ADVERTISEMENT

ಉಕ್ರೇನ್‌ ಇತರ ಭಾಗಗಳ ಮೇಲೆ ರಷ್ಯಾದಿಂದ ಭಾರಿ ದಾಳಿ ಸಾಧ್ಯತೆ: ಅಮೆರಿಕ

ಮಿಲಿಟರಿ ಕಾರ್ಯಾಚರಣೆ ತಗ್ಗಿಸುವ ಭರವಸೆಯೇ ಸಂದೇಹಾಸ್ಪದ: ಝೆಲೆನ್‌ಸ್ಕಿ

ರಾಯಿಟರ್ಸ್
Published 31 ಮಾರ್ಚ್ 2022, 1:01 IST
Last Updated 31 ಮಾರ್ಚ್ 2022, 1:01 IST
ಜೋ ಬೈಡನ್
ಜೋ ಬೈಡನ್   

ಲುವಿವ್/ಕೀವ್/ಮಾಸ್ಕೊ: ಕೀವ್‌ ನಗರ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಸೇನಾ ಕಾರ್ಯಾಚರಣೆಯನ್ನು ತಗ್ಗಿಸಲಾಗುವುದು ಎಂಬ ರಷ್ಯಾ ಹೇಳಿಕೆ ಬಗ್ಗೆ ಉಕ್ರೇನ್‌ ಹಾಗೂ ಕೆಲಪಾಶ್ಚಿಮಾತ್ಯ ರಾಷ್ಟ್ರಗಳು ಸಂದೇಹಪಟ್ಟಿವೆ. ಉಕ್ರೇನ್‌ ಇತರ ಭಾಗಗಳ ಮೇಲೆ ರಷ್ಯಾದಿಂದ ಭಾರಿ ದಾಳಿ ನಡೆಯುವ ಸಾಧ್ಯತೆಗಳಿವೆ ಎಂದು ಅಮೆರಿಕ ಎಚ್ಚರಿಸಿದೆ.

‘ಮಿಲಿಟರಿ ಕಾರ್ಯಾಚರಣೆ ತಗ್ಗಿ ಸುವ ಕುರಿತು ರಷ್ಯಾ ಹೇಳಿಕೆ ನಮಗೆ ಮನದಟ್ಟಾಗಿಲ್ಲ. ಅದು ಕೃತಿಯಲ್ಲಿ ವ್ಯಕ್ತವಾಗಬೇಕು’ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಪ್ರತಿಕ್ರಿಯಿಸಿದ್ದಾರೆ.

‘ಕಳೆದ 34 ದಿನಗಳಿಂದ ನಡೆಯುತ್ತಿರುವ ದಾಳಿ, 8 ವರ್ಷಗ ಳಿಂದಡಾನ್‌ಬೊಸ್‌ನಲ್ಲಿನ ವಿದ್ಯಮಾನ
ಗಳಿಂದ ಉಕ್ರೇನ್‌ ಜನರು ಸಾಕಷ್ಟು ಕಲಿತಿದ್ದಾರೆ. ಮುಂದಿನ ದಿನಗಳಲ್ಲಿ ಏನಾಗಬಹುದು ಎಂಬುದನ್ನು ಊಹಿಸದಷ್ಟು ಮುಗ್ಧರೂ ಅಲ್ಲ. ಮಾತುಕತೆ ನಂತರ ಏನು ಫಲಿತಾಂಶ ಸಿಗಲಿದೆ ಎಂಬುದನ್ನು ಮಾತ್ರ ಉಕ್ರೇನ್‌ ಜನ ನಂಬುತ್ತಾರೆ’ ಎಂದು ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಹೇಳಿದ್ದಾರೆ.

ADVERTISEMENT

ಇಸ್ತಾಂಬುಲ್‌ನಲ್ಲಿ ರಷ್ಯಾ ಮತ್ತು ಉಕ್ರೇನ್‌ ನಡುವಿನ ಶಾಂತಿ ಮಾತುಕತೆಯಿಂದ ಯಾವುದೇ ಮಹತ್ತರ ಪ್ರಗತಿಯಾಗಿಲ್ಲ ಎಂದು ಕ್ರೆಮ್ಲಿನ್‌ ವಕ್ತಾರ ಡಿಮಿಟ್ರಿ ಪೆಸ್ಕೊವ್ ಅವರು ಮಾಸ್ಕೊದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

‘ಉಕ್ರೇನ್‌ ಇತರ ಪ್ರದೇಶಗಳ ಮೇಲೆ ರಷ್ಯಾ ದಾಳಿ ನಡೆಸುವ ಸಾಧ್ಯತೆಗಳಿದ್ದು, ಇದಕ್ಕೆ ನಾವೆಲ್ಲ ಸಿದ್ಧರಾಗಬೇಕು’ ಎಂದು ಅಮೆರಿಕ ರಕ್ಷಣಾ ಇಲಾಖೆ ವಕ್ತಾರ ಜಾನ್ ಕಿರ್ಬಿ ಹೇಳಿದ್ದಾರೆ.

‘ಕೀವ್‌ ಸುತ್ತಮುತ್ತ ಜಮಾವಣೆ ಮಾಡಲಾಗಿದ್ದ ಪಡೆಗಳನ್ನು ರಷ್ಯಾ ಹಿಂದಕ್ಕೆ ಕರೆಸಿಕೊಳ್ಳಲು ಆರಂಭಿಸಿದೆ. ರಷ್ಯಾ ಯುದ್ಧವನ್ನು ನಿಲ್ಲಿಸಲಿದೆ ಅಥವಾ ತನ್ನ ಪಡೆಗಳನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳುತ್ತಿದೆ ಎಂಬುದನ್ನು ಇದು ಸೂಚಿಸುವುದಿಲ್ಲ. ಆದು, ತನ್ನ ಪಡೆಗಳನ್ನು ಬೇರೆ ಸ್ಥಳಗಳಲ್ಲಿ ನಿಯೋಜನೆ ಮಾಡುತ್ತಿದೆ ಎಂದರ್ಥ’ ಎಂದೂ ಕಿರ್ಬಿ ಪ್ರತಿಪಾದಿಸಿದ್ದಾರೆ.

‘ಪರಸ್ಪರ ವಿಶ್ವಾಸ ವೃದ್ಧಿ ಹಾಗೂ ಸಂಧಾನ ಪ್ರಕ್ರಿಯೆಯನ್ನು ಮತ್ತೊಂದು ಮಜಲಿಗೆ ಒಯ್ಯುವ ಸಂಬಂಧ ಕೀವ್‌ ಹಾಗೂ ಚೆರ್ನಿವ್‌ನಲ್ಲಿ ಸೇನಾ ಕಾರ್ಯಾಚರಣೆ ಕಡಿಮೆಗೊಳಿಸಲು ತೀರ್ಮಾನಿಸಲಾಗಿದೆ’ ಎಂದು ರಷ್ಯಾದ ರಕ್ಷಣಾ ಉಪ ಸಚಿವ ಅಲೆಕ್ಸಾಂಡರ್‌ ಫೊಮಿನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಆದರೆ, ಮರಿಯುಪೊಲ್‌ ಸೇರಿದಂತೆ ಇತರ ನಗರಗಳ ಮೇಲೆ ನಡೆಯುತ್ತಿರುವ ದಾಳಿ ಬಗ್ಗೆ ಫೊಮಿನ್‌ ಪ್ರತಿಕ್ರಿಯೆ ನೀಡಿಲ್ಲ.

ಉಕ್ರೇನ್‌ನ ಉತ್ತರ ಭಾಗದಲ್ಲಿ ನಿಯೋಜಿಸಿದ್ದ ಪಡೆಗಳನ್ನು ಡೊನೆಟ್‌ಸ್ಕ್‌ ಮತ್ತು ಲುಹಾನ್‌ಸ್ಕ್‌ ಬಳಿ ನಿಯೋಜಿಸುತ್ತಿರುವ ರಷ್ಯಾ, ಆ ಪ್ರದೇಶಗಳ ಮೇಲೆ ದಾಳಿ ನಡೆಸಲಿದೆ ಎಂದು ಬ್ರಿಟನ್‌ ರಕ್ಷಣಾ ಸಚಿವಾಲಯ ಎಚ್ಚರಿಸಿದೆ.

ಮೈಕೊಲೈವ್‌ ಪ್ರಾದೇಶಿಕ ಸರ್ಕಾರಿ ಆಡಳಿತ ಕಚೇರಿ ಮೇಲೆ ರಷ್ಯಾ ಪಡೆಗಳು ನಡೆಸಿದ ಕ್ರೂಸ್‌ ಕ್ಷಿಪಣಿ ದಾಳಿ ಗವರ್ನರ್ ವಿಟಾಲಿ ಕಿಮ್ ಅವರನ್ನು ಗುರಿಯಾಗಿರಿಸಿತ್ತು. ಅದೃಷ್ಟವಶಾತ್‌ ಅವರು ಅಪಾಯದಿಂದ ಪಾರಾದರು. ಆದರೆ, ಕ್ಷಿಪಣಿ ದಾಳಿಗೆ ಕಚೇರಿಯಲ್ಲಿದ್ದ 15 ಸಿಬ್ಬಂದಿ ಬಲಿಯಾದರು ಎಂದು ನಗರದ ಮೇಯರ್‌ ಸೆಂಕಿವಿಚ್‌ ತಿಳಿಸಿದರು.

ಶಸ್ತ್ರ ತ್ಯಜಿಸಲಿ– ಪುಟಿನ್‌: ಮರಿಯುಪೊಲ್‌ನಲ್ಲಿ ರಾಷ್ಟ್ರೀಯವಾದಿಗಳು ಶಸ್ತ್ರ ತ್ಯಜಿಸಬೇಕೆಂಬ ಬೇಡಿಕೆಯನ್ನು ರಷ್ಯಾ ಅಧ್ಯಕ್ಷ ‌ಪುಟಿನ್‌ ಅವರು ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರಾನ್‌ ಅವರ ಜತೆಗಿನ ದೂರವಾಣಿ ಸಂಭಾಷಣೆಯಲ್ಲಿ ಪುನರುಚ್ಚರಿಸಿದ್ದಾರೆ ಎಂದು ಪುಟಿನ್‌ ಆಡಳಿತ ಕಚೇರಿ ಕ್ರೆಮ್ಲಿನ್‌ ಹೇಳಿದೆ.

‘ಸಂಘರ್ಷ ಶಮನದ ಭರವಸೆ ಮೂಡಿದೆ’
ವಿಶ್ವಸಂಸ್ಥೆ:
ರಷ್ಯಾ ಮತ್ತು ಉಕ್ರೇನ್‌ ನಡುವೆ ಫಲಪ್ರದದಾಯಕ ಒಡಂಬಡಿಕೆಗೆ ಕರೆ ನೀಡಿರುವ ಭಾರತವು, ಸದ್ಯ ಉಭಯ ರಾಷ್ಟ್ರಗಳ ನಡು ವಿನ ಮಾತುಕತೆಗಳು ಈ ಸಂಘರ್ಷ ಉಲ್ಬಣಿಸದಂತೆ ತಡೆಯುವ ಮತ್ತು ಬಿಕ್ಕಟ್ಟು ಶೀಘ್ರ ಶಮನಗೊಳಿಸುವ ಭರವಸೆ ಮೂಡಿಸಿದೆ ಎಂದು ಅಭಿಪ್ರಾಯಪಟ್ಟಿದೆ.

‘ಯುದ್ಧಾರಂಭದಿಂದಲೂ ಉಕ್ರೇನ್‌ನಲ್ಲಿ ಹದಗೆಡುತ್ತಲೇ ಇರುವ ಪರಿಸ್ಥಿತಿಯ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ’ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ ಟಿ.ಎಸ್. ತಿರುಮೂರ್ತಿ ಹೇಳಿದರು.

ಮಂಗಳವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, ‘ಶಸ್ತಾಸ್ತ್ರ ಸಂಘರ್ಷಪೀಡಿತ ಉಕ್ರೇನಿನ ಪ್ರದೇಶಗಳಿಗೆ ಯಾವುದೇ ಅಡೆತಡೆ ಇಲ್ಲದೇ ಮಾನವೀಯ ಪರಿಹಾರ ಲಭಿಸಬೇಕೆಂದು ಭಾರತ ಒತ್ತಾಯಿಸುತ್ತಲೇ ಬಂದಿದೆ’ ಎಂದು ಪುನರುಚ್ಚರಿಸಿದರು.

ಉಕ್ರೇನ್‌ ಉತ್ತರದಲ್ಲಿ ಮತ್ತಷ್ಟು ದಾಳಿ
ಕೀವ್‌:
ಇಸ್ತಾಂಬುಲ್‌ ಶಾಂತಿಮಾತುಕತೆಯ ಫಲವಾಗಿ ಉಕ್ರೇನಿನ ಪ್ರಮುಖ ನಗರಗಳಿಂದ ಸೇನಾ ಕಾರ್ಯಾಚರಣೆಯನ್ನು ಆಮೂಲಾಗ್ರವಾಗಿ ಕಡಿತಗೊಳಿಸುವುದಾಗಿ ಹೇಳಿದ್ದ ರಷ್ಯಾ, ಮಂಗಳವಾರ ತಡರಾತ್ರಿವರೆಗೂ ಮತ್ತಷ್ಟು ನಿರಂತರ ದಾಳಿ ನಡೆಸಿತು ಎಂದುಉಕ್ರೇನಿನ ಉತ್ತರ ಚೆರ್ನಿವ್‌ ಪ್ರಾದೇಶಿಕ ಗವರ್ನರ್ ಹೇಳಿದ್ದಾರೆ.

ಚೆರ್ನಿವ್ ಮತ್ತು ನಿಜಿನ್ ನಗರಗಳಲ್ಲಿ ಗ್ರಂಥಾಲಯಗಳು ಮತ್ತು ಶಾಪಿಂಗ್ ಕೇಂದ್ರಗಳು, ಮನೆಗಳು ಹಾನಿಗೀಡಾಗಿವೆ ಎಂದು ಗವರ್ನರ್‌ ವಿಯಾಚೆಸ್ಲಾವ್ ಕೌಸ್‌ ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿರುವ ವಿಡಿಯೊದಲ್ಲಿ ತಿಳಿಸಿದ್ದಾರೆ.

ರಷ್ಯಾದ ಮೇಲೆ ಪ್ರತಿದಾಳಿ
ಬೆಲ್‌ಗೊರೊಡ್‌ನಲ್ಲಿರುವ ರಷ್ಯಾದ ಶಸ್ತ್ರಾಸ್ತ್ರ ಸಂಗ್ರಹಾಗಾರ ಮತ್ತು ಸೇನಾ ಶಿಬಿರ ಗುರಿಯಾಗಿಸಿಕೊಂಡು ಉಕ್ರೇನ್‌ ಮಂಗಳವಾರ ತಡರಾತ್ರಿ ಬ್ಯಾಲೆಸ್ಟಿಕ್‌ ಕ್ಷಿಪಣಿ ದಾಳಿ ನಡೆಸಿದೆ. ಉಕ್ರೇನ್‌ನ ಗಡಿಯುದ್ದಕ್ಕೂ ಸ್ಫೋಟಗಳು ನಡೆದಿವೆ. ನಾಲ್ವರು ರಷ್ಯಾದ ಯೋಧರು ಗಾಯಗೊಂಡಿದ್ದಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.

ಉಕ್ರೇನಿನ ‘ಒಟಿಆರ್‌–21 ಟೋಚ್ಕಾ– ಯು’ ಬ್ಯಾಲೆಸ್ಟಿಕ್ಕ್ಷಿಪಣಿ ಅಪ್ಪಳಿಸಿರುವ ದೃಶ್ಯಾವಳಿಗಳುಪಶ್ಚಿಮ ರಷ್ಯಾದ ಬೆಲ್‌ಗೊರೊಡ್‌ನಿಂದ ಹೊರಬಿದ್ದಿವೆ ಎಂದು ‘ದಿ ಡೈಲಿ ಮೇಲ್’ ವರದಿ ಮಾಡಿದೆ.

35ನೇ ದಿನದ ಬೆಳವಣಿಗೆಗಳು
l ರಷ್ಯಾದ ಪಡೆಗಳು ಉಕ್ರೇನ್ ಮತ್ತು ರಷ್ಯಾದ ನಿಯಂತ್ರಿತ ಪ್ರದೇಶಗಳನ್ನು ಪ್ರತ್ಯೇಕಿಸುವ ಗಡಿಯಲ್ಲಿನ ಹಲವು ಪಟ್ಟಣಗಳು ಮತ್ತು ನಗರಗಳ ಮೇಲೆ ಬುಧವಾರ ಶೆಲ್ ದಾಳಿ ನಡೆಸಿವೆ– ಡೊನೆಟ್‌ಸ್ಕ್‌ ಪ್ರಾಂತ್ಯದ ಗವರ್ನರ್

l ಉಕ್ರೇನ್ ಸಶಸ್ತ್ರ ಪಡೆಗಳ ಎಸ್‌-300 ವಾಯು ರಕ್ಷಣಾ ವ್ಯವಸ್ಥೆಯನ್ನು ನಾಶಪಡಿಸಿರುವ ದೃಶ್ಯದ ತುಣುಕನ್ನು ರಷ್ಯಾ ಬಿಡುಗಡೆ ಮಾಡಿದೆ

l ಉಕ್ರೇನ್‌ನಲ್ಲಿ ನಾಗರಿಕರ ಮೇಲೆ ವಿವೇಚನಾರಹಿತ ಬಾಂಬ್ ದಾಳಿ ನಡೆಸಿದ ಮತ್ತು ಯುದ್ಧಾಪರಾಧಗಳ ಆರೋಪದ ತನಿಖೆಗೆ ವಿಶ್ವಸಂಸ್ಥೆಯುನಾರ್ವೆಯ ಸುಪ್ರೀಂಕೋರ್ಟ್‌ ವಿಶ್ರಾಂತ ನ್ಯಾಯಮೂರ್ತಿ ಎರಿಕ್‌ ಮೊಸೆ ನೇತೃತ್ವದಲ್ಲಿ ಮೂವರು ಮಾನವ ಹಕ್ಕುಗಳ ತಜ್ಞರ ಸ್ವತಂತ್ರ ಸಮಿತಿ ನೇಮಿಸಿದೆ

l ರಷ್ಯಾದಿಂದ ತೈಲ ಆಮದನ್ನು ಈ ವರ್ಷಾಂತ್ಯದೊಳಗೆ ಕಡಿತಗೊಳಿಸಲಾಗುವುದು –ಪೋಲೆಂಡ್‌ ಪ್ರಧಾನಿ ಮತೇವ್ಸ್‌ಮೊರಾವಿಯಸ್ಕಿ

l ಪೂರ್ವ ಉಕ್ರೇನಿನಲ್ಲಿನ ಪ್ರತ್ಯೇಕತಾವಾದಿ ಪ್ರದೇಶಗಳ ಮೇಲೆ ಗಮನ ಕೇಂದ್ರೀಕರಿಸಿರುವ ರಷ್ಯಾದ ನಡೆ, ರಷ್ಯಾ ಸೇನೆಯು ಭಾರೀ ನಷ್ಟದಿಂದ ಬಳಲುತ್ತಿರುವ ಸೂಚಕವಾಗಿದೆ– ಬ್ರಿಟನ್‌ ರಕ್ಷಣಾ ಸಚಿವಾಲಯ

l ಯುರೋಪಿನ ವಿದ್ಯುತ್‌ ಗ್ರಿಡ್‌ ಸಂಪರ್ಕ ಸಾಧಿಸುವ ಮೂಲಕ ಉಕ್ರೇನ್‌, ಐರೋಪ್ಯ ಒಕ್ಕೂಟ ಸೇರುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿದೆ

l ಉಕ್ರೇನ್‌ನಲ್ಲಿನ ಯುದ್ಧವು ಮಹಾ ದುರಂತ ಸೃಷ್ಟಿಸಿದೆ. ಜಾಗತಿಕ ಪರಿಣಾಮವನ್ನು ಬೀರಲಿದೆ. ಗೋಧಿ ಬೆಳೆಯುವ ಉಕ್ರೇನ್ ರೈತರು ಈಗ ರಷ್ಯನ್ನರ ವಿರುದ್ಧ ಹೋರಾಡುತ್ತಿದ್ದಾರೆ. ಈಗಾಗಲೇ ಹೆಚ್ಚಿನ ಆಹಾರಗಳ ಬೆಲೆಗಳು ಗಗನಕ್ಕೇರುತ್ತಿವೆ– ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮದ ಕಾರ್ಯನಿರ್ವಾಹಕ ನಿರ್ದೇಶಕ ಡೇವಿಡ್ ಬೀಸ್ಲಿ

l ಉಕ್ರೇನ್‌ ಯುದ್ಧವು ಏಷ್ಯಾ ಪೆಸಿಫಿಕ್‌ ಮೇಲೂ ಪರಿಣಾಮ ಬೀರುತ್ತದೆ. ಈ ಪ್ರದೇಶ ಈಗಾಗಲೇ ಸಾಕಷ್ಟು ವಿವಾದಾತ್ಮಕ ವಿಷಯಗಳು ಹಾಗೂ ಸಮಸ್ಯೆಗಳನ್ನು ಎದುರಿಸುತ್ತಿರುವುದನ್ನು ಜಾಗತಿಕ ಸಮುದಾಯ ಅರಿಯಬೇಕು –ಸಿಂಗಪುರದ ಪ್ರಧಾನಿ ಲೀ ಸಿಯೆನ್ ಲೂಂಗ್

l ರಷ್ಯಾದ ಆಕ್ರಮಣದಿಂದಾಗಿ 40 ಲಕ್ಷಕ್ಕೂ ಹೆಚ್ಚು ನಾಗರಿಕರು ಉಕ್ರೇನ್‌ ತೊರೆದಿದ್ದಾರೆ. ಎರಡನೇ ವಿಶ್ವ ಸಮರದ ನಂತರ ಯುರೋಪಿನಲ್ಲಿ ಸಂಭವಿಸಿದ ಅತಿದೊಡ್ಡ ನಿರಾಶ್ರಿತರ ಬಿಕ್ಕಟ್ಟು ಇದು– ವಿಶ್ವಸಂಸ್ಥೆಯ ನಿರಾಶ್ರಿತರ ಏಜೆನ್ಸಿ

l ಇಸ್ತಾಂಬುಲ್‌ ಮಾತುಕತೆಯ ನಂತರ ಉಕ್ರೇನ್ ಮತ್ತು ರಷ್ಯಾದ ನಿಯೋಗಗಳು ತಮ್ಮ ನಾಯಕರ ಜತೆಗೆ ಸಮಾಲೋಚನೆಗಾಗಿ ಸ್ವದೇಶಗಳಿಗೆ ಹೋಗಿವೆ. 2ನೇ ದಿನ ಮುಖಾಮುಖಿ ಮಾತುಕತೆ ನಡೆದಿಲ್ಲ– ಟರ್ಕಿ

l ಜೋ ಬೈಡನ್‌ ಅವರ ಪುತ್ರ ಹಂಟರ್‌ ಬೈಡನ್‌ ನಡೆಸಿರುವ ಅವ್ಯವಹಾರಗಳ ಮಾಹಿತಿ ಬಹಿರಂಗಪಡಿಸುವಂತೆ ರಷ್ಯಾ ಅಧ್ಯಕ್ಷ ಪುಟಿನ್‌ ಅವರಿಗೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಒತ್ತಾಯ

l ಪೋಲೆಂಡ್‌ನಲ್ಲಿ ನಿಯೋಜಿಸಿರುವ ಅಮೆರಿಕ ಪಡೆಗಳು ಉಕ್ರೇನ್ ಪಡೆಗಳಿಗೆ ನೆರವು ನೀಡುತ್ತಿವೆ. ಎಫ್‌–18 ಹತ್ತು ಯುದ್ಧವಿಮಾನಗಳನ್ನು ಉಕ್ರೇನ್‌ಗೆ ಹಸ್ತಾಂತರಿಸಲಾಗಿದೆ: ಅಮೆರಿಕ

l ನ್ಯಾಟೊ ಸದಸ್ಯ ರಾಷ್ಟ್ರ ಲಿಥುವೇನಿಯಾದಲ್ಲಿ ಅಮೆರಿಕ 200 ಯೋಧ‌ರನ್ನು ನಿಯೋಜಿಸಿದೆ– ಅಮೆರಿಕ ರಕ್ಷಣಾ ಇಲಾಖೆ ವಕ್ತಾರ ಕಿರ್ಬಿ ಹೇಳಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.