ಲಂಡನ್: ಸರ್ಕಾರದ ಬಜೆಟ್‌ನಿಂದ ಆರ್ಥಿಕ ನೆರವು ಪಡೆದು ಶಿಶುಪಾಲನಾ ಸೇವೆ ಒದಗಿಸುವ ಏಜೆನ್ಸಿಯಲ್ಲಿ ತನ್ನ ಪತ್ನಿ ಅಕ್ಷತಾ ಮೂರ್ತಿ ಹೊಂದಿರುವ ಷೇರುಗಳನ್ನು ಘೋಷಿಸುವಲ್ಲಿ ನಿರ್ಲಕ್ಷ್ಯವಹಿಸಿದ ಆರೋಪ ಹೊತ್ತಿದ್ದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು, ಕೊನೆಗೂ ಸಂಸತ್‌ನ ಕಣ್ಗಾವಲು ಸಮಿತಿ ಮುಂದೆ ಕ್ಷಮೆಯಾಚಿಸಿದ್ದಾರೆ.
ಸರ್ಕಾರದ ನೆರವು ಪಡೆಯುವ ಆರು ಏಜೆನ್ಸಿಗಳ ಪೈಕಿ ‘ಕೋರು ಕಿಡ್ಸ್’ ಕೂಡ ಒಂದಾಗಿದೆ. ಅಕ್ಷತಾ ಇದರಲ್ಲಿ ಷೇರು ಹೊಂದಿದ್ದಾರೆ. ಆದರೆ, ಇದರ ಘೋಷಣೆ ಮಾಡುವಲ್ಲಿ ರಿಷಿ ಅಚಾತುರ್ಯ ಎಸಗಿದ್ದ ಬಗ್ಗೆ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಸಂಸತ್‌ನ ಕಣ್ಗಾವಲು ಸಮಿತಿಯ ಕಮಿಷನರ್ ಡೇನಿಯಲ್ ಗ್ರೀನ್‌ಬರ್ಗ್ ತನಿಖೆ ಆರಂಭಿಸಿದ್ದರು.
ರಿಷಿ ತಪ್ಪು ಎಸಗಿರುವುದು ಬುಧವಾರ ಬಿಡುಗಡೆಯಾಗಿರುವ ತನಿಖಾ ವರದಿಯಲ್ಲಿ ಬಯಲಾಗಿದೆ. ಮುಂದಿನ ನಿರ್ಧಾರಕ್ಕಾಗಿ ಇದನ್ನು ಸಂಸತ್‌ನ ಕೆಳಮನೆಗೆ ಸಲ್ಲಿಸಲಾಗಿದೆ.
‘ನನ್ನ ಪತ್ನಿಯ ಷೇರುಗಳ ಬಗ್ಗೆ ವಿವರ ನೀಡುವಲ್ಲಿ ನಿಯಮಗಳ ಉಲ್ಲಂಘನೆಯಾಗಿರುವುದು ನಿಜ. ಇದಕ್ಕೆ ಕ್ಷಮೆ ಕೋರುತ್ತೇನೆ. ತಪ್ಪು ಸರಿಪಡಿಸಿಕೊಳ್ಳುವಂತೆ ಕಮಿಷನರ್ ಸಲ್ಲಿಸಿರುವ ಪ್ರಸ್ತಾವವನ್ನೂ ಒಪ್ಪಿಕೊಳ್ಳುತ್ತೇನೆ. ಇದನ್ನು ಮರುಪ್ರಶ್ನಿಸುವ ಪ್ರಮೇಯವೇ ಇಲ್ಲ’ ಎಂದು ಸಮಿತಿಗೆ ರಿಷಿ ಪತ್ರ ಬರೆದಿದ್ದಾರೆ.
‘ಮಾರ್ಚ್ 28ರಂದು ಸಂಸತ್‌ನ ಸಾಮಾನ್ಯ ಆಯ್ಕೆ ಸಮಿತಿಯಿಂದ ನಡೆದ ವಿಚಾರಣೆಯಲ್ಲೂ ನಾನು ಮಂಡಿಸಿದ ಅಭಿಪ್ರಾಯವನ್ನು ಸಮ್ಮತಿಸಿದ್ದಕ್ಕೆ ಆಭಾರಿಯಾಗಿದ್ದೇನೆ. ಸರ್ಕಾರದ ನೀತಿ ಮತ್ತು ಕೋರು ಕಿಡ್ಸ್ ನಡುವಿನ ಆರ್ಥಿಕ ನೆರವಿನ ಬಗ್ಗೆ ನನಗೆ ಅರಿವು ಇರಲಿಲ್ಲ. ಆರೋಪ ಕೇಳಿ ಬಂದಾಗಲಷ್ಟೇ ಇದು ನನ್ನ ಗಮನಕ್ಕೆ ಬಂದಿದೆ’ ಎಂದು ವಿವರಿಸಿದ್ದಾರೆ.
ಸದನ ಅಥವಾ ಅದರ ಸಮಿತಿಗಳ ಮುಂದೆ ಸದಸ್ಯರು ಆಸ್ತಿ ಹಾಗೂ ಇತರೆ ಆದಾಯ ಮೂಲಗಳ ಬಗ್ಗೆ ಘೋಷಿಸುವಾಗ ಮುಕ್ತವಾಗಿರಬೇಕು ಎಂದು ಬ್ರಿಟನ್‌ನ ಸಂಸತ್ ನಿಯಮಗಳು ಹೇಳುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.