ADVERTISEMENT

ಉಕ್ರೇನ್‌ಗೆ ಅಮೆರಿಕದ ಸ್ಪೀಕರ್ ಭೇಟಿ: ಪ್ರಬಲ ಸಂಕೇತ ಎಂದ ಝೆಲೆನ್‌ಸ್ಕಿ

ಏಜೆನ್ಸೀಸ್
Published 2 ಮೇ 2022, 4:16 IST
Last Updated 2 ಮೇ 2022, 4:16 IST
ವೊಲೊಡಿಮಿರ್ ಝೆಲೆ‌ನ್‌ಸ್ಕಿ
ವೊಲೊಡಿಮಿರ್ ಝೆಲೆ‌ನ್‌ಸ್ಕಿ    

ಕೀವ್: ಅಮೆರಿಕದ ಸಂಸತ್ತಿನ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರೊಂದಿಗೆ ಕೀವ್‌ನಲ್ಲಿ ಗಂಟೆಗೂ ಅಧಿಕ ಕಾಲ ನಡೆದ ವಾರಾಂತ್ಯದ ಸಭೆಯು ಕಠಿಣ ಸಮಯದಲ್ಲಿನ ಬೆಂಬಲದ ಪ್ರಬಲ ಸಂಕೇತವಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆ‌ನ್‌ಸ್ಕಿ ತಿಳಿಸಿದ್ದಾರೆ.

ಭಾನುವಾರ ಸಂಜೆ ದೂರದರ್ಶನದ ಭಾಷಣದಲ್ಲಿ, ಪೆಲೋಸಿ ಅವರೊಂದಿಗಿನ ಸಭೆಯಲ್ಲಿ ಉಕ್ರೇನ್‌ಗೆ ರಕ್ಷಣಾ ಸರಬರಾಜು, ಆರ್ಥಿಕ ಬೆಂಬಲ ಮತ್ತು ರಷ್ಯಾದ ವಿರುದ್ಧದ ನಿರ್ಬಂಧಗಳ ಚರ್ಚೆಗಳನ್ನು ಒಳಗೊಂಡಿತ್ತು ಎಂದು ಝೆಲೆನ್‌ಸ್ಕಿ ಹೇಳಿದ್ದಾರೆ.

ಪೆಲೋಸಿ ಮತ್ತು ಅಮೆರಿಕದ ಕೆಲ ಸಂಸದರು ಶನಿವಾರ ಸುಮಾರು ಮೂರು ಗಂಟೆಗಳ ಕಾಲ ಝೆಲೆನ್‌ಸ್ಕಿ ಮತ್ತು ಅವರ ಉನ್ನತ ಸಹಾಯಕರೊಂದಿಗೆ ಸಭೆ ನಡೆಸಿದರು. ಆಕ್ರಮಣವನ್ನು ಎದುರಿಸುತ್ತಿರುವ ರಾಷ್ಟ್ರದೊಂದಿಗೆ ಅಮೆರಿಕದ ಒಗ್ಗಟ್ಟು ವ್ಯಕ್ತಪಡಿಸಲು ಮತ್ತು ಸಂಸತ್ತಿನ ಮೂಲಕ ಉಕ್ರೇನ್‌ಗೆ ಹೊಸದಾಗಿ ಬೃಹತ್ ನೆರವು ಪ್ಯಾಕೇಜ್ ಘೋಷಿಸಲು ಕೆಲಸ ಮಾಡುತ್ತಿರುವ ಅವರು, ಮೊದಲ ಹಂತದ ಮೌಲ್ಯಮಾಪನ ನಡೆಸಿದರು.

ADVERTISEMENT

'ಇಂತಹ ಕಷ್ಟದ ಸಮಯದಲ್ಲಿ ನಮ್ಮ ರಾಜಧಾನಿಗೆ ಭೇಟಿ ನೀಡುವ ಮೂಲಕ ಅಂತಹ ಪ್ರಮುಖ ಮತ್ತು ಶಕ್ತಿಯುತ ಬೆಂಬಲದ ಸಂಕೇತಗಳನ್ನು ರವಾನಿಸಿರುವ ಎಲ್ಲಾ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಪಾಲುದಾರರಿಗೆ ಉಕ್ರೇನ್ ಜನರು ಕೃತಜ್ಞರಾಗಿದ್ದೇವೆ' ಎಂದು ಝೆಲೆನ್‌ಸ್ಕಿ ಹೇಳಿದರು.

ಫೆಬ್ರುವರಿ ಅಂತ್ಯದಲ್ಲಿ ಉಕ್ರೇನ್‌ ಮೇಲೆ ರಷ್ಯಾದ ಆಕ್ರಮಣ ಪ್ರಾರಂಭವಾದಾಗಿನಿಂದ ತೆರೆದಿರುವ ಮಾನವೀಯ ಕಾರಿಡಾರ್‌ಗಳ ಮೂಲಕ 3,50,000 ಕ್ಕೂ ಹೆಚ್ಚು ಜನರನ್ನು ಯುದ್ಧ ವಲಯಗಳಿಂದ ಸ್ಥಳಾಂತರಿಸಲಾಗಿದೆ ಎಂದು ಝೆಲೆನ್‌ಸ್ಕಿ ಅಂದಾಜಿಸಿದ್ದಾರೆ.

ಬಾಂಬ್ ಸ್ಫೋಟಗೊಂಡ ಮರಿಯುಪೋಲ್‌ ನಗರದಲ್ಲಿರುವ ಸ್ಟೀಲ್ ಪ್ಲಾಂಟ್‌ನಿಂದ ಭಾನುವಾರವೂ ಅನೇಕ ನಾಗರಿಕರನ್ನು ಸ್ಥಳಾಂತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.