ಲಂಡನ್: ಉತ್ತರ ಐರ್ಲೆಂಡ್‌ನಲ್ಲಿ ಸುದೀರ್ಘ 30 ವರ್ಷಗಳ ಹಿಂಸಾತ್ಮಕ ಸಂಘರ್ಷವನ್ನು ಕೊನೆಗೊಳಿಸಿದ 1998ರ ಬೆಲ್‌ಫಾಸ್ಟ್ (ಗುಡ್ ಫ್ರೈಡೆ) ಒಪ್ಪಂದಕ್ಕೆ 25 ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಂದಿನವಾರ ಉತ್ತರ ಐರ್ಲೆಂಡ್‌ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಭೇಟಿ ನೀಡುತ್ತಿದ್ದು, ಅವರನ್ನು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಸ್ವಾಗತಿಸಲಿದ್ದಾರೆ ಎಂದು ಡೌನಿಂಗ್ ಸ್ಟ್ರೀಟ್ ಭಾನುವಾರ ತಿಳಿಸಿದೆ.
ಮಂಗಳವಾರ ಸಂಜೆ ಬ್ರಿಟನ್‌ಗೆ ಆಗಮಿಸಲಿರುವ ಬೈಡನ್ ಅವರನ್ನು ಸುನಕ್ ಏರ್ ಫೋರ್ಸ್ ಒನ್‌ನಲ್ಲಿ ಭೇಟಿ ಆಗಲಿದ್ದಾರೆ. ನಂತರ ಉಭಯ ದೇಶಗಳ ನಾಯಕರು ದ್ವಿಪಕ್ಷೀಯ ಮಾತುಕತೆ ಸೇರಿದಂತೆ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಬ್ರಿಟಿಷ್ ಪ್ರಧಾನಿ ಟೋನಿ ಬ್ಲೈರ್ ಮತ್ತು ಐರಿಷ್ ಪ್ರಧಾನಿ ಬೆರ್ಟಿ ಅಹೆರ್ನ್ ಅವರು 1998 ಏಪ್ರಿಲ್ 10ರಂದು ಒಪ್ಪಂಕ್ಕೆ ಸಹಿ ಹಾಕಿದ್ದರು. ಉತ್ತರ ಐರ್ಲೆಂಡ್ ಮತ್ತು ರಿಪಬ್ಲಿಕನ್ ಐರ್ಲೆಂಡ್‌ನಲ್ಲಿ ಸಾರ್ವಜನಿಕ ಮತಕ್ಕೆ ಹಾಕಿ ಒಪ್ಪಂದವನ್ನು ಅಂಗೀಕರಿಸಲಾಗಿತ್ತು. ಈ ಒಪ್ಪಂದದ ಹಿಂದೆ ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ಮಹತ್ವದ ಪಾತ್ರ ವಹಿಸಿದ್ದರು.
1921ರಲ್ಲಿ ಅಸ್ತಿತ್ವಕ್ಕೆ ಬಂದ ಉತ್ತರ ಐರ್ಲೆಂಡ್, ಬ್ರಿಟನ್ ಆಳ್ವಿಕೆಗೆ ಒಳಪಟ್ಟಿದೆ. ಐರ್ಲೆಂಡ್‌ನ ಉಳಿದ ಭಾಗ ಸ್ವತಂತ್ರ ದೇಶವಾಗಿದೆ. ಉತ್ತರ ಐರ್ಲೆಂಡ್ ಬ್ರಿಟನ್ ಭಾಗವಾಗಿಯೇ ಇರಬೇಕೆಂದು ಒಕ್ಕೂಟವಾದಿಗಳು ಪ್ರತಿಪಾದಿಸಿದರೆ, ರಿಪಬ್ಲಿಕ್ ಆಫ್ ಐರ್ಲೆಂಡ್ ಭಾಗವಾಗಬೇಕೆಂದು ರಾಷ್ಟ್ರೀಯ ವಾದಿಗಳು ಪ್ರತಿಪಾದಿಸಿದ್ದರು. 1960ರಿಂದ ಎರಡೂ ಗುಂಪುಗಳು ಬಾಂಬ್ ಮತ್ತು ಗುಂಡಿನ ದಾಳಿ ನಡೆಸುತ್ತಿದ್ದವು. ಗುಡ್‌ಫ್ರೈಡೆ ಒಪ್ಪಂದವು ಈ ಪ್ರದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡಿತ್ತು.
ಒಪ್ಪಂದದಲ್ಲಿ ಸಮುದಾಯಗಳ ನಡುವೆ ಸಹಕಾರ ಮತ್ತು ಉತ್ತರ ಐರ್ಲೆಂಡ್‌ನಲ್ಲಿ ಒಕ್ಕೂಟವಾದಿಗಳು ಮತ್ತು ರಾಷ್ಟ್ರೀಯವಾದಿಗಳನ್ನು ಪ್ರತಿನಿಧಿಸುವ ಹೊಸ ಸರ್ಕಾರ ರಚನೆಯ ಅಂಶಗಳಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.