ADVERTISEMENT

ಗಾಜಾದಲ್ಲಿ ಆಹಾರ ವಿತರಣೆ ವೇಳೆ 100ಕ್ಕೂ ಅಧಿಕ ಜನರ ಸಾವು: ವಿಶ್ವಸಂಸ್ಥೆ ಖಂಡನೆ

ಪಿಟಿಐ
Published 1 ಮಾರ್ಚ್ 2024, 3:23 IST
Last Updated 1 ಮಾರ್ಚ್ 2024, 3:23 IST
ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್
ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್   

ನ್ಯೂಯಾರ್ಕ್: ಪ್ಯಾಲೆಸ್ಟೀನ್‌ನ ಗಾಜಾದಲ್ಲಿ ಆಹಾರ ವಿತರಣೆ ಸಂದರ್ಭ ಸಂಭವಿಸಿದ ನೂಕು ನುಗ್ಗಲಿನಲ್ಲಿ ನೂರಾರು ಜನರ ಸಾವಿನ ಕುರಿತಂತೆ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಟೊನಿಯೊ ಗುಟೆರಸ್ ಖಂಡನೆ ವ್ಯಕ್ತಪಡಿಸಿದ್ದಾರೆ ಎಂದು ಎಎನ್‌ಐ ಟ್ವೀಟಿಸಿದೆ.

ಆಹಾರಕ್ಕಾಗಿ ಪರಿಹಾರ ಟ್ರಕ್‌ಗಳ ಬಳಿ ಸೇರಿದ ಜನರ ಮೇಲೆ ಇಸ್ರೇಲ್ ಪಡೆಗಳು ಗುಂಡು ಹಾರಿಸಿದ್ದರಿಂದ ಉಂಟಾದ ನೂಕು ನುಗ್ಗಲಿನಲ್ಲಿ 100ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ಪ್ಯಾಲೆಸ್ಟೀನ್ ಆರೋಗ್ಯ ಸಚಿವಾಲಯ ಹೇಳಿದೆ. ಆದರೆ, ಈ ಕುರಿತಂತೆ ಇಸ್ರೇಲ್ ಮತ್ತು ಪ್ರತ್ಯಕ್ಷದರ್ಶಿಗಳು ಬೇರೆ ಬೇರೆ ಕಥೆಗಳನ್ನು ಹೇಳುತ್ತಿದ್ದಾರೆ ಎಂದು ಸಿಎನ್‌ಎನ್‌ ವರದಿ ಮಾಡಿದೆ.

‘ತೀವ್ರ ಹತಾಶೆಯಲ್ಲಿರುವ ಗಾಜಾ ಜನರಿಗೆ ತುರ್ತು ನೆರವಿನ ಅಗತ್ಯವಿದೆ. ಅದರಲ್ಲೂ ಉತ್ತರ ಗಾಜಾದಲ್ಲಿ ಸಿಲುಕಿರುವವರ ಸ್ಥಿತಿ ಶೋಚನೀಯವಾಗಿದ್ದು, ವಾರದಿಂದ ಇಲ್ಲಿ ವಿಶ್ವಸಂಸ್ಥೆ ನೆರವನ್ನು ಒದಗಿಸಲು ಸಾಧ್ಯವಾಗಿರಲಿಲ್ಲ’ ಎಂದು ವಿಶ್ವಸಂಸ್ಥೆಯ ಮುಖ್ಯಸ್ಥರ ವಕ್ತಾರ ಸ್ಟೀಫನ್ ಡುಜಾರಿಕ್ ಹೇಳಿದ್ದಾರೆ.

ADVERTISEMENT

ಘಟನಾ ಸ್ಥಳದಲ್ಲಿ ವಿಶ್ವಸಂಸ್ಥೆಯ ಪ್ರತಿನಿಧಿ ಇರಲಿಲ್ಲ ಎಂದಿರುವ ಅವರು, ಈ ಬಗ್ಗೆ ಕೂಲಂಕಷ ತನಿಖೆಗೆ ಒತ್ತಾಯಿಸಿದ್ದಾರೆ.

ಗಾಜಾದಲ್ಲಿ ಜನರ ಸಾವಿನ ಕುರಿತಂತೆ ಪ್ರತಿಕ್ರಿಯಿಸಿರುವ ಗುಟೆರಸ್, ತುರ್ತಾಗಿ ಮಾನವೀಯ ನೆಲೆಯಲ್ಲಿ ಯುದ್ಧ ವಿರಾಮದ ಅಗತ್ಯತೆಯನ್ನು ಒತ್ತಿ ಹೇಳಿದ್ದಾರೆ. ಅಲ್ಲದೆ, ಗಾಜಾದಲ್ಲಿರುವ ಇಸ್ರೇಲ್ ಒತ್ತೆಯಾಳುಗಳನ್ನು ಬೇಷರತ್ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ವಿಶ್ವಸಂಸ್ತೆಯ ಮಾನವೀಯ ವ್ಯವಹಾರಗಳು ಮತ್ತು ತುರ್ತು ಪರಿಹಾರ ಸಂಯೋಜಮಾ ಕಾರ್ಯದರ್ಶಿ ಮಾರ್ಟಿನ್ ಗ್ರಿಫಿತ್, 5 ತಿಂಗಳ ಭೀಕರ ಯುದ್ಧ ಮತ್ತು ಒತ್ತೆಯಾಳುಗಳ ಬಿಡುಗಡೆ ಕಾರ್ಯಾಚರಣೆಗಳ ಬಳಿಕವೂ ಗಾಜಾದಲ್ಲಿ ಇನ್ನೂ ಆಘಾತಕಾರಿ ಘಟನೆಗಳು ನಡೆಯುತ್ತಿವೆ ಎಂದಿದ್ಧಾರೆ.

ಈ ನಡುವೆ ಘಟನೆ ಕುರಿತಂತೆ ಗಮನ ಸೆಳೆಯಲು ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆ ಕರೆಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.