ಮಾಂಟ್ರಿಯಲ್, ಕೆನಡಾ : ಜಗತ್ತಿನ ಜೀವವೈವಿಧ್ಯ ಸಂರಕ್ಷಿಸಲು ಶ್ರೀಮಂತ ದೇಶಗಳು ಅಭಿವೃದ್ಧಿಶೀಲ ದೇಶಗಳಿಗೆ ನೀಡುವ ಹಣಕಾಸು ನೆರವಿನ ಮೊತ್ತ ಹೆಚ್ಚಿಸುವ ಐತಿಹಾಸಿಕ ನಿರ್ಣಯಗಳನ್ನು ವಿಶ್ವಸಂಸ್ಥೆ ಜೀವವೈವಿಧ್ಯ ಸಮ್ಮೇಳನದಲ್ಲಿ (ಸಿಒಪಿ 15) ತೆಗೆದುಕೊಳ್ಳಲಾಗಿದೆ.
ವಿಶ್ವದಾದ್ಯಂತ ಭೂಮಿ ಮತ್ತು ಸಾಗರಗಳನ್ನು ರಕ್ಷಿಸುವ ಉದ್ದೇಶಕ್ಕೆ ಆರ್ಥಿಕ ನೆರವನ್ನು 2025ರ ಒಳಗೆ ವಾರ್ಷಿಕ 1.6 ಲಕ್ಷ ಕೋಟಿಗೆ ಮತ್ತು 2030ರ ವೇಳೆಗೆ ₹2.4 ಲಕ್ಷ ಕೋಟಿಗೆ ಹೆಚ್ಚಿಸುವ ಮಹತ್ವದ ಒಪ್ಪಂದಕ್ಕೆ ಬರುವಲ್ಲಿ ಪ್ರಮುಖ ರಾಷ್ಟ್ರ
ಗಳ ಪ್ರತಿನಿಧಿಗಳು ಸೋಮವಾರ ಯಶಸ್ವಿಯಾದರು.
ಸದ್ಯ ಶೇ 17ರಷ್ಟು ಭೂಪ್ರದೇಶ ಮತ್ತು ಶೇ 10ರಷ್ಟು ಕರಾವಳಿ ಪ್ರದೇಶ ಸಂರಕ್ಷಿಸಲಾಗಿದೆ.2030ರ ವೇಳೆಗೆ ಜೀವವೈವಿಧ್ಯದ ರಕ್ಷಣೆಗಾಗಿ ಶೇ 30ರಷ್ಟು ನೆಲ, ಜಲ ಸಂರಕ್ಷಣೆಗೆ ಆದ್ಯತೆ ನೀಡುವುದು ಈ ಒಪ್ಪಂದದ ಮುಖ್ಯಾಂಶಗಳಲ್ಲಿ ಒಂದಾಗಿದೆ.
ಈ ಬಾರಿಯ ಸಮ್ಮೇಳನದ ಅಧ್ಯಕ್ಷತೆ ವಹಿಸಿರುವ ಚೀನಾ, ಜೀವವೈವಿಧ್ಯ ಸಂರಕ್ಷಣೆಗೆ ಸಂಬಂಧಿಸಿ ಕರಡು ಬಿಡುಗಡೆ ಮಾಡಿತು. ಆದರೆ ಈ ಕರಡು ಅನುಷ್ಠಾನಕ್ಕೆ ಬರಲು 196 ಸದಸ್ಯ ರಾಷ್ಟ್ರಗಳು ಒಪ್ಪಿಗೆ ನೀಡಬೇಕಿದೆ.
‘ಜೀವವೈವಿಧ್ಯ ಸಂರಕ್ಷಣೆಗೆ ಇಷ್ಟೊಂದು ದೊಡ್ಡ
ಮಟ್ಟದ ಗುರಿಯನ್ನು ಈವರೆಗೂ ಹೊಂದಿರಲಿಲ್ಲ’ ಎಂದು ದಿ ಕನ್ಸರ್ವೇಷನ್ ಗ್ರೂಪ್ ಕ್ಯಾಂಪೇನಿಂಗ್ ಫಾರ್ ನೇಚರ್ ಸಂಸ್ಥೆಯ ನಿರ್ದೇಶಕ ಬ್ರಿಯಾನ್ ಒ ಡೊನೆಲ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.