ಲಂಡನ್: ಅಕ್ರಮ ವಲಸಿಗರನ್ನು ಗಡೀಪಾರು ಮಾಡುವ ಸರ್ಕಾರದ ನೀತಿ ಕುರಿತಂತೆ ಬಲವಾದ ಭಿನ್ನಾಭಿಪ್ರಾಯ ಹೊಂದಿದ್ದ ಬ್ರಿಟನ್‌ನ ವಲಸೆ ಸಚಿವ ರಾಬರ್ಟ್ ಜೆನ್ರಿಕ್ ಅವರು ಪ್ರಧಾನಿ ರಿಷಿ ಸುನಕ್ ಅವರ ಕ್ಯಾಬಿನೆಟ್‌ಗೆ ರಾಜೀನಾಮೆ ನೀಡಿದ್ದಾರೆ.
ಈ ಮೂಲಕ ಸುನಕ್ ಆಪ್ತ ಬಳಗದಲ್ಲಿದ್ದ ಸಚಿವರೊಬ್ಬರು ಸಂಪುಟ ತೊರೆದಂತಾಗಿದೆ.
ಜೆನ್ರಿಕ್ ರಾಜೀನಾಮೆಯಿಂದ ನಿರಾಶೆಗೊಂಡಿದ್ದೇನೆ ಎಂದು ಹೇಳಿರುವ ರಿಷಿ ಸುನಕ್, ರಾಜೀನಾಮೆಗೆ ಅವರು ನೀಡಿರುವ ಕಾರಣವು ತಪ್ಪುಗ್ರಹಿಕೆಯಿಂದ ಕೂಡಿದೆ ಎಂದಿದ್ದಾರೆ.
‘ವಲಸೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ನಾನು ಪ್ರಧಾನ ಮಂತ್ರಿಗೆ ಪತ್ರ ಬರೆದಿದ್ದು ಬಹಳ ದುಃಖವಾಗಿದೆ’ ಎಂದು ಎಕ್ಸ್ ಪೋಸ್ಟ್‌ನಲ್ಲಿ ಜೆನ್ರಿಕ್ ತಿಳಿಸಿದ್ದಾರೆ.
‘ವಲಸೆ ಕುರಿತ ಸರ್ಕಾರದ ನೀತಿಯ ಬಗ್ಗೆ ನಾನು ಅಂತಹ ಬಲವಾದ ಭಿನ್ನಾಭಿಪ್ರಾಯಗಳನ್ನು ಹೊಂದಿರುವಾಗ ಸಚಿವ ಸ್ಥಾನದಲ್ಲಿ ಮುಂದುವರಿಯಲು ಸಾಧ್ಯವಿಲ್ಲ’ ಎಂದೂ ಅವರು ಹೇಳಿದ್ದಾರೆ.
ಸರ್ಕಾರವು ಅಂತರರಾಷ್ಟ್ರೀಯ ಕಾನೂನಿನ ವಿವಾದಿತ ವ್ಯಾಖ್ಯಾನಗಳಿಗಿಂತ ರಾಷ್ಟ್ರೀಯ ಹಿತಾಸಕ್ತಿಗಳ ಬಗ್ಗೆ ಗಮನ ಹರಿಸುವ ಅಗತ್ಯವಿದೆ ಎಂದು ಜೆನ್ರಿಕ್ ಹೇಳಿದರು.
ಹೊಸ ಮಸೂದೆಯು ಬ್ರಿಟನ್ ಸರ್ಕಾರವು ಮುಂದಿಟ್ಟಿರುವ ಅಕ್ರಮ ವಲಸೆಯ ವಿರುದ್ಧದ ಕಠಿಣ ಕ್ರಮವಾಗಿದೆ ಎಂದು ರಿಷಿ ಸುನಕ್ ಪ್ರತಿವಾದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.