ಕೀವ್: ತಮ್ಮ ದೇಶದ ಮೇಲೆ ಆಕ್ರಮಣ ಮಾಡಿರುವ ರಷ್ಯಾ ವಿರುದ್ಧ ಉಕ್ರೇನ್ ಸೈನಿಕರು ಹೋರಾಟ ನಡೆಸುತ್ತಿದ್ದಾರೆ. ಈ ಮಧ್ಯೆ ನಾಗರಿಕರು ಸಹ ತಮ್ಮದೇ ಆದ ರೀತಿಯಲ್ಲಿ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದಾರೆ.
ಅಪರಿಚಿತ ಉಕ್ರೇನ್ ಮಹಿಳೆಯೊಬ್ಬರು ರಷ್ಯಾ ಸೈನಿಕರನ್ನು ಪ್ರಶ್ನಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಉಕ್ರೇನ್ ದೇಶಪ್ರೇಮಿಗಳ ಹೃದಯ ಗೆದ್ದಿದೆ. ಅವರ ಕೈಗೆ ಸೂರ್ಯಕಾಂತಿ ಬೀಜವನ್ನು ಕೊಟ್ಟು ಇದನ್ನು ಜೇಬಿನಲ್ಲಿ ಇಟ್ಟುಕೊಳ್ಳಿ. ನೀವು ಉಕ್ರೇನ್ ನೆಲದಲ್ಲಿ ಸತ್ತ ಬಳಿಕ ಸಸಿಯಾಗಿ ಬೆಳೆಯುತ್ತವೆ ಎಂದು ಶಸ್ತ್ರಸಜ್ಜಿತ ರಷ್ಯಾ ಯೋಧರಿಗೆ ಆ ಮಹಿಳೆ ತಿರುಗೇಟು ಕೊಟ್ಟಿದ್ದಾರೆ.
ಏನಿದು ಘಟನೆ?: ದಾರಿಯಲ್ಲಿ ಹೋಗುತ್ತಿದ್ದ ಮಹಿಳೆ, ರಷ್ಯಾ ಯೋಧರನ್ನು ಕಂಡು, ‘ನೀವು ಯಾರು?’ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಒಬ್ಬ ಸೈನಿಕ, ‘ನಾನು ರಷ್ಯಾದ ಯೋಧ, ನಮಗೆ ಇಲ್ಲಿ ಕೆಲಸವಿದೆ. ದಯವಿಟ್ಟು ಈ ಜಾಗ ಬಿಟ್ಟು ಹೋಗಿ’ಎಂದು ಹೇಳುತ್ತಾನೆ. ರಷ್ಯಾ ಯೋಧ ಎಂಬ ಶಬ್ದ ಕಿವಿಗೆ ಬೀಳುತ್ತಿದ್ದಂತೆ ಆ ಮಹಿಳೆ,‘ಹಾಗಾದರೆ, ನೀವು ಇಲ್ಲಿ ಏನು ಮಾಡುತ್ತಿದ್ದೀರಿ?’ ಎಂದು ಕೋಪದಿಂದ ಕೇಳಿದ್ದಾರೆ.
ಅದಕ್ಕುತ್ತರಿಸಿದ ಯೋಧ, ಈ ನಮ್ಮ ಚರ್ಚೆಯಿಂದ ಯಾವುದೇ ಲಾಭವಿಲ್ಲ ಹೋಗಿ’ಎನ್ನುತ್ತಾನೆ.
ಇದರಿಂದ ಕೋಪಗೊಂಡ ಮಹಿಳೆ, ‘ನೀವು ನಮ್ಮ ದೇಶವನ್ನು ವಶಪಡಿಸಿಕೊಳ್ಳಲು ಬಂದಿರುವವರು, ನೀವು ಫ್ಯಾಸಿಸ್ಟ್‌ಗಳು! ಈ ಬಂದೂಕುಗಳೊಂದಿಗೆ ನೀವು ನಮ್ಮ ಭೂಮಿಯಲ್ಲಿ ಏನು ಮಾಡುತ್ತಿದ್ದೀರಿ? ಈ ಬೀಜಗಳನ್ನು ತೆಗೆದುಕೊಂಡು ಅವುಗಳನ್ನು ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳಿ. ನೀವೆಲ್ಲರೂ ಇಲ್ಲಿ ಸತ್ತು ಬಿದ್ದ ಬಳಿಕ ಕನಿಷ್ಠ ಸೂರ್ಯಕಾಂತಿ ಗಿಡ ಬೆಳೆಯುತ್ತದೆ’ ಎಂದು ಮಹಿಳೆ ಹೇಳಿದ್ದಾರೆ.
ಸೈನಿಕರು ಯಾವುದಕ್ಕೂ ಜಗ್ಗದೆ ನಿಂತಿದ್ದನ್ನು ಗಮನಿಸಿದ ಮಹಿಳೆ ಅವರನ್ನು ಛೇಡಿಸುತ್ತಾ,‘ನಾನು ನಿಮಗೆ ಹೇಳುತ್ತಿದ್ದೇನೆ.. ಈ ಕ್ಷಣದಿಂದ ನೀವು ಶಾಪಗ್ರಸ್ತರು’ಎಂದು ಕಿಡಿಕಾರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.