ಲಂಡನ್: ಬ್ರಿಟಿನ್ ಪ್ರಧಾನಿ ರಿಷಿ ಸುನಕ್ ಅವರು ಪ್ರಯಾಣದ ವೇಳೆ ವಿಡಿಯೊ ಚಿತ್ರೀಕರಿಸಲೆಂದು ಕಾರಿನ ಸೀಟ್ ಬೆಲ್ಟ್ ಅನ್ನು ತೆಗೆದಿದ್ದು, ವಿವಾದಕ್ಕೆ ಗುರಿಯಾಗಿದ್ದಾರೆ. ಸೀಟ್ ಬೆಲ್ಟ್ ತೆಗೆದಿದ್ದು ತಪ್ಪೆಂದು ಒಪ್ಪಿಕೊಂಡಿರುವ ಸುನಕ್ ಕ್ಷಮೆಯನ್ನೂ ಕೋರಿದ್ದಾರೆ.
‘ಅವರು ತಮ್ಮ ಸೀಟ್ ಬೆಲ್ಟ್ ಅನ್ನು ಕ್ಷಣಕಾಲ ತೆಗೆದಿದ್ದರು. ತಾವು ತಪ್ಪು ಮಾಡಿದ್ದಾಗಿ ಅವರಿಗೆ ಅನಿಸಿದೆ. ಅದನ್ನು ಒಪ್ಪಿಕೊಂಡಿದ್ದಾರೆ’ ಎಂದು ಪ್ರಧಾನಿ ಕಚೇರಿಯ ವಕ್ತಾರರು ಗುರುವಾರ ಸ್ಪಷ್ಟನೆ ನೀಡಿದ್ದಾರೆ.
ಬ್ರಿಟನ್‌ನಲ್ಲಿ ವೈದ್ಯಕೀಯ ಕಾರಣಗಳನ್ನು ಹೊರತುಪಡಿಸಿ, ಕಾರಿನ ಸೀಟ್‌ಬೆಲ್ಟ್ ಧರಿಸದವರಿಗೆ ಸ್ಥಳದಲ್ಲೇ 100 ಪೌಂಡ್‌ಗಳ (₹10 ಸಾವಿರಕ್ಕೂ ಹೆಚ್ಚು) ದಂಡ ವಿಧಿಸಲಾಗುತ್ತದೆ. ಪ್ರಕರಣ ನ್ಯಾಯಾಲಯಕ್ಕೆ ಹೋದರೆ ದಂಡ 500 ಪೌಂಡ್‌ಗಳಿಗೆ ಹೆಚ್ಚಲಿದೆ.
‘ಅದು ತಪ್ಪು. ಸಣ್ಣ ಕ್ಲಿಪ್ ಅನ್ನು ಚಿತ್ರೀಕರಿಸಲು ಪ್ರಧಾನಿ ತಮ್ಮ ಸೀಟ್ ಬೆಲ್ಟ್ ಅನ್ನು ತೆಗೆದಿದ್ದಾರೆ. ತಮ್ಮಿಂದ ತಪ್ಪಾಗಿದೆ ಎಂದು ಸಂಪೂರ್ಣವಾಗಿ ಒಪ್ಪಿಕೊಂಡಿದ್ದಾರೆ. ಅದಕ್ಕಾಗಿ ಕ್ಷಮೆಯಾಚಿಸಿದ್ದಾರೆ’ ಎಂದು ಸುನಕ್ ಅವರ ವಕ್ತಾರರು ತಿಳಿಸಿದ್ದಾರೆ.
‘ಪ್ರತಿಯೊಬ್ಬರೂ ಸೀಟ್ ಬೆಲ್ಟ್ ಧರಿಸಬೇಕು ಎಂಬುದನ್ನು ಪ್ರಧಾನಿಯೂ ನಂಬುತ್ತಾರೆ’ ಎಂದು ವಕ್ತಾರರು ಹೇಳಿದ್ದಾರೆ.
ದೇಶದಾದ್ಯಂತ 100ಕ್ಕೂ ಹೆಚ್ಚು ಯೋಜನೆಗಳಿಗೆ ಧನಸಹಾಯ ಒದಗಿಸಲು ತಮ್ಮ ಸರ್ಕಾರ ರೂಪಿಸುತ್ತಿರುವ ಹೊಸ ಯೋಜನೆಯನ್ನು ಪ್ರಚಾರ ಮಾಡಲು ಸುನಕ್ ವಿಡಿಯೊವೊಂದನ್ನು ಚಿತ್ರೀಕರಿಸಿದ್ದಾರೆ. ಕ್ಯಾಮೆರಾ ಕಡೆ ತಿರುಗಿ ಮಾತನಾಡುತ್ತಿರುವಾಗಲೇ ಪೋಲೀಸ್ ಮೋಟರ್‌ಬೈಕ್‌ಗಳು ಅವರ ಕಾರಿಗೆ ಬೆಂಗಾವಲಾಗಿ ಬರುವುದೂ ವಿಡಿಯೊದಲ್ಲಿದೆ.
ಈ ಘಟನೆಯನ್ನು ಬ್ರಿಟನ್ ವಿರೋಧ ಪಕ್ಷ ಲೇಬರ್ ಪಾರ್ಟಿ ತನ್ನ ಟೀಕೆಗೆ ಬಳಸಿಕೊಂಡಿದೆ. ‘ಪ್ರಧಾನಿ ರಿಷಿ ಸುನಕ್ ಅವರಿಗೆ ತಮ್ಮ ಸೀಟ್ ಬೆಲ್ಟ್ ಹೇಗೆ ಹಾಕಿಕೊಳ್ಳಬೇಕೆಂದು ಗೊತ್ತಿಲ್ಲ. ಡೆಬಿಟ್ ಕಾರ್ಡ್, ರೈಲ್ವೆ ಪ್ರಯಾಣ, ದೇಶದ ಆರ್ಥಿಕತೆಯನ್ನು ಹೇಗೆ ನಿರ್ವಹಿಸಬೇಕೆಂದು ಗೊತ್ತಿಲ್ಲ. ಈ ಪಟ್ಟಿ ಪ್ರತಿದಿನ ಬೆಳೆಯುತ್ತಲೇ ಇದೆ. ಇದಕ್ಕೆ ಅಂತ್ಯವಿಲ್ಲದಾಗಿದೆ’ ಎಂದು ಲೇಬರ್ ಪಾರ್ಟಿಯ ವಕ್ತಾರ ವ್ಯಂಗ್ಯವಾಡಿದ್ದಾರೆ.
ಇದಕ್ಕೂ ಮೊದಲು, ರಿಷಿ ಸುನಕ್ ಅವರು ತಮ್ಮ ಪ್ರಯಾಣಕ್ಕೆ ಬ್ರಿಟನ್‌ನ ವಾಯುಸೇನೆಯ ಜೆಟ್ ಬಳಸಿ ಟೀಕೆಗೆ ಗುರಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.