ADVERTISEMENT

ರಷ್ಯಾ ವಿರುದ್ಧ ಹೋರಾಡಲು 'ಏಕಾಂಗಿಯಾಗಿ ಉಳಿದಿದ್ದೇವೆ': ಉಕ್ರೇನ್ ಅಧ್ಯಕ್ಷ

ಏಜೆನ್ಸೀಸ್
Published 25 ಫೆಬ್ರುವರಿ 2022, 7:02 IST
Last Updated 25 ಫೆಬ್ರುವರಿ 2022, 7:02 IST
ವೊಲೊಡಿಮಿರ್ ಝೆಲೆನ್‌ಸ್ಕಿ
ವೊಲೊಡಿಮಿರ್ ಝೆಲೆನ್‌ಸ್ಕಿ   

ಕೀವ್: ಮೊದಲ ದಿನವೇ 130ಕ್ಕೂ ಅಧಿಕಉಕ್ರೇನಿಯನ್ನರನ್ನು ಕೊಂದ ದೊಡ್ಡ ಪ್ರಮಾಣದ ಆಕ್ರಮಣವನ್ನು ಪ್ರಾರಂಭಿಸಿದ ನಂತರ ರಷ್ಯಾದ ವಿರುದ್ಧ ಹೋರಾಡಲು ತನ್ನ ದೇಶವನ್ನು ಒಬ್ಬಂಟಿಯಾಗಿ ಬಿಡಲಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಶುಕ್ರವಾರ ತಿಳಿಸಿದ್ದಾರೆ.

'ನಮ್ಮ ರಾಷ್ಟ್ರವನ್ನು ರಕ್ಷಿಸಿಕೊಳ್ಳಲು ನಾವು ಏಕಾಂಗಿಯಾಗಿದ್ದೇವೆ' ಎಂದು ಉಕ್ರೇನ್ ಅಧ್ಯಕ್ಷ ಮಧ್ಯರಾತ್ರಿಯ ನಂತರ ರಾಷ್ಟ್ರವನ್ನುದ್ದೇಶಿಸಿ ವಿಡಿಯೊ ಭಾಷಣದಲ್ಲಿ ಹೇಳಿದ್ದಾರೆ.

'ರಷ್ಯಾ ವಿರುದ್ಧ ಹೋರಾಡಲು ನಮ್ಮೊಂದಿಗೆ ಯಾರು ಸಿದ್ಧರಿದ್ದಾರೆ? ನಮ್ಮೊಂದಿಗೆ ಹೋರಾಟಕ್ಕೆ ನಿಲ್ಲುವ ಯಾರನ್ನೂ ನಾನು ನೋಡುತ್ತಿಲ್ಲ. ಉಕ್ರೇನ್‌ಗೆ ನ್ಯಾಟೊ ಸದಸ್ಯತ್ವದ ಖಾತರಿ ನೀಡಲು ಯಾರು ಸಿದ್ಧರಾಗಿದ್ದಾರೆ? ಎಲ್ಲರೂ ಭಯಪಡುತ್ತಾರೆ' ಎಂದು ಅವರು ಹೇಳಿದರು.

ADVERTISEMENT

ಗುರುವಾರ ಮುಂಜಾನೆ ದಾಳಿಯ ಪ್ರಾರಂಭದಿಂದ ಮಿಲಿಟರಿ ಸಿಬ್ಬಂದಿ ಮತ್ತು ನಾಗರಿಕರು ಸೇರಿ 137 ಸಾವಿಗೀಡಾಗಿದ್ದಾರೆ. ಇನ್ನೂ 316 ಮಂದಿ ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು.

ರಷ್ಯಾದ 'ವಿಧ್ವಂಸಕ ಗುಂಪುಗಳು' ರಾಜಧಾನಿ ಕೀವ್ ಅನ್ನು ಪ್ರವೇಶಿಸಿವೆ ಎಂದ ಅವರು, ನಗರದ ನಾಗರಿಕರು ಜಾಗರೂಕರಾಗಿರಲು ಮತ್ತು ಕರ್ಫ್ಯೂ ಅನ್ನು ಗಮನಿಸುವಂತೆ ಒತ್ತಾಯಿಸಿದರು.

ರಷ್ಯಾ ತನ್ನನ್ನು 'ಟಾರ್ಗೆಟ್ ನಂಬರ್ ಒನ್' ಎಂದು ಗುರುತಿಸಿದ್ದರೂ ಕೂಡ, ತಾನು ಮತ್ತು ತಮ್ಮ ಕುಟುಂಬ ಉಕ್ರೇನ್‌ನಲ್ಲಿಯೇ ಉಳಿದಿರುವುದಾಗಿ ತಿಳಿಸಿದ್ದಾರೆ.

'ರಾಷ್ಟ್ರದ ಅಧ್ಯಕ್ಷರನ್ನು ಕೆಳಗಿಳಿಸುವ ಮೂಲಕ ಉಕ್ರೇನ್ ಅನ್ನು ರಾಜಕೀಯವಾಗಿ ನಾಶಮಾಡಲು ರಷ್ಯಾ ಬಯಸುತ್ತಿದೆ' ಎಂದು ಝೆಲೆನ್‌ಸ್ಕಿ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.