ಲಂಡನ್ (ಪಿಟಿಐ): ವೀಸಾ ಶುಲ್ಕವನ್ನು ಬ್ರಿಟನ್ ಹೆಚ್ಚಳ ಮಾಡಿದ್ದು, ಅಕ್ಟೋಬರ್ 4ರಿಂದ ಪರಿಷ್ಕೃತ ಶುಲ್ಕ ಜಾರಿಗೆ ಬರಲಿದೆ. ಬ್ರಿಟನ್‌ಗೆ ಪ್ರವೇಶ ಬಯಸುವ ಎಲ್ಲಾ ದೇಶಗಳ ಆಕಾಂಕ್ಷಿಗಳಿಗೂ ಇದು ಅನ್ವಯವಾಗಲಿದೆ.
ಹೊಸ ಶುಲ್ಕ ನೀತಿಯನ್ನು ಶುಕ್ರವಾರ ಬ್ರಿಟನ್ ಸಂಸತ್ತಿನಲ್ಲಿ ಮಂಡಿಸಲಾಯಿತು. ಆ ಪ್ರಕಾರ ಆರು ತಿಂಗಳಿಗಿಂತ ಕಡಿಮೆ ಅವಧಿಗೆ ನೀಡುವ ಸಂದರ್ಶಕರ ವೀಸಾ ಮೊತ್ತವನ್ನು 115 ಪೌಂಡ್ (₹11,835.30) ನಿಗದಿಪಡಿಸಲಾಗಿದೆ. ವಿದ್ಯಾರ್ಥಿ ವೀಸಾಗೆ 490 ಪೌಂಡ್ (₹50,428.66) ನಿಗದಿಪಡಿಸಲಾಗಿದೆ ಎಂದು ಬ್ರಿಟನ್‌ನ ಗೃಹ ಇಲಾಖೆ ತಿಳಿಸಿದೆ.
ವೃತ್ತಿ, ಸಂದರ್ಶಕರ ವೀಸಾ ದರವನ್ನು ಶೇ 15ರಷ್ಟು ಹೆಚ್ಚಿಸಲಾಗಿದೆ. ಆದ್ಯತೆ ವೀಸಾ, ಶಿಕ್ಷಣ ವೀಸಾ ಶುಲ್ಕವನ್ನು ಶೇ 20ರಷ್ಟು ಹೆಚ್ಚಿಸಲಾಗಿದೆ.
ವೀಸಾ ಶುಲ್ಕ ಮತ್ತು ವಲಸಿಗರ ಆರೋಗ್ಯ ಸೇವಾ ಶುಲ್ಕವನ್ನು ಹೆಚ್ಚಿಸಿ ಆ ಹಣವನ್ನು ಬ್ರಿಟನ್ ಸರ್ಕಾರ ನಡೆಸುವ ರಾಷ್ಟ್ರೀಯ ಆರೋಗ್ಯ ಸೇವೆಗೆ (ಎನ್‌ಎಚ್‌ಎಸ್) ನೀಡಲಾಗುವುದು. ದೇಶದ ಸಾರ್ವಜನಿಕ ವಲಯದ ವೇತನ ಹೆಚ್ಚಳದ ಖರ್ಚನ್ನು ಸರಿದೂಗಿಸಲು ಈ ಕ್ರಮ ಕೈಗೊಳ್ಳಲಾಗುವುದು ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಜುಲೈನಲ್ಲಿ ಹೇಳಿದ್ದರು.
ಅದರಂತೆ ವೀಸಾ ಅರ್ಜಿಗಳು ಮತ್ತು ವಲಸಿಗರ ಆರೋಗ್ಯ ಸೇವಾ ಶುಲ್ಕವನ್ನು ಹೆಚ್ಚಿಸಲಾಗಿದೆ ಎಂದು ಗೃಹ ಇಲಾಖೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.