ಪ್ಯಾರಿಸ್ : ಆರ್ಥಿಕ ಬಿಕ್ಕಟ್ಟು, ಘರ್ಷಣೆ, ಪ್ರಾಕೃತಿಕ ವಿಕೋಪಗಳು ಆಹಾರ ಉತ್ಪಾದನೆ ಮತ್ತು ಪೂರೈಕೆ ಮೇಲೆ ಪರಿಣಾಮ ಬೀರಿದ್ದು, ಕಳೆದ ವರ್ಷ ಅಂದಾಜು 258 ಮಿಲಿಯನ್ ಜನರು ಆಹಾರ ಅಭದ್ರತೆಗೆ ಒಳಗಾಗಿದ್ದಾರೆ ಎಂದು ವಿಶ್ವಸಂಸ್ಥೆ ವರದಿ ಮಾಡಿದೆ.
‘ಹಸಿವಿನವನ್ನು ಕೊನೆಗೊಳಿಸಲು, ಪ್ರತಿಯೊಬ್ಬರಿಗೂ ಆಹಾರ ಭದ್ರತೆಯನ್ನು ಒದಗಿಸುವಲ್ಲಿ ಜಗತ್ತು ಸೋತಿದೆ. ವಿಶ್ವದಲ್ಲಿ 25 ಕೋಟಿಗೂ ಹೆಚ್ಚು ಜನರು ಹಸಿವಿನಿಂದ ತತ್ತರಿಸಿದ್ದಾರೆ. ಈ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಇದು ನಿಜಕ್ಕೂ ಆತಂಕಕಾರಿಯಾಗಿದೆ‘ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಹೇಳಿದರು.
‘ಹಸಿವಿನ ಪ್ರಮಾಣ ಕೆಲವೊಂದು ಭಾಗದಲ್ಲಿ ತೀವ್ರವಾಗಿದೆ. ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಇಥಿಯೋಪಿಯ, ಅಫ್ಘಾನಿಸ್ತಾನ, ನೈಜೀರಿಯಾ ಮತ್ತು ಯೆಮೆನ್‌ನ ಶೇ.40ರಷ್ಟು ಜನರು ಹಸಿವಿನಿಂದ ಬಳಲುತ್ತಿದ್ದಾರೆ. ದೇಶ–ದೇಶಗಳ ನಡುವಿನ ಘರ್ಷಣೆ, ವಲಸೆ ಜಾಗತಿಕ ಹಸಿವಿನ ಪ್ರಮಾಣವನ್ನು ಇನ್ನಷ್ಟು ತೀವ್ರಗೊಳಿಸಿವೆ‘ ಎಂದು ತಿಳಿಸಿದರು.
‘ಬಡತನ ಏರಿಕೆ, ಅಸಮಾನತೆ, ಅಭಿವೃದ್ದಿಯ ಕುಂಠಿತ, ಹವಾಮಾನ ಬಿಕ್ಕಟ್ಟು, ಪ್ರಾಕೃತಿಕ ವಿಕೋಪ ಹೀಗೆ ಹಲವಾರು ವಿದ್ಯಮಾನಗಳು ಆಹಾರ ಅಭದ್ರತೆಯನ್ನು ಹೆಚ್ಚಿಸುವಲ್ಲಿ ಪರಿಣಾಮ ಬೀರಿವೆ‘ ಎಂದು ಹೇಳಿದರು.
2022ರಲ್ಲಿ ಸುಮಾರು 28 ದೇಶಗಳ 258 ಮಿಲಿಯನ್ ಜನರು ಆಹಾರ ಅಭದ್ರತೆಯನ್ನು ಎದುರಿಸಿದ್ದರು. 2021ರಲ್ಲಿ 193 ಮಿಲಿಯನ್ ಜನರು ಆಹಾರ ಅಭದ್ರತೆಗೆ ಒಳಗಾಗಿದ್ದು, ಸತತ ನಾಲ್ಕನೇ ವರ್ಷವೂ ಇದರ ಪ್ರಮಾಣ ಏರುಗತಿಯಲ್ಲಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.