ADVERTISEMENT

ಶತಮಾನ ಪೂರೈಸಿದ ಐಎಲ್‌ಒ

ಸಮಸ್ಯೆಗಳು, ಸವಾಲುಗಳ ನಡುವೆ ಅಸ್ತಿತ್ವ ಉಳಿಸಿಕೊಂಡ ಕಾರ್ಮಿಕ ಸಂಸ್ಥೆ

ಏಜೆನ್ಸೀಸ್
Published 9 ಜೂನ್ 2019, 19:45 IST
Last Updated 9 ಜೂನ್ 2019, 19:45 IST
ಜಿನಿವಾದಲ್ಲಿರುವ ಐಎಲ್‌ಒ ಪ್ರಧಾನ ಕಚೇರಿ –ಎಎಫ್‌ಪಿ ಚಿತ್ರ
ಜಿನಿವಾದಲ್ಲಿರುವ ಐಎಲ್‌ಒ ಪ್ರಧಾನ ಕಚೇರಿ –ಎಎಫ್‌ಪಿ ಚಿತ್ರ   

ಜಿನಿವಾ: ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಗೆ (ಐಎಲ್‌ಒ) ಈಗ ನೂರು ವರ್ಷ.

ಮೊದಲ ವಿಶ್ವ ಯುದ್ಧದ ಬಳಿಕ ಜಿನಿವಾದಲ್ಲಿ 1919ರಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಹಲವು ರೀತಿಯ ಸವಾಲುಗಳ ನಡುವೆಯೂ ಈ ಸಂಸ್ಥೆ ತನ್ನ ಅಸ್ತಿತ್ವ ಉಳಿಸಿಕೊಂಡು ಬಂದಿದ್ದು, ಜೂನ್ 10ರಂದು ಸಂಸ್ಥೆಯ ವಾರ್ಷಿಕೋತ್ಸವ ನಡೆಯಲಿದೆ.

ಈ ವಾರ್ಷಿಕ ಅಧಿವೇಶನದಲ್ಲಿ ಫ್ರಾನ್ಸ್‌ ಅಧ್ಯಕ್ಷ ಎಮ್ಮಾನ್ಯುಲ್‌ ಮ್ಯಾಕ್ರನ್‌, ಜರ್ಮನಿಯ ಚಾನ್ಸಲರ್‌ ಎಂಜೆಲಾ ಮಾರ್ಕೆಲ್‌, ರಷ್ಯಾ ಪ್ರಧಾನಿ ಡಿಮಿಟ್ರಿ ಮೆಡ್ವೆಡೆವ್ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ADVERTISEMENT

ಐಎಲ್‌ಒ ಪ್ರತಿನಿಧಿಗಳಲ್ಲಿ ಸರ್ಕಾರಿ ಅಧಿಕಾರಿಗಳು, ಕಾರ್ಮಿಕ ಸಂಘಟನೆಗಳ ನಾಯಕರು ಮತ್ತು ಖಾಸಗಿ ಕ್ಷೇತ್ರದ ಉದ್ಯೋಗದಾತರು ಸೇರಿದ್ದಾರೆ.

’ಭವಿಷ್ಯದ ದೃಷ್ಟಿಕೋನದಿಂದ ಅಧಿವೇಶನ ನಡೆಯಲಿದೆ. ಹೀಗಾಗಿ, ಅಧಿವೇಶನದಲ್ಲಿ ಸಂಭ್ರಮಕ್ಕಿಂತ ಮಹತ್ವದ ವಿಷಯಗಳ ಬಗ್ಗೆ ಗಂಭೀರವಾಗಿ ಮತ್ತು ಬಿರುಸಿನ ಚರ್ಚೆ ನಡೆಯಬಹುದು. ಹಬ್ಬದ ವಾತಾವರಣ ಸೃಷ್ಟಿಯಾಗುವುದು ಅನುಮಾನ‘ ಎಂದು ಸಂಸ್ಥೆಯ ಮಹಾ ನಿರ್ದೇಶಕ ಗಯ್‌ ರಿಡರ್‌ ತಿಳಿಸಿದ್ದಾರೆ.

‘ಮಿ ಟೂ ಪ್ರಕರಣಗಳ ಹಿನ್ನೆಲೆಯಲ್ಲಿ ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳಾ ಕಾರ್ಮಿಕರು ಕಿರುಕುಳ ಮತ್ತು ಹಿಂಸೆ ಅನುಭವಿಸುತ್ತಿರುವ ಬಗ್ಗೆಯೂ ಐಎಲ್ಒ ಪ್ರತಿನಿಧಿಗಳು ಚರ್ಚೆ ನಡೆಸಬಹುದು‘ ಎಂದು ತಿಳಿಸಿದ್ದಾರೆ.

’ಮೊದಲ ಜಾಗತಿಕ ಯುದ್ಧದ ಬಳಿಕ, ಕಾರ್ಮಿಕರಿಗೆ ಸಂಬಂಧಿಸಿದ ಅಂತರರಾಷ್ಟ್ರೀಯ ಸಂಸ್ಥೆ ಸ್ಥಾಪಿಸುವಂತೆ ಹಲವು ರಾಷ್ಟ್ರಗಳು ಒತ್ತಾಯಿಸಿದವು. ಯುದ್ಧದಲ್ಲಿ ಜಯಗಳಿಸಲು ಕಾರ್ಮಿಕರು ಪ್ರಮುಖ ಪಾತ್ರವಹಿಸಿದ್ದಕ್ಕಾಗಿ ಹಲವು ಸಂಘಟನೆಗಳು ಮಹತ್ವದ ಬೇಡಿಕೆಗಳನ್ನು ಮುಂದಿಟ್ಟಿದ್ದವು. ಹೀಗಾಗಿ, ಇಂತಹ ಸಂಸ್ಥೆ ಸ್ಥಾಪನೆಯ ಚಿಂತನೆ ಆರಂಭವಾಯಿತು‘ ಎಂದು ಇತಿಹಾಸ ಸಂಶೋಧಕ ಡೊರೊಥೀಯಾ ಹೊಹ್ಟಕೆರ್‌ ವಿವರಿಸಿದ್ದಾರೆ.

’ಎರಡನೇ ಜಾಗತಿಕ ಯುದ್ಧದ ಬಳಿಕ ಐಎಲ್‌ಒ ಅಸ್ತಿತ್ವಕ್ಕೆ ಧಕ್ಕೆಯಾಯಿತು. ಯುದ್ಧದಲ್ಲಿ ಜಯಗಳಿಸಿದ ರಾಷ್ಟ್ರಗಳು ಜಾಗತಿಕವಾಗಿ ಹೊಸದಾಗಿ ಆಡಳಿತ ವ್ಯವಸ್ಥೆಯನ್ನು ರೂಪಿಸುವ ಪ್ರಯತ್ನ ನಡೆಸಿದ್ದವು. ಸೋವಿಯತ್‌ ಒಕ್ಕೂಟದ ಜೊಸೆಫ್‌ ಸ್ಟಾಲಿನ್‌ ಐಎಲ್‌ಒಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಕಾರ್ಮಿಕ ಸಂಘಟನೆಗಳಿಗೆ ಮತ್ತು ಉದ್ಯೋಗದಾತರಿಗೆ ಆದ್ಯತೆ ನೀಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಸೋವಿಯತ್‌ ಒಕ್ಕೂಟಕ್ಕೆ ಐಎಲ್‌ಒ ಅಸ್ತಿತ್ವದಲ್ಲಿ ಇರುವುದೇ ಬೇಕಾಗಿರಲಿಲ್ಲ. ಅಂತಿಮವಾಗಿ 1946ರಲ್ಲಿ ಐಎಲ್‌ಒ ವಿಶ್ವಸಂಸ್ಥೆಯ ಭಾಗವಾಯಿತು‘ ಎಂದು ಸಂಸ್ಥೆಯ ಏಳುಬೀಳುಗಳನ್ನು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.