ಲಂಡನ್: ಕೊರೊನಾ ವೈರಸ್ (ಕೋವಿಡ್–19)ಅನ್ನು ಎದುರಿಸಲು ಸಂಭಾವ್ಯ ಲಸಿಕೆಗಾಗಿ ನಡೆಯುತ್ತಿರುವ ಕ್ಲಿನಿಕಲ್ ಟ್ರಯಲ್‌ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಒಳಗಾಗುವಂತೆ ಬ್ರಿಟನ್ ಸರ್ಕಾರವು ಭಾರತ ಮೂಲದವರು ಮತ್ತು ಜನಾಂಗೀಯ ಅಲ್ಪಸಂಖ್ಯಾತರಿಗೆ ಸೋಮವಾರ ಮನವಿ ಮಾಡಿದೆ.
ಪರೀಕ್ಷೆಗೆ ಜನರನ್ನು ಆರಿಸಿಕೊಳ್ಳುವ ಕುರಿತ ಕಾರ್ಯಕ್ರಮವು ಗುಜರಾತಿ, ಪಂಜಾಬಿ, ಬಂಗಾಳಿ ಮತ್ತು ಉರ್ದು ಭಾಷೆಗಳಲ್ಲಿ ಪ್ರಸಾರವಾಗಿದೆ. ಪ್ರಯೋಗದ ಉದ್ದೇಶಕ್ಕೆ ಜನರನ್ನು ತಲುಪಲು ಸರ್ಕಾರ ಹಮ್ಮಿಕೊಂಡಿರುವ ಕಾರ್ಯಕ್ರಮಗಳಲ್ಲಿ ಇದುವೂ ಒಂದು.
ಮಾರಣಾಂತಿಕ ರೋಗದ ವಿರುದ್ಧ ಜನರನ್ನು ರಕ್ಷಿಸುವ ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆಯ ಆವಿಷ್ಕಾರವನ್ನು ವೇಗಗೊಳಿಸುವ ಪ್ರಯತ್ನಗಳ ಭಾಗವಾಗಿ 1,00,000 ಕ್ಕೂ ಹೆಚ್ಚು ಜನರು ಬ್ರಿಟನ್‌ನಾದ್ಯಂತ ಲಸಿಕೆ ಪ್ರಯೋಗಗಳಲ್ಲಿ ಭಾಗವಹಿಸಲು ಸ್ವಯಂಪ್ರೇರಿತರಾಗಿ ಹೆಸರು ನೋಂದಾಯಿಸಿಕೊಂಡಿದ್ದಾರೆ.
ಆದಾಗ್ಯೂ, ಪ್ರಯೋಗದಲ್ಲಿ ಭಾಗವಹಿಸುವಿಕೆ ಪ್ರಮಾಣವು ಜನಸಂಖ್ಯೆಯ ಕೆಲ ವಿಭಾಗದಲ್ಲಿ ಕಡಿಮೆ ಇದೆ. ಹೀಗಾಗಿಯೇ ಜನಾಂಗೀಯ ಅಲ್ಪಸಂಖ್ಯಾತರು, 65 ವರ್ಷ ಮೇಲ್ಪಟ್ಟವರು ಮತ್ತು ಆರೋಗ್ಯ ಕಾರ್ಯಕರ್ತರು ಪರೀಕ್ಷೆಯಲ್ಲಿ ಒಳಪಡಬೇಕಾಗಿ ಬ್ರಿಟನ್ ಮನವಿ ಮಾಡಿಕೊಂಡಿದೆ. ಈ ಮೂಲಕ ಲಸಿಕೆಯು ಎಲ್ಲರಲ್ಲಿಯೂ ಕೆಲಸ ಮಾಡುತ್ತದೆಯೇ ಎಂಬುದನ್ನು ತಿಳಿಯಲು ಸಹಕರಿಸಬೇಕು ಎಂದು ಕೇಳಿಕೊಂಡಿದೆ.
‘ಬ್ರಿಟನ್‌ನ ಕಠಿಣ ನಿಯಂತ್ರಣ ಮತ್ತು ಸುರಕ್ಷತಾ ಮಾನದಂಡಗಳನ್ನು ತಲುಪಬಲ್ಲ ಲಸಿಕೆಯೊಂದನ್ನು ಕಂಡು ಹಿಡಿಯಲು ವಿಜ್ಞಾನಿಗಳು ಮತ್ತು ಸಂಶೋಧಕರು ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ ಈ ಮಹತ್ವದ ಸಂಶೋಧನೆಯ ವೇಗ ಹೆಚ್ಚಿಸಲು ವಿಜ್ಞಾನಿಗಳಿಗೆ ಎಲ್ಲ ಹಿನ್ನೆಲೆಯ, ಎಲ್ಲ ವಯಸ್ಸಿನ ನೂರಾರು ಸಾವಿರ ಜನರು ಬೇಕಾಗಿದ್ದಾರೆ,’ ಎಂದು ಬ್ರಿಟನ್ ವ್ಯವಹಾರ ಕಾರ್ಯದರ್ಶಿ ಅಲೋಕ್ ಶರ್ಮಾ ಹೇಳಿದ್ದಾರೆ.
‘ವಿವಿಧ ಜನಾಂಗಗಳ ಸ್ವಯಂಸೇವಕರ ಮೇಲಿನ ಕ್ಲಿನಿಕಲ್ ಟ್ರಯಲ್‌ಗಳು ಲಸಿಕೆಯ ಪರಿಣಾಮಕಾರಿತ್ವವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ವಿಜ್ಞಾನಿಗಳು ಮತ್ತು ಸಂಶೋಧಕರಿಗೆ ಸಹಾಯ ಮಾಡುತ್ತದೆ. ಸುರಕ್ಷಿತ ಮತ್ತು ಕಾರ್ಯಸಾಧ್ಯವಾದ ಲಸಿಕೆಯನ್ನು ಕಂಡುಹಿಡಿಯುವ ಪ್ರಯತ್ನಗಳನ್ನು ಗಣನೀಯವಾಗಿ ವೇಗಗೊಳಿಸುತ್ತದೆ,’ ಎಂದು ಬ್ರಿಟನ್ ರಾಷ್ಟ್ರೀಯ ಆರೋಗ್ಯ ಸೇವೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.