ADVERTISEMENT

ಉಕ್ರೇನ್ ವಿಮಾನ ಪತನಕ್ಕೆ ನಾವೇ ಕಾರಣ, ಆದರೆ ಉದ್ದೇಶಪೂರ್ವಕವಲ್ಲ: ಇರಾನ್ ಸೇನೆ

ಏಜೆನ್ಸೀಸ್
Published 11 ಜನವರಿ 2020, 6:24 IST
Last Updated 11 ಜನವರಿ 2020, 6:24 IST
ಉಕ್ರೇನ್‌ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌ನ ಬೋಯಿಂಗ್ ವಿಮಾನ ಪತನದ ಅವಶೇಷಗಳು.
ಉಕ್ರೇನ್‌ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌ನ ಬೋಯಿಂಗ್ ವಿಮಾನ ಪತನದ ಅವಶೇಷಗಳು.   

ದುಬೈ: ಭಾರಿ ಚರ್ಚೆಗೆ ಗ್ರಾಸವಾಗಿದ್ದ ಉಕ್ರೇನ್‌ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌ನ ಬೋಯಿಂಗ್ ವಿಮಾನ ಪತನಗೊಳ್ಳಲು ತಾನೇ ಕಾರಣ ಎಂದು ಇರಾನ್ ಒಪ್ಪಿಕೊಂಡಿದ್ದು, ಆದರೆ ಇದು ಮಾನವನ ತಪ್ಪು ಗ್ರಹಿಕೆಯಿಂದ ಹೊಡೆದುರುಳಿಸಲಾಗಿದೆಹೊರತು ಉದ್ದೇಶಪೂರ್ವಕವಾಗಿ ಅಲ್ಲ ಎಂದು ಇರಾನಿಯನ್ ಮಿಲಿಟರಿ ಹೇಳಿಕೆ ಸ್ಥಳೀಯ ಮಾಧ್ಯಮದಲ್ಲಿ ವರದಿಯಾಗಿದೆ.

ವಿಮಾನ ಪತನಕ್ಕೆ ಸಂಬಂಧಿಸಿದಂತೆ ತನಿಖೆಗೆ ಮಿಲಿಟರಿ ನ್ಯಾಯಾಂಗ ಇಲಾಖೆಗೆ ಆದೇಶಿಸಲಾಗಿತ್ತು.

ಇರಾನ್ ವಿದೇಶಾಂಗ ಸಚಿವ ಜಾವೇದ್ ಜರೀಫ್ ಟ್ವೀಟ್ ಮಾಡಿ, ಸೇನೆ ಕೈಗೊಂಡ ಆಂತರಿಕ ತನಿಖೆಯಲ್ಲಿ ಅಮೆರಿಕದ ಸಾಹಸದಿಂದ ಉಂಟಾದ ಬಿಕ್ಕಟ್ಟಿನ ಸಮಯದಲ್ಲಿ ಮಾನವ ದೋಷದಿಂದಾಗಿ ಈ ವಿಪತ್ತು ಸಂಭವಿಸಿರುವುದು ತಿಳಿದಿದೆ. ಅವಘಡದಲ್ಲಿ ಮೃತಪಟ್ಟವರ ಕುಟುಂಬ ಮತ್ತು ಸಂಬಂಧಿಸಿದರಾಷ್ಟ್ರಗಳಿಗೆ ತೀವ್ರ ವಿಷಾದ, ಕ್ಷಮೆ ಮತ್ತು ಸಂತಾಪವನ್ನು ಸೂಚಿಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.

ADVERTISEMENT

ಘಟನೆಯಲ್ಲಿ ಮೃತಪಟ್ಟ ಕುಟುಂಬಗಳಿಗೆ ಇರಾನ್ ಮಿಲಿಟರಿ ಹೇಳಿಕೆಯಲ್ಲಿ ಸಂತಾಪ ಸೂಚಿಸಲಾಗಿದೆ.

ಈ ಮೊದಲು ಉಕ್ರೇನ್‌ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌ನ ಬೋಯಿಂಗ್ ವಿಮಾನ ಪತನಗೊಳ್ಳಲು ಇರಾನ್‌ ನಡೆಸಿದ ಕ್ಷಿಪಣಿ ದಾಳಿಯೇ ಕಾರಣ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದವು.

ಇರಾಕ್‌ನಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್‌ ಹಾರಿಸಿದ್ದ ಕ್ಷಿಪಣಿಗಳ ಪೈಕಿ ಒಂದು ಆಕಸ್ಮಿಕವಾಗಿ ವಿಮಾನಕ್ಕೆ ಬಡಿದು ದುರಂತ ಸಂಭವಿಸಿದೆ ಎಂದು ಅಮೆರಿಕ, ಕೆನಡಾ ಹಾಗೂ ಇಂಗ್ಲೆಂಡ್‌ ಅಧಿಕಾರಿಗಳು ಮಾಹಿತಿ ನೀಡಿದ್ದರು. ಆದರೆ ಇರಾನ್ ಇದನ್ನು ನಿರಾಕರಿಸಿತ್ತು.

ಜನವರಿ 8ರಂದು ಇರಾನ್ ರಾಜಧಾನಿ ಟೆಹರಾನ್‌ನಿಂದ ಉಕ್ರೇನ್‌ನ ಕೀವ್‌ಗೆ ಹೊರಟಿದ್ದ ಉಕ್ರೇನ್‌ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌ನ ಬೋಯಿಂಗ್ 737 ವಿಮಾನವು ಟೇಕಾಪ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನ ನಿಲ್ದಾಣದ ಬಳಿ ಪತನಗೊಂಡಿತ್ತು. ಪರಿಣಾಮ ವಿಮಾನದಲ್ಲಿದ್ದ 168 ಪ್ರಯಾಣಿಕರು ಮತ್ತು 9 ಸಿಬ್ಬಂದಿ ಮೃತಪಟ್ಟಿದ್ದರು. ವಿಮಾನದಲ್ಲಿ 63 ಮಂದಿ ಕೆನಡಾ ಪ್ರಯಾಣಿಕರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.