ಲಂಡನ್: ಪಾರ್ಶ್ವವಾಯು ಮತ್ತು ಹೃದಯಾಘಾತದಂಥ ಆರೋಗ್ಯ ಸಮಸ್ಯೆಗಳನ್ನು ತಡೆಯುವ ನಿಟ್ಟಿನಲ್ಲಿ ಮಹತ್ವದ ಅಭಿಯಾನ ಆರಂಭಿಸಿರುವ ಬ್ರಿಟನ್ ಸರ್ಕಾರವು, ಅಭಿಯಾನದ ಭಾಗವಾಗಿ ಕ್ಷೌರದಂಗಡಿ ಮತ್ತು ಪ್ರಾರ್ಥನಾ ಸ್ಥಳಗಳಲ್ಲೂ ರಕ್ತದೊತ್ತಡ ಪರೀಕ್ಷಿಸುವ ಸೌಲಭ್ಯವನ್ನು ವಿಸ್ತರಿಸುವುದಾಗಿ ಮಂಗಳವಾರ ಹೇಳಿದೆ.
ಸ್ಥಳೀಯ ಆರೋಗ್ಯ ಸೇವಾ ತಂಡಗಳನ್ನು ಜನರಲ್ಲಿಗೆ ಕಳಿಸಿ, ಸಾಂಭವ್ಯ ಆರೋಗ್ಯ ಸಮಸ್ಯೆಗಳು ಗಂಭೀರ ಸ್ವರೂಪಕ್ಕೆ ತಿರುಗುವ ಮೊದಲೇ ಅವನ್ನು ಪತ್ತೆ ಮಾಡುವ ಕೆಲಸ ಮಾಡಲಾಗುತ್ತಿದೆ. ಕೋವಿಡ್–19 ಲಸಿಕಾ ಕಾರ್ಯಕ್ರಮದ ಕಲಿಕೆಯನ್ನು ಹೃದಯದ ಆರೋಗ್ಯದ ವಿಚಾರದಲ್ಲೂ ಅಳವಡಿಸಿಕೊಳ್ಳಲಾಗಿದೆ ಎಂದು ಬ್ರಿಟನ್ ಸರ್ಕಾರ ನಡೆಸುವ ರಾಷ್ಟ್ರೀಯ ಆರೋಗ್ಯ ಸೇವೆ (ಎನ್‌ಎಚ್‌ಎಸ್) ತಿಳಿಸಿದೆ.
ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಗಳಿಂದ ಬಳಲುವವರ ಸಂಖ್ಯೆಯು ಬರುವ ವರ್ಷಗಳಲ್ಲಿ ಇನ್ನೂ ಹೆಚ್ಚಾಗಲಿದೆ. ಇಂಥ ಸಮಸ್ಯೆಗಳ ಕುರಿತು ಮೊದಲೇ ಸೂಚನೆ ನೀಡುವಂಥ ರಕ್ತದೊತ್ತಡ ಪರೀಕ್ಷೆಯ ಸೌಲಭ್ಯವು ಸುಲಭದಲ್ಲಿ ಸಿಗುವಂತೆ ಮಾಡಬೇಕು. ಔಷಧದಂಗಡಿಗಳಲ್ಲಿ ರಕ್ತದೊತ್ತಡ ಪರೀಕ್ಷೆಗಳನ್ನು ನಡೆಸುವ ಮೂಲಕ ಈ ವರ್ಷ 1,300 ಹೃದಯಾಘಾತ ಮತ್ತು ಪಾರ್ಶ್ವವಾಯುವನ್ನು ತಡೆಯಲಾಗಿದೆ ಎಂದು ಇತ್ತೀಚಿನ ಅಂಕಿ ಅಂಶಗಳಿಂದ ತಿಳಿದುಬಂದಿದೆ ಎಂದು ಇಂಗ್ಲೆಂಡ್‌ನ ಮುಖ್ಯ ಔಷಧಾಧಿಕಾರಿ ಡೇವಿಡ್ ವೆಬ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.