ಲಂಡನ್ : ಛತ್ರಪತಿ ಶಿವಾಜಿ ಮಹಾರಾಜ್ ಅವರದ್ದು ಎನ್ನಲಾದ 17ನೇ ಶತಮಾನದ ಹುಲಿ ಉಗುರಿನ ವಿನ್ಯಾಸದ ಆಯುಧವನ್ನು ಮೂರು ವರ್ಷಗಳವರೆಗೆ ಭಾರತಕ್ಕೆ ನೀಡುವ ಸಲುವಾಗಿ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂ ಹಾಗೂ ಮಹಾರಾಷ್ಟ್ರ ಸರ್ಕಾರದ ನಡುವೆ ಮುಂದಿನವಾರ ಒಪ್ಪಂದ ನಡೆಯಲಿದೆ.
1659ರಲ್ಲಿ ಮರಾಠ ನಾಯಕ ಶಿವಾಜಿ ಮಹಾರಾಜ್ ಹುಲಿ ಉಗುರಿನ ರೀತಿಯ ಆಯುಧವನ್ನು (ವಾಘ್ ನಖ್) ಕೈಗೆ ಧರಿಸಿ ಬಿಜಾಪುರ ಸೇನೆಯ ಕಮಾಂಡರ್ ಅಫ್ಝಲ್ ಖಾನ್‌ನನ್ನು ಕೊಂದು ಹಾಕಿದ್ದರು. ಈ ಆಯುಧವು, ಸಾತಾರ ಜಿಲ್ಲೆಯಲ್ಲಿ ಅಧಿಕಾರಿಯಾಗಿದ್ದ ಈಸ್ಟ್ ಇಂಡಿಯಾ ಕಂಪನಿಯ ಜೇಮ್ಸ್ ಗ್ರಾಂಟ್ ಡಫ್ ವಶಕ್ಕೆ ಸೇರಿತ್ತು. ನಂತರ ಅವರ ವಂಶಸ್ಥರು ಅದನ್ನು ವಿಕ್ಟೋರಿಯಾ ಮತ್ತು ಆಲ್ಬರ್ಟ್ ವಸ್ತು ಸಂಗ್ರಹಾಲಯಕ್ಕೆ ಉಡುಗೊರೆಯಾಗಿ ನೀಡಿದ್ದರು ಎಂದು ನಂಬಲಾಗಿದೆ.
‘ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕದ 350ನೇ ವಾರ್ಷಿಕೋತ್ಸವ ಅಂಗವಾಗಿ ‘ಹುಲಿ ಉಗುರಿನ’ ಆಯುಧವನ್ನು ಭಾರತಕ್ಕೆ ನೀಡುತ್ತಿದ್ದೇವೆ. ಒಪ್ಪಂದಕ್ಕೆ ಸಹಿ ಹಾಕಲು ಆಗಮಿಸುವ ಮಹಾರಾಷ್ಟ್ರದ ನಿಯೋಗವನ್ನು ಬರಮಾಡಿಕೊಳ್ಳಲು ವಸ್ತುಸಂಗ್ರಹಾಲಯವು ಎದುರು ನೋಡುತ್ತಿದೆ’ ಎಂದು ಮ್ಯೂಸಿಯಂ ವಕ್ತಾರರೊಬ್ಬರು ತಿಳಿಸಿದ್ದಾರೆ.
ಮಂಗಳವಾರ ಹಸ್ತಾಂತರಕ್ಕೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿ ಮಾಡುವ ನಿರೀಕ್ಷೆ ಇದೆ. ನಂತರ ಮೂರು ವರ್ಷಗಳವರೆಗೆ ಅದನ್ನು ಭಾರತಕ್ಕೆ ಹಸ್ತಾಂತರಿಸಲಾಗುತ್ತದೆ. ಬಳಿಕ ಅದನ್ನು ಸಾತಾರದ ಛತ್ರಪತಿ ಶಿವಾಜಿ ಮಹಾರಾಜ್ ವಸ್ತುಸಂಗ್ರಹಾಲಯ, ನಾಗ್ಪುರದ ಕೇಂದ್ರೀಯ ವಸ್ತು ಸಂಗ್ರಹಾಲಯ, ಕೊಲ್ಹಾಪುರದ ಲಕ್ಷ್ಮಿ ವಿಲಾಸ ಅರಮನೆ ಮತ್ತು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇಡಲಾಗುತ್ತದೆ.
ಆದಿತ್ಯ ಠಾಕ್ರೆ ಪ್ರಶ್ನೆ
ಈ ಮಧ್ಯೆ ‘ಹುಲಿ ಉಗುರಿನ ಆಯುಧ ನಿಜಕ್ಕೂ ಶಿವಾಜಿ ಮಹಾರಾಜ್ ಅವರದ್ದೇ ಅಥವಾ ಕೇವಲ ಅವರ ಕಾಲದ್ದೇ’ ಎಂದು ಶಿವಸೇನಾ (ಉದ್ಧವ್ ಬಣ) ನಾಯಕ ಆದಿತ್ಯ ಠಾಕ್ರೆ ಪ್ರಶ್ನಿಸಿದ್ದಾರೆ.
‘ಆಯುಧವು ಶಿವಾಜಿ ಅವರದ್ದು ಎನ್ನಲು ಯಾವುದೇ ಬಲವಾದ ಸಾಕ್ಷ್ಯಗಳಿಲ್ಲ ಎಂದು ವಸ್ತುಸಂಗ್ರಹಾಲಯ ಹೇಳಿದೆ. ಇದು ಲಕ್ಷಾಂತರ ಜನರಿಗೆ ಸಂಬಂಧಿಸಿದ ಭಾವನಾತ್ಮಕ ವಿಷಯ. ಸರ್ಕಾರ ಜನರ ಭಾವನೆಯೊಂದಿಗೆ ಆಟವಾಡಬಾರದು’ ಎಂದು ಅವರು ಹೇಳಿದ್ದಾರೆ.
ಹಿರಿಯ ಎನ್‌ಸಿಪಿ ನಾಯಕ ಜಿತೇಂದ್ರ ಅವ್ಹಾದ್ ಅವರು ಇತಿಹಾಸಕಾರ ಇಂದ್ರಜಿತ್ ಸಾವಂತ್ ಅವರ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಸಾವಂತ್ ಅವರು, ‘ಲಂಡನ್ ಮ್ಯೂಸಿಯಂನಲ್ಲಿ ಇರುವ ಆಯುಧವು ಶಿವಾಜಿ ಅವರು ಬಳಸಿದ್ದ ಆಯುಧವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಆಳವಾದ ಸಂಶೋಧನೆಯ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.