ಕೀವ್: ರಷ್ಯಾ ಆಕ್ರಮಿತ ಬಂದರು ನಗರ ಮರಿಯುಪೋಲ್‌ನಿಂದ ನಾಗರಿಕರನ್ನು ತಕ್ಷಣವೇ ಸ್ಥಳಾಂತರಿಸುವ ಅಗತ್ಯದ ಕುರಿತು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರೊಂದಿಗೆ ಚರ್ಚಿಸಿರುವುದಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಭಾನುವಾರ ತಿಳಿಸಿದ್ದಾರೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಟರ್ಕಿಯ ಅಧ್ಯಕ್ಷರ ಮಾತುಕತೆಯ ಮುನ್ನಾದಿನದಂದು, ರಷ್ಯಾ ಪಡೆಗಳಿಂದ ಸುತ್ತುವರಿದಿರುವ ಆದರೆ ಉಕ್ರೇನ್ ಹಿಡಿತದಲ್ಲಿರುವ ಅಜೋವ್‌ಸ್ಟಾಲ್ ಸ್ಥಾವರ ಸೇರಿದಂತೆ ಮರಿಯುಪೋಲ್‌ನಿಂದ ನಾಗರಿಕರ ಸ್ಥಳಾಂತರದ ಬಗ್ಗೆ ಇಬ್ಬರೂ ಮಾತನಾಡಿರುವುದಾಗಿ ತಿಳಿಸಿದ್ದಾರೆ.
'ಅಜೋವ್‌ಸ್ಟಾಲ್ ಸ್ಥಾವರ ಸೇರಿದಂತೆ ಮರಿಯುಪೋಲ್‌ನಿಂದ ನಾಗರಿಕರನ್ನು ತಕ್ಷಣವೇ ಸ್ಥಳಾಂತರಿಸುವ ಅಗತ್ಯದ ಕುರಿತು ಮತ್ತು ಸೆರೆಹಿಡಿದಿರುವ ಪಡೆಗಳ ತಕ್ಷಣದ ವಿನಿಮಯ ಪ್ರಕ್ರಿಯೆ ಬಗ್ಗೆ ಒತ್ತಿಹೇಳಿದ್ದೇನೆ' ಎಂದು ಝೆಲೆನ್‌ಸ್ಕಿ ಟ್ವೀಟ್ ಮಾಡಿದ್ದಾರೆ.
ನ್ಯಾಟೊ ಸದಸ್ಯ ರಾಷ್ಟ್ರವಾಗಿರುವ ಟರ್ಕಿ, ಕಪ್ಪು ಸಮುದ್ರದಲ್ಲಿ ಉಕ್ರೇನ್ ಮತ್ತು ರಷ್ಯಾದೊಂದಿಗೆ ಕಡಲ ಗಡಿಯನ್ನು ಹಂಚಿಕೊಂಡಿದೆ ಮತ್ತು ಉಭಯ ದೇಶಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದೆ. ರಷ್ಯಾ ಮೇಲಿನ ನಿರ್ಬಂಧಗಳನ್ನು ವಿರೋಧಿಸುವಾಗ ಅದು ಉಕ್ರೇನ್‌ಗೆ ಬೆಂಬಲ ಸೂಚಿಸಿದೆ.
ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುವ ಹಿನ್ನೆಲೆಯಲ್ಲಿ ಮರಿಯುಪೋಲ್‌ನಲ್ಲಿರುವ ಗಾಯಾಳುಗಳು ಮತ್ತು ನಾಗರಿಕರ ಸ್ಥಳಾಂತರಿಸುವಿಕೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಎರ್ಡೊಗನ್ ಫೋನ್ ಕರೆಯ ಮಾತುಕತೆಯಲ್ಲಿ ಝೆಲೆನ್‌ಸ್ಕಿ ಅವರಿಗೆ ತಿಳಿಸಿರುವುದಾಗಿ ಟರ್ಕಿಶ್ ಪ್ರಧಾನಮಂತ್ರಿ ಕಚೇರಿ ಹೇಳಿದೆ.
'ಸಂಧಾನ ಪ್ರಕ್ರಿಯೆಯಲ್ಲಿ ತಾನು ಮಾಡಬಹುದಾದ ಎಲ್ಲ ರೀತಿಯ ಸಹಾಯವನ್ನು ಒದಗಿಸಲು ಮತ್ತು ಮಧ್ಯಸ್ಥಿಕೆ ಸೇರಿದಂತೆ ಅಗತ್ಯ ಬೆಂಬಲವನ್ನು ನೀಡಲು ಸಿದ್ಧ ಎಂದು ಅಧ್ಯಕ್ಷ ಎರ್ಡೊಗನ್ ಹೇಳಿರುವುದಾಗಿ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.