಜರಿರುತ್ತವೆ. ಬ್ರಿಟನ್ ಹಾಗೂ ಭಾರತಕ್ಕೆ ಲಾಭದಾಯಕವಾಗಿರುವ ಕ್ಷೇತ್ರವನ್ನು ನಿಯೋಗವು ಕೇಂದ್ರೀಕರಿಸಲಿದೆ.
‘ಬ್ರಿಟನ್ ಹಾಗೂ ಭಾರತದ ಸಂಬಂಧವು ಗಟ್ಟಿಗೊಳ್ಳಲಿದೆ. ಆದ್ದರಿಂದ ಬ್ರಿಟಿಷ್ ಕೈಗಾರಿಕೆಗಳ ಒಕ್ಕೂಟವು ನಿಯೋಗವನ್ನು ಭಾರತಕ್ಕೆ ಕಳುಹಿಸಿರುವುದು ಉತ್ತಮ ವಿಚಾರವಾಗಿದೆ’ ಎಂದು ಅಂತರರಾಷ್ಟ್ರೀಯ ವ್ಯಾಪಾರ ಸಚಿವಾಲಯದ ವ್ಯಾಪಾರ ಯೋಜನೆಯ ಸಚಿವ ಗ್ರೆಗ್ ಹ್ಯಾಂಡ್ಸ್ ಹೇಳಿದ್ದಾರೆ.
‘2050ರ ಹೊತ್ತಿಗೆ 25 ಕೋಟಿ ಮಧ್ಯಮ ವರ್ಗದ ಗ್ರಾಹಕರನ್ನು ಹೊಂದಿ, ಮೂರನೇ ದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿ ಭಾರತವಿದೆ. ಆದ್ದರಿಂದ ನಮ್ಮೊಂದಿಗಿನ ಮುಕ್ತ ವ್ಯಾಪಾರ ಒಪ್ಪಂದವೂ ಭಾರತಕ್ಕೆ ಲಾಭದಾಯಕವಾಗಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.