ಲಂಡನ್: ಬ್ರೆಜಿಲ್‌ನಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿರುವ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್, ಪ್ರಸಕ್ತ ಸಾಲಿನಲ್ಲೇ ಮುಕ್ತ ವ್ಯಾಪಾರ ಒಪ್ಪಂದಕ್ಕಾಗಿ (ಎಫ್‌ಟಿಎ) ಮಾತುಕತೆಯನ್ನು ಪುನರಾಂಭಿಸುವುದಾಗಿ ಘೋಷಿಸಿದ್ದಾರೆ.
'ವ್ಯಾಪಾರ ಒಪ್ಪಂದ, ಭದ್ರತೆ, ಶಿಕ್ಷಣ, ತಂತ್ರಜ್ಞಾನ ಮತ್ತು ಹವಾಮಾನ ಬದಲಾವಣೆಯಂತಹ ಕ್ಷೇತ್ರಗಳಲ್ಲಿ ಸಮಗ್ರ ಸಹಕಾರ ಒಳಗೊಂಡಂತೆ ಭಾರತದೊಂದಿಗೆ ಹೊಸ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಯಸುತ್ತದೆ' ಎಂದು ಮೋದಿ ಅವರೊಂದಿಗಿನ ಸಭೆಯ ಬಳಿಕ ಬ್ರಿಟನ್ ಪ್ರಧಾನಿ ಕಾರ್ಯಾಲಯ ಪ್ರಕಟಿಸಿದೆ.
'ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿರುವ ಭಾರತ, ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆದು ಬರುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ. ಭಾರತದೊಂದಿಗೆ ಸಮಗ್ರ ವಾಣಿಜ್ಯ ಒಪ್ಪಂದ ಮಾತುಕತೆ ಪುನರಾರಂಭಿಸಲು ಬ್ರಿಟನ್ ಬದ್ಧವಾಗಿದೆ' ಎಂದು ಪ್ರಧಾನಿ ಕೀರ್ ಸ್ಟಾರ್ಮರ್ ವಕ್ತಾರರು ತಿಳಿಸಿದ್ದಾರೆ.
'ಭಾರತದೊಂದಿಗಿನ ವ್ಯಾಪಾರ ಒಪ್ಪಂದವು ಬ್ರಿಟನ್‌ನಲ್ಲಿ ಉದ್ಯೋಗ ಸೃಷ್ಟಿ ಹಾಗೂ ಸಮೃದ್ಧಿಗೆ ಕಾರಣವಾಗಲಿದೆ. ಆ ಮೂಲಕ ಬೆಳವಣಿಗೆಯತ್ತ ಮತ್ತೊಂದು ಹೆಜ್ಜೆ ಇಡಲಾಗುತ್ತದೆ' ಎಂದು ಬ್ರಿಟನ್ ಪ್ರಧಾನಿ ಹೇಳಿಕೆಯನ್ನು ಅಲ್ಲಿನ ಕಾರ್ಯಾಲಯ ಪ್ರಕಟಿಸಿದೆ.
ಬ್ರಿಟನ್ ಪ್ರಧಾನಿ ಅವರೊಂದಿಗಿನ ಮಾತುಕತೆಯನ್ನು 'ಅತ್ಯಂತ ಫಲಪ್ರದಾಯಕ' ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.
'ಬ್ರಿಟನ್ ಜೊತೆಗಿನ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವಕ್ಕೆ ಭಾರತವು ಹೆಚ್ಚಿನ ಆದ್ಯತೆಯನ್ನು ಕಲ್ಪಿಸುತ್ತದೆ. ಮುಂಬರುವ ವರ್ಷಗಳಲ್ಲಿ ತಂತ್ರಜ್ಞಾನ, ಹಸಿರು ಇಂಧನ, ಭದ್ರತೆ, ನಾವೀನ್ಯತೆ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ನಿಕಟವಾಗಿ ಕೆಲಸ ಮಾಡಲು ಉತ್ಸುಕರಾಗಿದ್ದೇವೆ. ವಾಣಿಜ್ಯ ಜತೆಗೆ ಸಾಂಸ್ಕೃತಿಕ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲು ಬಯಸುತ್ತೇವೆ' ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.