ಕೈವ್ (ಉಕ್ರೇನ್):ತಮ್ಮ ಸಂಬಂಧವನ್ನು ಗಟ್ಟಿಗೊಳಿಸುವ ಉದ್ದೇಶದೊಂದಿಗೆ ಪರಸ್ಪರ ಕೈಕೋಳ ತೊಟ್ಟು ಬೆಸೆದುಕೊಂಡಿದ್ದ ಉಕ್ರೇನ್‌ನ ಜೋಡಿ 123 ದಿನಗಳ ಬಳಿಕ ಅದನ್ನು ಮಾಧ್ಯಮಗಳ ಎದುರು ಕತ್ತರಿಸಿ ಬೇರ್ಪಟ್ಟಿದ್ದಾರೆ.
‘ಈ ಪ್ರಯೋಗವೂ ನಮಗೆ ಸಹ್ಯವಲ್ಲದ ಸತ್ಯಗಳನ್ನು ತಿಳಿಸಿದೆ. ಈ ಪ್ರಯೋಗವನ್ನು ಯಾವ ಜೋಡಿಯೂ ಮಾಡಬಾರದು,‘ ಎಂದು ಅಲೆಕ್ಸಾಂಡರ್ ಕುಡ್ಲೆ ಮತ್ತು ವಿಕ್ಟೋರಿಯಾ ಪುಸ್ಟೊವಿಟೋವಾ ಹೇಳಿಕೊಂಡಿದ್ದಾರೆ.
ಪೂರ್ವ ಉಕ್ರೇನ್‌ನ ಖಾರ್ಕಿವ್ ಎಂಬಲ್ಲಿನ ಜೋಡಿ ಪ್ರೇಮಿಗಳ ದಿನದಂದು ತಮ್ಮನ್ನು ಕೈಕೋಳದ ಮೂಲಕ ಪರಸ್ಪರ ಬೆಸೆದುಕೊಂಡಿದ್ದರು. ಅನಿಶ್ಚಿತತೆಯ ತೂಗುಯ್ಯಾಲೆಯಲ್ಲಿ ತೂಗಾಡುತ್ತಿದ್ದ ತಮ್ಮ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳಲು ಜೋಡಿ ನಡೆಸಿದ್ದ ಕಡೇ ಪ್ರಯತ್ನ ಅದಾಗಿತ್ತು.
ಪ್ರಯೋಗದ ಉದ್ದಕ್ಕೂ ಅವರು ಜೊತೆಯಾಗಿಯೇ ಜೀವಿಸಿದ್ದರು. ಶಾಪಿಂಗ್‌ಗೆ ಹೋಗುವುದು, ಆಹಾರ ಸೇವಿಸುವುದು, ಸಿಗರೇಟ್ ವಿರಾಮ, ಶೌಚಾಲಯ, ಸ್ನಾನಗೃಹ ಹೀಗೆ ಎಲ್ಲ ಖಾಸಗಿ ಕ್ಷಣಗಳಲ್ಲೂ ಅವರು ಒಟ್ಟೊಟ್ಟಿಗೇ ಬದುಕಿದ್ದಾರೆ.
ಕೈಕೋಳ ತೊಟ್ಟು ಬಂಧಿಗಳಾಗುವ ಕಲ್ಪನೆಯನ್ನು ವಿರೋಧಿಸಿದ್ದ ಪುಸ್ಟೊವಿಟೋವಾ, ಈಗ ಅದನ್ನು ಕತ್ತರಿಸಿರುವುದನ್ನು ಪ್ರಶ್ನೆ ಮಾಡುತ್ತಲೇ ಕಣ್ಣೀರಾದರು.
‘ಇದರ ಮೂಲಕ ನಾವು ಒಳ್ಳೆ ಪಾಠ ಕಲಿತಿದ್ದೇವೆ. ಉಕ್ರೇನ್ ಜೋಡಿಯಾಗಲಿ, ವಿದೇಶದಲ್ಲಿರುವ ಯಾವುದೇ ಜೋಡಿಗಳಾಗಲಿ ಈ ಪ್ರಯೋಗ ಮಾಡದೇ ಇರುವುದು ಉತ್ತಮ. ವೈಯಕ್ತಿಕ ಜೀವನ ಎಂಬುದು ಬಹಳ ಮುಖ್ಯ. ನನ್ನ ಜೊತೆಗೇ ಇದ್ದರೂ ನನ್ನ ಸಂಗಾತಿ ನನ್ನ ಕಡೆಗೆ ಹೆಚ್ಚು ಗಮನಹರಿಸಲೇ ಇಲ್ಲ,’ ಎಂದು ಪುಸ್ಟೊವಿಟೋವಾ ಹೇಳಿಕೊಂಡಿದ್ದಾರೆ.
‘ಎಲ್ಲ ದಿನಗಳಲ್ಲೂ ನಾವು ಒಟ್ಟಿಗೆ ಇದ್ದೆವು. ಆದರೆ, ಕುಡ್ಲೆ ನನ್ನ ಕಡೆಗೆ ಹೆಚ್ಚು ಗಮನ ಕೊಡಲೇ ಇಲ್ಲ. ಯಾಕಂದರೆ ನಾವು ಜೊತೆಗೇ ಇದ್ದೆವು. ‘ಐ ಮಿಸ್ ಯು‘ ಎಂಬ ಮಾತನ್ನು ಆತ ಒಮ್ಮೆಯೂ ಆಡಲಿಲ್ಲ. ಆದರೆ, ಅವನಿಂದ ಆ ಮಾತು ಕೇಳಲು ನಾನು ಸದಾ ಕಾತರಿಸುತ್ತಿದ್ದೆ,‘ ಎಂದು 29 ವರ್ಷದ ಪುಸ್ಟೊವಿಟೋವಾ ಹೇಳಿಕೊಂಡಿದ್ದಾರೆ.
ನಮ್ಮ ಸಂಬಂಧವನ್ನು ಉಳಿಸಿಕೊಳ್ಳಲು ಈ ಪ್ರಯತ್ನ ನಡೆಸಿದ್ದಕ್ಕಾಗಿ ನನಗೇನೂ ವಿಷಾದವಿಲ್ಲ. ಇದರಿಂದ ನನಗೆ ಗೊತ್ತಾಗಿದ್ದೇನೆಂದರೆ, ನಾವಿಬ್ಬರೂ ಸಮಾನ ಮನಸ್ಕರಲ್ಲ. ನಾವು ಸಂಪೂರ್ಣ ಭಿನ್ನರಾಗಿದ್ದೇವೆ ಎಂಬುದು,‘ ಎಂದು ಕುಡ್ಲೆ ಹೇಳಿದ್ದಾರೆ.
ಜೋಡಿ ತಾವು ತೊಟ್ಟಿದ್ದ ಕೈಕೋಳವನ್ನು ಆನ್‌ಲೈನ್ ಹರಾಜಿನಲ್ಲಿ ಮಾರಾಟ ಮಾಡಿ ಹಣ ಸಂಗ್ರಹಿಸುವ ಉದ್ದೇಶ ಹೊಂದಿದ್ದಾರೆ. ಬಂದ ಹಣದ ಒಂದು ಭಾಗವನ್ನು ದಾನ ಮಾಡಲು ಚಿಂತಿಸಿದ್ದಾರೆ.
ಇಬ್ಬರೂ ಉಕ್ರೇನಿಯನ್ ಸುದ್ದಿ ವಾಹಿನಿಗಳ ಎದುರು ಕೈಕೋಳವನ್ನು ಕತ್ತರಿಸಿದರು. ಪರಸ್ಪರ ಅತಿ ದೀರ್ಘ ಅವಧಿಗೆ ಒಟ್ಟಿಗೆ ಇದ್ದ ಜೋಡಿ ಎಂಬ ಹೆಗ್ಗಳಿಕೆಗೆ ಇವರಿಬ್ಬರು ಪಾತ್ರರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.