ADVERTISEMENT

ತಾಲಿಬಾನ್ ಕಪಿಮುಷ್ಠಿಯಲ್ಲಿ ಅಫ್ಗಾನಿಸ್ತಾನ: ಎದುರಾಗಲಿದೆಯಂತೆ ಭೀಕರ ಆಹಾರ ಸಮಸ್ಯೆ

1 ಕೋಟಿ 40 ಲಕ್ಷ ಜನ ಗಂಭೀರ ಹಸಿವಿನಿಂದ ಬಳಲಬಹುದು

ಪಿಟಿಐ
Published 19 ಆಗಸ್ಟ್ 2021, 5:59 IST
Last Updated 19 ಆಗಸ್ಟ್ 2021, 5:59 IST
ಅಫ್ಗಾನಿಸ್ತಾನ ಪೊಲೀಸರು ಅಲ್ಲಿನ ಪ್ರಜೆಗಳಿಗೆ ಆಹಾರ ಪೊಟ್ಟಣಗಳನ್ನು ನೀಡುತ್ತಿರುವುದು. ಚಿತ್ರ/ಎಎಫ್‌ಪಿ
ಅಫ್ಗಾನಿಸ್ತಾನ ಪೊಲೀಸರು ಅಲ್ಲಿನ ಪ್ರಜೆಗಳಿಗೆ ಆಹಾರ ಪೊಟ್ಟಣಗಳನ್ನು ನೀಡುತ್ತಿರುವುದು. ಚಿತ್ರ/ಎಎಫ್‌ಪಿ   

ವಿಶ್ವಸಂಸ್ಥೆ:‘ತಾಲಿಬಾನ್‌ ಹಿಡಿತದಲ್ಲಿ ಸಿಲುಕಿರುವ ಅಫ್ಗಾನಿಸ್ತಾನದಲ್ಲಿ ಮುಂಬರುವ ದಿನಗಳಲ್ಲಿ ಸುಮಾರು 1 ಕೋಟಿ 40 ಲಕ್ಷ ಜನ ಗಂಭೀರ ಹಸಿವಿನಿಂದ ಬಳಲಬಹುದು‘ ಎಂದು ವಿಶ್ವಸಂಸ್ಥೆ ಆಹಾರ ಕಾರ್ಯಕ್ರಮದ ನಿರ್ದೇಶಕಿ ಮೇರಿ ಎಲೆನ್ ಮ್ಯಾಕ್‌ಗ್ರೋಥಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಬುಧವಾರ ಅಫ್ಗಾನಿಸ್ತಾನದಲ್ಲಿರುವ ವಿಶ್ವಸಂಸ್ಥೆ ‍ಪ್ರತಿನಿಧಿಗಳ ಜೊತೆ ನಡೆಸಿದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

‘ಈಗಾಗಲೇ ಕಳೆದ ಎರಡು ವರ್ಷದಿಂದ ಅಫ್ಗಾನಿಸ್ತಾನ ತೀವ್ರ ಬರಗಾಲಕ್ಕೆ ಸಿಲುಕಿದೆ. ಈ ವರ್ಷವೂ ಬರಗಾಲದ ಮುನ್ಸೂಚನೆ ಇದೆ. ಅದಲ್ಲದೇ ಕೋವಿಡ್‌ನಿಂದಾಗಿ ಆರ್ಥಿಕ, ಸಾಮಾಜಿಕ ಏರುಪೇರುಗಳಾಗಿವೆ. ಈಗ ತಾಲಿಬಾನ್ ಬಿಕ್ಕಟ್ಟು ಅಫ್ಗನ್ ಜನರ ಹಸಿವಿನ ಮೇಲೆ ಮಹಾವಿನಾಶ ಸೃಷ್ಟಿಸಬಹುದು‘ ಎಂದು ಮೇರಿ ಎಲೆನ್ ಹೇಳಿದ್ದಾರೆ.

ADVERTISEMENT

‘ಈಗಾಗಲೇ ಎರಡು ವರ್ಷಗಳಲ್ಲಿ ಶೇ 40 ರಷ್ಟು ಬೆಳೆ ಬರಗಾಲದಿಂದ ಅಫ್ಗಾನಿಸ್ತಾನದಲ್ಲಿ ನಾಶವಾಗಿದೆ. ತಾಲಿಬಾನ್‌ ಆತಂಕದಿಂದ ಅನೇಕ ಜನ ತಮ್ಮ ವಾಸಸ್ಥಳಗಳನ್ನು ಬದಲಾಯಿಸಿದ್ದಾರೆ. ಹೀಗಾಗಿ ದೊಡ್ಡ ಆಹಾರ ಬಿಕ್ಕಟ್ಟು ಎದುರಾಗಬಹುದು‘ ಎಂದು ಅವರು ಹೇಳಿದ್ದಾರೆ.

‘ಇಲ್ಲಿಯವರೆಗೆ ವಿಶ್ವಸಂಸ್ಥೆ ಆಹಾರ ಕಾರ್ಯಕ್ರಮ ಅಫ್ಗಾನಿಸ್ತಾನದಲ್ಲಿ 40 ಲಕ್ಷ ಜನರನ್ನು ತಲುಪಿದೆ. ಇದನ್ನು ಇನ್ನೂ 90 ಲಕ್ಷಕ್ಕೆ ಏರಿಸುವ ಗುರಿ ಹಾಕಿಕೊಳ್ಳಲಾಗಿದೆ. ಆದರೆ, ನಮಗೀಗ ಅಫ್ಗನ್‌ನಲ್ಲಿದೊಡ್ಡ ಸವಾಲು ಸೃಷ್ಟಿಯಾಗಿದೆ‘ ಎಂದು ಹೇಳಿದ್ದಾರೆ. ‘ಅಫ್ಗನ್ ಆಹಾರ ಸಮಸ್ಯೆ ಬಗೆಹರಿಸಲು 200 ಮಿಲಿಯನ್ ಯುಎಸ್ ಡಾಲರ್ ಬೇಕಾಗಬಹುದು‘ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.