ನವದೆಹಲಿ :‘ನಿಷೇಧಿತ ಉಗ್ರರ ಪಟ್ಟಿಯಿಂದ ತನ್ನ ಹೆಸರನ್ನು ತೆಗೆಯಬೇಕು‘ ಎಂದು ಕೋರಿ ಉಗ್ರ ಸಂಘಟನೆ ಜಮಾತ್-ಉದ್-ದವಾ (ಜೆಯುಡಿ) ಮುಖ್ಯಸ್ಥ ಹಫೀಜ್ ಸಯೀದ್ ಸಲ್ಲಿಸಿದ್ದ ಮನವಿಯನ್ನು ವಿಶ್ವಸಂಸ್ಥೆ ಗುರುವಾರ ತಿರಸ್ಕರಿಸಿದೆ.
ಪುಲ್ವಾಮಾ ದಾಳಿಯ ಹೊಣೆ ಹೊತ್ತ ಜೈಷ್–ಎ–ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ನನ್ನು ನಿಷೇಧಿತ ಉಗ್ರರ ಪಟ್ಟಿಗೆ ಸೇರಿಸಬೇಕು ಎಂಬ ಕೋರಿಕೆಗಳು ಬಂದ ಸದರ್ಭದಲ್ಲಿಯೇ, 2008ರಲ್ಲಿ ಸಂಭವಿಸಿದ ಮುಂಬೈ ಮೇಲಿನ ದಾಳಿಯ ಪ್ರಮುಖ ಸಂಚುಕೋರ ಸಯೀದ್‌ನ ಮನವಿ ತಿರಸ್ಕರಿಸಿದ್ದು ಗಮನಾರ್ಹ ಬೆಳವಣಿಗೆ ಎಂದು ವಿಶ್ಲೇಷಿಸಲಾಗಿದೆ.
ಸಯೀದ್‌ನ ಚಟುವಟಿಕೆಗಳ ಕುರಿತು ಭಾರತ ಸಲ್ಲಿಸಿರುವ ಗೋಪ್ಯ ಮಾಹಿತಿ, ಸಾಕ್ಷ್ಯಗಳನ್ನು ಆಧರಿಸಿ ವಿಶ್ವಸಂಸ್ಥೆ ಈ ಆದೇಶ ಹೊರಡಿಸಿದೆ. ಸಯೀದ್ ಪರ ವಕೀಲ ಹೈದರ್ ರಸೂಲ್ ಮಿರ್ಜಾ ಅವರಿಗೆ ಈ ಮಾಹಿತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮುಂಬೈ ದಾಳಿಯ ನಂತರ 2008ರ ಡಿಸೆಂಬರ್ 10 ರಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಸಯೀದ್‌ನನ್ನು ನಿಷೇಧಿತ ಉಗ್ರರ ಪಟ್ಟಿಗೆ ಸೇರಿಸಿತ್ತು. ಆದರೆ, ತನ್ನ ಮೇಲೆ ಹೇರಿರುವ ನಿಷೇಧವನ್ನು ತೆಗೆಯುವಂತೆ ಲಾಹೋರ್‌ನ ಕಾನೂನು ಸಲಹಾ ಸಂಸ್ಥೆ ಮಿರ್ಜಾ ಆ್ಯಂಡ್ ಮಿರ್ಜಾ ಮೂಲಕ ಸಯೀದ್ 2017ರಲ್ಲಿ ವಿಶ್ವಸಂಸ್ಥೆಗೆ ಮನವಿ ಸಲ್ಲಿಸಿದ್ದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.