ಲಂಡನ್ : ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ‘ಪಾರ್ಟಿಗೇಟ್’ ಹಗರಣದಲ್ಲಿ ಉದ್ದೇಶಪೂರ್ವಕವಾಗಿ ಸಂಸತ್ತಿನ ಹಾದಿ ತಪ್ಪಿಸಿದ್ದಾರೆ’ ಎಂಬ ಸದನ ಸಮಿತಿ ವರದಿಯನ್ನು ಬ್ರಿಟಿಷ್ ಸಂಸತ್ತು ಮಂಗಳವಾರ ಅಂಗೀಕರಿಸಿದೆ.
ಲಾಕ್‌ಡೌನ್ ವೇಳೆ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಸರ್ಕಾರಿ ಬಂಗಲೆಯಲ್ಲಿ ಔತಣಕೂಟ ಏರ್ಪಡಿಸಿದ್ದ ಆರೋಪವನ್ನು ಇವರು ಎದುರಿಸುತ್ತಿದ್ದಾರೆ. ಇದು, ಪಾರ್ಟಿಗೇಟ್ ಹಗರಣ ಎಂದೇ ಹೆಸರಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿ 59 ವರ್ಷದ ಬೋರಿಸ್ ಜಾನ್ಸನ್ ಅವರು ಕಳೆದ ವರ್ಷ ರಾಜೀನಾಮೆ ನೀಡಿದ್ದರು. ಸರ್ಕಾರದಿಂದಲೇ ಲಾಕ್‌ಡೌನ್ ನಿಯಮಗಳ ಉಲ್ಲಂಘನೆಯಾಗಿದೆ ಎಂಬುದನ್ನು ಸಂಸತ್ತಿನಲ್ಲಿ ಪ್ರಬಲವಾಗಿ ನಿರಾಕರಿಸಿದ್ದರು.
ವೆಸ್ಟ್ ಲಂಡನ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಅವರು ಈಗಾಗಲೇ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ವರದಿ ಅಂಗೀಕಾರವಾದ ಹಿನ್ನೆಲೆಯಲ್ಲಿ ಈಗ ಮಾಜಿ ಸಂಸದರಿಗೆ ಇರುವ ವಿಶೇಷ ಸವಲತ್ತುಗಳನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಾರೆ.
ಸದನ ಸಮಿತಿ ವರದಿ ಕುರಿತು ಸೋಮವಾರ ಸಂಸತ್ತಿನಲ್ಲಿ ಚರ್ಚೆ ನಡೆಯಿತು. ಹಲವು ಸದಸ್ಯರು ಮಾಜಿ ಪ್ರಧಾನಿಯ ನಡೆಯನ್ನು ಖಂಡಿಸಿದರು.
ಪ್ರಧಾನಿ ರಿಷಿ ಸುನಕ್ ಸೇರಿದಂತೆ ಕನ್ಸರ್ವೇಟಿವ್ ಪಕ್ಷದ ಹಲವು ಸದಸ್ಯರು ಚರ್ಚೆಯಲ್ಲಿ ಭಾಗವಹಿಸದಿರಲು ಹಾಗೂ ವರದಿ ಕುರಿತು ಮತಚಲಾಯಿಸದಿರಲು ನಿರ್ಧರಿಸಿದ್ದರು. ಲೇಬರ್ ಪಾರ್ಟಿಯ ಹಲವು ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
‘ದೇಶದ ಪ್ರಧಾನಿ ತನ್ನ ಅಭಿಪ್ರಾಯ ವ್ಯಕ್ತಪಡಿಸದಿರುವುದು, ಮತ ಚಲಾಯಿಸದೇ ಇರುವುದು ನಾಚಿಕೆಯ ಸಂಗತಿ. ನನ್ನ ಪ್ರಕಾರ ಇದು, ಕರ್ತವ್ಯ ಲೋಪವಲ್ಲದೆ ಮತ್ತೇನೂ ಅಲ್ಲ’ ಎಂದು ಲೇಬರ್ ಪಾರ್ಟಿಯ ಮುಖಂಡ ಜೆಸ್ ಫಿಲಿಪ್ ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.