ಜಿನೀವಾ: ಮಂಕಿಪಾಕ್ಸ್ ಸೋಂಕು 75ಕ್ಕೂ ಹೆಚ್ಚು ದೇಶಗಳಿಗೆ ವ್ಯಾಪಿಸಿರುವ ಕಾರಣ, ಇದನ್ನು ‘ಜಾಗತಿಕ ಆರೋಗ್ಯ ತುರ್ತುಸ್ಥಿತಿ’ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಶನಿವಾರ ಘೋಷಿಸಿದೆ.ಜಾಗತಿಕವಾಗಿ 16,000ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿದ್ದು, ಈವರೆಗೆ ಐವರು ಮೃತಪಟ್ಟಿದ್ದಾರೆ.
‘ಹಲವು ರಾಷ್ಟ್ರಗಳಿಗೆಸೋಂಕು ಅತಿ ವೇಗವಾಗಿ ಹರಡುತ್ತಿದೆ. ಇದು ಹರಡುತ್ತಿರುವ ವಿವಿಧ ವಿಧಾನಗಳ ಬಗ್ಗೆ ನಮಗೆ ಗೊತ್ತಿರುವುದು ತೀರಾ ಕಡಿಮೆ. ತುರ್ತು ಸ್ಥಿತಿ ಎಂಬುದಾಗಿ ಘೋಷಿಸಲು ರೂಪಿಸಿರುವ ಅಂತರರಾಷ್ಟ್ರೀಯ ಆರೋಗ್ಯ ಮಾನದಂಡಗಳ ಅನ್ವಯವೇ ಈ ಘೋಷಣೆ ಮಾಡಲಾಗಿದೆ’ ಎಂದು ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನಮ್ ಗೆಬ್ರಿಯೇಸಸ್ ಹೇಳಿದ್ದಾರೆ.
ಪುರುಷರ ಜತೆ ಪುರುಷ ಲೈಂಗಿಕ ಕ್ರಿಯೆ ನಡೆಸುವ ಸಮುದಾಯಗಳಲ್ಲಿ ಸೋಂಕು ಕಾಣಿಸಿಕೊಂಡಿರುವದೇಶಗಳು ನಿಗಾ ವಹಿಸಬೇಕು ಎಂದು ಸೂಚಿಸಿರುವ ಡಬ್ಲ್ಯುಎಚ್‌ಒ, ಇಂತಹ ಸಮುದಾಯಗಳ ಆರೋಗ್ಯ, ಮಾನವ ಹಕ್ಕುಗಳು ಹಾಗೂ ಘನತೆಯನ್ನು ಕಾಯುವ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದೆ.
ಮಂಕಿಪಾಕ್ಸ್ ಅನ್ನು ಆರೋಗ್ಯ ತುರ್ತುಸ್ಥಿತಿ ಎಂದು ವರ್ಗೀಕರಿಸುವ ಬಗ್ಗೆ ತುರ್ತು ಸಮಿತಿ ಸದಸ್ಯರು ಒಮ್ಮತಕ್ಕೆ ಬಾರದಿದ್ದರೂ, ಟೆಡ್ರೊಸ್ ಈ ಘೋಷಣೆ ಮಾಡಿದ್ದಾರೆ. ಡಬ್ಲ್ಯುಎಚ್‌ಒ ಮುಖ್ಯಸ್ಥರು ಇಂತಹ ನಿರ್ಧಾರ ತೆಗೆದುಕೊಂಡಿದ್ದು ಇದೇ ಮೊದಲು.
‘ಸಮಿತಿಯ ಸದಸ್ಯರು ಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದರು. ಒಂದು ತಿಂಗಳ ಹಿಂದೆ ಸಭೆ ಕರೆದಿದ್ದಾಗ 4 ಸಾವಿರ ಪ್ರಕರಣಗಳಿದ್ದವು. ಈಗ ಅವುಗಳ ಸಂಖ್ಯೆ 16 ಸಾವಿರ ದಾಟಿದೆ. ಹೀಗಾಗಿ ಈ ಸೋಂಕಿನ ಬಗ್ಗೆ ಜಾಗತಿಕ ಸಂಘಟಿತ ಹೋರಾಟ ಅಗತ್ಯ’ ಎಂದು ಟೆಡ್ರೊಸ್ ಹೇಳಿದ್ದಾರೆ.
ತುರ್ತು ಪರಿಸ್ಥಿತಿ ಎಂದು ಘೋಷಿಸುವುದರಿಂದ, ಸೋಂಕಿನ ತೀವ್ರತೆಯ ಬಗ್ಗೆ ಜಾಗತಿಕ ಗಮನ ಸೆಳೆಯಲು ಹಾಗೂಅಂತರರಾಷ್ಟ್ರೀಯ ನೆರವು ಪಡೆಯಲು ಸಹಾಯವಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.