ADVERTISEMENT

ವಿಶ್ವಸಂಸ್ಥೆ: ಅಫ್ಗಾನಿಸ್ತಾನವನ್ನು ಪ್ರತಿನಿಧಿಸುವವರೇ ಇಲ್ಲ, ಮ್ಯಾನ್ಮಾರ್ ಗೈರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಸೆಪ್ಟೆಂಬರ್ 2021, 6:07 IST
Last Updated 28 ಸೆಪ್ಟೆಂಬರ್ 2021, 6:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನ್ಯೂಯಾರ್ಕ್‌: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಫ್ಗಾನಿಸ್ತಾನವನ್ನು ಪ್ರತಿನಿಧಿಸುವವರೇ ಇಲ್ಲದಂತಾಗಿದೆ. ಸಭೆಯ ಕೊನೆಯ ದಿನ ಸೋಮವಾರ ಆಫ್ಗನ್‌ ರಾಯಭಾರಿ ಗುಲಾಮ್‌ ಇಸಾಕ್‌ಜಾಯ್‌ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಬೇಕಿತ್ತು.

ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಲು ನಿಗದಿಯಾಗಿದ್ದ ಒಂದು ದಿನ ಮೊದಲು ಗುಲಾಮ್‌ ಇಸಾಕ್‌ಜಾಯ್‌ ನಾಮಪತ್ರವನ್ನು ಹಿಂತೆಗೆದುಕೊಂಡಿದ್ದಾರೆ. ತಿಂಗಳ ಹಿಂದಷ್ಟೇ ಸ್ಥಾಪಿತಗೊಂಡಿರುವ ತಾಲಿಬಾನ್‌ ಆಡಳಿತವು ಇಸಾಕ್‌ಜಾಯ್‌ ಅವರನ್ನು ತಮ್ಮ ಸರ್ಕಾರದ ರಾಯಭಾರಿ ಸ್ಥಾನದಿಂದ ಕಿತ್ತುಹಾಕಿದೆ.

ತಾಲಿಬಾನ್‌ನ ವಿದೇಶಾಂಗ ಸಚಿವ ಆಮಿರ್‌ ಖಾನ್‌ ಮುತ್ತಕ್ಕಿ ಕಳೆದ ವಾರವಷ್ಟೇ ವಿಶ್ವಸಂಸ್ಥೆಯಲ್ಲಿ ಅಂತರರಾಷ್ಟ್ರೀಯ ನಾಯಕರ ಸಭೆಯಲ್ಲಿ ಪಾಲ್ಗೊಳ್ಳಲು ಕೇಳಿದ್ದರು. ಇಸ್ಲಾಮಿಕ್‌ ಸಂಘಟನೆಯ ದೋಹಾ ಮೂಲದ ವಕ್ತಾರ ಸುಹೈಲ್‌ ಶಾಹೀನ್‌ ಅವರನ್ನು ಅಫ್ಗಾನಿಸ್ತಾನದ ರಾಯಭಾರಿಯಾಗಿ ನಾಮನಿರ್ದೇಶನ ಮಾಡಿದ್ದರು.

ADVERTISEMENT

ತಾಲಿಬಾನ್‌ ಆಡಳಿತದಿಂದ ಪದಚ್ಯುತಗೊಂಡಿದ್ದರೂ ಗುಲಾಮ್‌ ಇಸಾಕ್‌ಜಾಯ್‌ ಅವರು ವಿಶ್ವಸಂಸ್ಥೆಯಲ್ಲಿ ಅಫ್ಗಾನಿಸ್ತಾನವನ್ನು ಪ್ರತಿನಿಧಿಸುವ ಅಧಿಕೃತ ರಾಯಭಾರಿಯಾಗಿದ್ದರು. ಮಾನ್ಯತೆ ಪತ್ರವನ್ನು ನವೀಕರಿಸುವಂತೆ ಕೋರಲಾಗಿತ್ತು.

ಕೊನೆಗೆ ಇಸಾಕ್‌ಜಾಯ್‌ ಅವರೇ ತಮ್ಮ ನಾಮಪತ್ರವನ್ನು ಹಿಂತೆಗೆದುಕೊಂಡಿದ್ದಾರೆ. ಈ ನಿರ್ಣಯ ಬಗ್ಗೆ ಇಸಾಕ್‌ಜಾಯ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ರಾಯಿಟರ್ಸ್‌ ವರದಿ ಮಾಡಿದೆ.

ಮ್ಯಾನ್ಮಾರ್ ಪ್ರತಿನಿಧಿಯ ಗೈರು:ವಿಶ್ವಸಂಸ್ಥೆಯಲ್ಲಿ ಮ್ಯಾನ್ಮಾರ್ ಪ್ರತಿನಿಧಿಯು ಗೈರಾಗಿದ್ದರು. ಕಳೆದ ಫೆಬ್ರವರಿ ತಿಂಗಳಲ್ಲಿ ಮ್ಯಾನ್ಮಾರ್‌ನಚುನಾಯಿತ ಸರ್ಕಾರವನ್ನು ತೆಗೆದುಹಾಕಿ ಮಿಲಿಟರಿ ಆಡಳಿತ ಹೇರಲ್ಪಟ್ಟಿದೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳಲು ನೀಡಲಾಗುವ ಮಾನ್ಯತೆ ಪತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಅಮೆರಿಕ, ಚೀನಾ ಮತ್ತು ರಷ್ಯಾ ಸೇರಿದಂತೆ 9 ಸದಸ್ಯರುಳ್ಳ ಸಮಿತಿಯು ನೋಡಿಕೊಳ್ಳುತ್ತದೆ. ಸಾಮಾನ್ಯವಾಗಿ ಅಕ್ಟೋಬರ್‌ ಅಥವಾ ನವೆಂಬರ್‌ನಲ್ಲಿ ಈ ಸಮಿತಿಯು ಸಭೆ ನಡೆಸಿ ನಿರ್ಣಯಗಳನ್ನು ಕೈಗೊಳ್ಳುತ್ತದೆ. ಹಾಗಾಗಿ ಫೆಬ್ರವರಿ ತಿಂಗಳಲ್ಲಿ ಬದಲಾದ ಮ್ಯಾನ್ಮಾರ್ ಆಡಳಿತ ಮತ್ತು ಇತ್ತೀಚೆಗಷ್ಟೇ ಬದಲಾದ ಅಫ್ಗಾನಿಸ್ತಾನ ಆಡಳಿತದ ಪ್ರತಿನಿಧಿಗಳ ನಾಮಪತ್ರವನ್ನು ನವೀಕರಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.