ಲಂಡನ್: ಇಸ್ರೇಲ್ ಮೇಲೆ ಇರಾನ್‌ನ ಕ್ಷಿಪಣಿ ದಾಳಿ ನಡೆದ ಹಿನ್ನೆಲೆಯಲ್ಲಿ ಸಂಯಮದಿಂದ ವರ್ತಿಸುವಂತೆ ಮತ್ತು ಶಾಂತಿ ಕಾಪಾಡಿಕೊಳ್ಳುವಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಕರೆ ನೀಡಿದ್ದಾರೆ. ಈ ವಿಚಾರವಾಗಿ ಮಾತುಕತೆಗೆ ಬ್ರಿಟನ್‌ನ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಕ್ಯಾಮರೂನ್ ಅವರು ಟೆಲ್ ಅವೀವ್‌ಗೆ ಬಂದಿಳಿದಿದ್ದಾಗಿ ತಿಳಿಸಿದ್ದಾರೆ.
ಬೆಂಜಮಿನ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ರಿಷಿ ಸುನಕ್, ಪ್ರಾದೇಶಿಕ ಸ್ಥಿರತೆಗೆ ಬ್ರಿಟನ್‌ನ ಸ್ಥಿರವಾದ ಬೆಂಬಲ ಬೇಕಿದೆ ಎಂದು ಪುನರುಚ್ಚರಿಸಿದರು. ಅಲ್ಲದೇ, ಇರಾನ್ ತಪ್ಪು ಹೆಜ್ಜೆ ಇಟ್ಟಿದ್ದು, ಜಾಗತಿಕ ವೇದಿಕೆಯಲ್ಲಿ ಪ್ರತ್ಯೇಕವಾಗಿ ಉಳಿದಂತಾಗಿದೆ ಎಂದರು.
ಬ್ರಿಟನ್‌ನ ತ್ವರಿತ ಮತ್ತು ನೇರವಾದ ನುಡಿಯ ಬೆಂಬಲಕ್ಕಾಗಿ ಬೆಂಜಮಿನ್ ಅವರು ಧನ್ಯವಾದ ತಿಳಿಸಿದರು ಎನ್ನಲಾಗಿದೆ.
‘ಇರಾನ್‌ನ ನಡೆಯನ್ನು ಜಿ7 ರಾಷ್ಟ್ರಗಳು ಖಂಡಿಸಿವೆ. ಅದರ ಹೊರತಾಗಿಯೂ ಇರಾನ್ ಇದೇ ಧೋರಣೆಯನ್ನು ಮುಂದುವರಿಸಿದರೆ ಮಧ್ಯಪ್ರಾಚ್ಯದಲ್ಲಿ ಅಭದ್ರತೆ ಹೆಚ್ಚಾಗಲಿದೆ. ಹೀಗಾಗಿ ಶಾಂತಿ ಕಾಪಾಡಿಕೊಳ್ಳಲು ಇದು ಸಕಾಲವಾಗಿದೆ. ಗಾಜಾದಲ್ಲಿ ನಡೆಯುತ್ತಿರುವ ಇಸ್ರೇಲ್–ಹಮಾಸ್ ಸಂಘರ್ಷದ ಕುರಿತು ಮಾನವೀಯ ಬಿಕ್ಕಟ್ಟಿನ ಬಗ್ಗೆ ತೀವ್ರ ಕಾಳಜಿ ಹೊಂದಿದ್ದೇವೆ’ ಎಂದು ರಿಷಿ ಹೇಳಿದ್ದಾರೆ ಎಂದು ಬ್ರಿಟನ್ ಪ್ರಧಾನಿ ಕಚೇರಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.