ಲಂಡನ್: ಐರೋಪ್ಯ ಒಕ್ಕೂಟದಿಂದ ಹೊರಬರುವ ಐತಿಹಾಸಿಕ ಬ್ರೆಕ್ಸಿಟ್ ಒಪ್ಪಂದಕ್ಕೆ ಬ್ರಿಟನ್ ಸಂಸತ್ತಿನಲ್ಲಿ ಸೋಲಾಗಿದೆ.ಪ್ರಧಾನಿ ತೆರೇಸಾ ಮೇ ಅವರ ಈ ಒಪ್ಪಂದವನ್ನು ಅನುಮೋದಿಸಿ 202 ಮಂದಿ ಮತ ಚಲಾಯಿಸಿದ್ದು, 432 ಮಂದಿ ಇದನ್ನು ವಿರೋಧಿಸಿ ಮತ ಚಲಾಯಿಸಿದ್ದಾರೆ.
5 ದಿನಗಳ ಕಾಲ ನಡೆದ ಸುದೀರ್ಘ ಚರ್ಚೆಯ ನಂತರ ಹೌಸ್ ಆಫ್ ಕಾಮನ್ಸ್ ನಲ್ಲಿ ಬ್ರೆಕ್ಸಿಟ್ ಒಪ್ಪಂದದ ಕುರಿತಾದ ವಿಧೇಯಕವನ್ನು ಮಂಗಳವಾರ ಮತಕ್ಕೆ ಹಾಕಲಾಗಿತ್ತು.ಐರ್‌ಲೆಂಡ್ ಗಡಿಪ್ರದೇಶದಲ್ಲಿ ತಪಾಸಣೆ ಸೇರಿದಂತೆ ಇತರ ವಿಷಯಗಳ ಬಗ್ಗೆ ಮೇ ಅವರ ಕನ್ಸರ್‌ವೇಟಿವ್ ಪಕ್ಷದ ಕೆಲವು ಸದಸ್ಯರೂ ಪ್ರತಿಭಟನೆ ವ್ಯಕ್ತ ಪಡಿಸಿ ಮತ ಚಲಾಯಿಸಿದ್ದರು.
ಬ್ರೆಕ್ಸಿಟ್ ಒಪ್ಪಂದದ ಈ ವಿಧೇಯಕವನ್ನು ಡಿಸೆಂಬರ್‌ನಲ್ಲಿಯೇ ಮತಕ್ಕೆ ಹಾಕಬೇಕಿತ್ತು. ಆದರೆ ಹೌಸ್ ಆಫ್ ಕಾಮನ್ಸ್ ನಲ್ಲಿ ಪ್ರತಿಪಕ್ಷದ ನಡೆಯಿಂದ ಸೋಲಾಗುವ ಭೀತಿ ಇದ್ದುದರಿಂದ ಮೇ ಈ ವಿಧೇಯಕದ ಮತದಾನವನ್ನು ಮುಂದೂಡಿದ್ದರು.
ದೇಶದ ಒಳಿತಿಗಾಗಿ ಈ ವಿಧೇಯಕ ಪರ ಮತ ಚಲಾಯಿಸುವಂತೆ ಮೇ ಸಂಸತ್ ಸದಸ್ಯರಲ್ಲಿ ಮನವಿ ಮಾಡಿದ್ದರು.ಒಂದು ವೇಳೆ ಬ್ರೆಕ್ಸಿಟ್ ಒಪ್ಪಂದಕ್ಕೆ ಸಂಸತ್‌ನಲ್ಲಿ ಅನುಮೋದನೆ ದೊರೆಯದಿದ್ದರೆ ಅದು ನಮ್ಮ ಪ್ರಜಾಪ್ರಭುತ್ವದ ದೊಡ್ಡ ದುರಂತ ಮತ್ತು ಕ್ಷಮಿಸಲಾಗದ ನಂಬಿಕೆ ದ್ರೋಹ ಆಗಲಿದೆ ಎಂಬ ಎಚ್ಚರಿಕೆ ನೀಡಿದ್ದರು ಮೇ.
ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವ ತೀರ್ಮಾನವನ್ನು ಕಳೆದ ವರ್ಷ ಮಾರ್ಚ್ 29ರಂದು ತೆಗೆದುಕೊಳ್ಳಲಾಗಿದೆ. ಆದರೆ ಇದಕ್ಕೆ ಬ್ರಿಟನ್ ಸಂಸತ್ಇದುವರೆಗೂ ಅಂಗೀಕಾರದ ಮುದ್ರೆ ಒತ್ತಿಲ್ಲ.
ಏತನ್ಮಧ್ಯೆ, ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದಾಗಿ ವಿಪಕ್ಷ ಲೇಬರ್ ಪಾರ್ಟಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.