ADVERTISEMENT

ಶಾಂತಿಪಾಲನಾ ಪಡೆ ವಾಪಸ್ ಇಲ್ಲ: ಇಸ್ರೇಲ್‌ ಮನವಿ ತಿರಸ್ಕರಿಸಿದ ಫ್ರಾನ್ಸ್‌, ಸ್ಪೇನ್

ರಾಯಿಟರ್ಸ್
ಏಜೆನ್ಸೀಸ್
Published 14 ಅಕ್ಟೋಬರ್ 2024, 13:14 IST
Last Updated 14 ಅಕ್ಟೋಬರ್ 2024, 13:14 IST
<div class="paragraphs"><p>ದಕ್ಷಿಣ ಲೆಬನಾನ್‌ನ ದೇರ್‌ ಖನೂನ್ ಪಟ್ಟಣದ ಮೇಲೆ&nbsp;ಇಸ್ರೇಲ್‌ ಸೇನೆ ನಡೆಸಿದ ದಾಳಿಯ ದೃಶ್ಯ </p></div>

ದಕ್ಷಿಣ ಲೆಬನಾನ್‌ನ ದೇರ್‌ ಖನೂನ್ ಪಟ್ಟಣದ ಮೇಲೆ ಇಸ್ರೇಲ್‌ ಸೇನೆ ನಡೆಸಿದ ದಾಳಿಯ ದೃಶ್ಯ

   

ನ್ಯೂಯಾರ್ಕ್/ ಪ್ಯಾರಿಸ್: ಲೆಬನಾನ್‌ನಲ್ಲಿರುವ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯನ್ನು ವಾಪಸ್‌ ಕರೆಸಿಕೊಳ್ಳಬೇಕೆಂಬ ಇಸ್ರೇಲ್‌ನ ಮನವಿಯನ್ನು ಸ್ಪೇನ್‌ ಹಾಗೂ ಫ್ರಾನ್ಸ್‌ ತಳ್ಳಿಹಾಕಿವೆ.

‘ದಕ್ಷಿಣ ಲೆಬನಾನ್‌ನಲ್ಲಿರುವ ಶಾಂತಿಪಾಲನಾ ಪಡೆಗಳನ್ನು (ಯುಎನ್‌ಐಎಫ್‌ಐಎಲ್‌) ವಾಪಸ್‌ ಕರೆಸಿಕೊಳ್ಳುವುದಿಲ್ಲ’ ಎಂದು ಸ್ಪೇನ್‌ ಅಧ್ಯಕ್ಷ ಪೆಡ್ರೊ ಸ್ಯಾಂಚೆಸ್‌ ಸೋಮವಾರ ಹೇಳಿದ್ದಾರೆ. ‘ಶಾಂತಿಪಾಲನಾ ಪಡೆಗಳ ರಕ್ಷಣೆಯು ಸಂಬಂಧಪಟ್ಟ ಎಲ್ಲರ ಕರ್ತವ್ಯವಾಗಿದೆ’ ಎಂದು ಫ್ರಾನ್ಸ್‌ ವಿದೇಶಾಂಗ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ADVERTISEMENT

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು ಲೆಬನಾನ್‌ನಲ್ಲಿರುವ ಶಾಂತಿಪಾಲನಾ ಪಡೆಯನ್ನು ವಾಪಸ್‌ ಕರೆಸುವಂತೆ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಅವರನ್ನು ಕೇಳಿಕೊಂಡಿದ್ದರು. 

‘ಹಿಜ್ಬುಲ್ಲಾ ಬಂಡುಕೋರರ ನಿಯಂತ್ರಣದಲ್ಲಿರುವ ಪ್ರದೇಶಗಳು ಮತ್ತು ನಮ್ಮ ಸೇನೆಯು ದಾಳಿ ನಡೆಸುವ ಪ್ರದೇಶಗಳಿಂದ ಯುಎನ್‌ಐಎಫ್‌ಐಎಲ್‌ ಪಡೆಗಳನ್ನು ವಾಪಸ್‌ ಕರೆಸಿಕೊಳ್ಳುವ ಕಾಲ ಕೂಡಿ ಬಂದಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದರು.

ಟ್ಯಾಂಕ್‌ ನುಗ್ಗಿಸಿದ ಸೇನೆ–ಆರೋಪ: ದಕ್ಷಿಣ ಲೆಬನಾನ್‌ನಲ್ಲಿರುವ ತನ್ನ ಶಾಂತಿಪಾಲನಾ ಪಡೆಗಳ ನೆಲೆಯ ಮೇಲೆ ಇಸ್ರೇಲ್‌ ಸೇನೆಯು ಟ್ಯಾಂಕ್‌ಗಳನ್ನು ನುಗ್ಗಿಸಿದೆ ಎಂದು ವಿಶ್ವಸಂಸ್ಥೆ ಸೋಮವಾರ ಆರೋಪಿಸಿದೆ.

ಯುಎನ್‌ಐಎಫ್‌ಐಎಲ್‌ ತಂಡದ ನೆಲೆಯ ಮುಖ್ಯ ಗೇಟ್‌ ಅನ್ನು ಇಸ್ರೇಲ್‌ನ ಎರಡು ಟ್ಯಾಂಕ್‌ಗಳು ಭಾನುವಾರ ನಾಶಮಾಡಿವೆ. ಟ್ಯಾಂಕ್‌ಗಳು ಅಲ್ಲಿಂದ ತೆರಳಿದ ಬಳಿಕ, ಕಟ್ಟಡದಿಂದ ಸುಮಾರು 100 ಮೀ. ದೂರದಲ್ಲಿ ಷೆಲ್‌ಗಳು ಸ್ಫೋಟಗೊಂಡಿವೆ. ಈ ವೇಳೆ ಆವರಿಸಿದ ಹೊಗೆಯಿಂದ ಯುಎನ್‌ಐಎಫ್‌ಐಎಲ್‌ನ ಕೆಲವು ಸಿಬ್ಬಂದಿ ಅಸ್ವಸ್ಥಗೊಂಡಿದ್ದಾರೆ ಎಂದು ಪ್ರಕಟಣೆ ಹೇಳಿದೆ.

ಆದರೆ ಇಸ್ರೇಲ್‌ ಸೇನೆ ಈ ಆರೋಪಗಳನ್ನು ಅಲ್ಲಗಳೆದಿದೆ. ಹಿಜ್ಬುಲ್ಲಾ ಬಂಡುಕೋರರು ಟ್ಯಾಂಕ್‌ಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಿದ್ದು, 25 ಸೈನಿಕರು ಗಾಯಗೊಂಡಿದ್ದಾರೆ. ಯುಎನ್‌ಐಎಫ್‌ಐಎಲ್‌ ನೆಲೆಗೆ ತೀರಾ ಸನಿಹ ಈ ದಾಳಿ ನಡೆದಿದೆ. ದಾಳಿಯಿಂದ ಪಾರಾಗಲು ಟ್ಯಾಂಕ್‌ವೊಂದು ಶಾಂತಿಪಾಲನಾ ಪಡೆಯ ನೆಲೆಯತ್ತ ಧಾವಿಸಿದೆ ಎಂದು ತಿಳಿಸಿದೆ.

‘ಶಾಂತಿಪಾಲನಾ ಪಡೆಯ ನೆಲೆಗೆ ಟ್ಯಾಂಕ್‌ ಅನ್ನು ನುಗ್ಗಿಸಿಲ್ಲ. ಭಾರಿ ಕ್ಷಿಪಣಿ ದಾಳಿಯಿಂದ ಪಾರಾಗಲು ಟ್ಯಾಂಕ್‌ವೊಂದು ನೆಲೆಯತ್ತ ಹೋಗಿದೆ’ ಎಂದು ಸೇನೆಯ ಅಂತರರಾಷ್ಟ್ರೀಯ ವಕ್ತಾರ ನದಾವ್ ಶೊಶನಿ ಹೇಳಿದ್ದಾರೆ.

ಗಾಯಗೊಂಡ ಸೈನಿಕರನ್ನು ಸ್ಥಳಾಂತರಿಸುವಾಗ ಅವರಿಗೆ ರಕ್ಷಣೆ ಒದಗಿಸಲು ಹೊಗೆಯನ್ನು ಪರದೆಯಾಗಿ ಬಳಸಲಾಗಿದೆ. ಅದರಿಂದ ಶಾಂತಿಪಾಲನಾ ಪಡೆಗೆ ಯಾವುದೇ ಅಪಾಯ ಉಂಟಾಗಿಲ್ಲ ಎಂದಿದ್ದಾರೆ.

ಇಸ್ರೇಲ್‌ನ ನಾಲ್ವರು ಯೋಧರ ಸಾವು
ಜೆರುಸಲೇಂ: ಹಿಜ್ಬುಲ್ಲಾ ಬಂಡುಕೋರರು ನಡೆಸಿದ ಡ್ರೋನ್‌ ದಾಳಿಗೆ ಇಸ್ರೇಲ್‌ನ ನಾಲ್ವರು ಯೋಧರು ಬಲಿಯಾಗಿದ್ದು ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.  ಮಧ್ಯ ಇಸ್ರೇಲ್‌ನ ಬಿನ್ಯಾಮಿನ ನಗರದ ಸೇನಾ ನೆಲೆಯನ್ನು ಗುರಿಯಾಗಿಸಿ ಭಾನುವಾರ ಡ್ರೋನ್ ದಾಳಿ ನಡೆದಿದೆ. ಇಸ್ರೇಲ್‌ ಸೇನೆ ಬೈರೂತ್‌ ಮೇಲೆ ಗುರುವಾರ ನಡೆಸಿದ ದಾಳಿಗೆ ಪ್ರತಿಯಾಗಿ ಈ ದಾಳಿ ನಡೆಸಿದ್ದೇವೆ ಎಂದು ಹಿಜ್ಬುಲ್ಲಾ ಪ್ರಕಟಣೆ ತಿಳಿಸಿದೆ.  ಡ್ರೋನ್‌ ದಾಳಿಯಲ್ಲಿ ಒಟ್ಟು 61 ಮಂದಿ ಗಾಯಗೊಂಡಿದ್ದಾರೆ ಎಂದು ಇಸ್ರೇಲ್‌ ಸೇನೆಯ ಮೂಲಗಳು ಹೇಳಿವೆ. 
ಗಾಜಾ: 20 ಬಲಿ
ಗಾಜಾದಲ್ಲಿ ನಿರಾಶ್ರಿತರು ತಂಗಿದ್ದ ಶಾಲೆಯ ಮೇಲೆ ಭಾನುವಾರ ರಾತ್ರಿ ಇಸ್ರೇಲ್‌ ನಡೆಸಿದ ಬಾಂಬ್‌ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳೂ ಸೇರಿದಂತೆ 20 ಮಂದಿ ಮೃತಪಟ್ಟಿದ್ದಾರೆ. ಯುದ್ಧದಿಂದಾಗಿ ನಿರ್ವಸಿತರಾದವರು ನುಸೈರತ್‌ನಲ್ಲಿರುವ ಶಾಲೆಯಲ್ಲಿ ಆಶ್ರಯ ಪಡೆದಿದ್ದರು.  ದೇರ್‌ ಅಲ್‌ ಬಲಾಹ್‌ನ ಅಲ್‌ ಅಕ್ಸಾ ಹುತಾತ್ಮರ ಆಸ್ಪತ್ರೆಯ ಮೇಲೆ ಸೋಮವಾರ ನಡೆದ ದಾಳಿಯಲ್ಲಿ ಮೂವರು ಮೃತಪಟ್ಟು ಸುಮಾರು 50 ಮಂದಿ ಗಾಯಗೊಂಡಿದ್ದಾರೆ. ಆಸ್ಪತ್ರೆಯ ಬಳಿ ಹಾಕಿದ್ದ ತಾತ್ಕಾಲಿಕ ಟೆಂಟ್‌ಗಳು ಬೆಂಕಿಗೆ ಆಹುತಿಯಾಗಿವೆ ಎಂದು ಆಸ್ಪತ್ರೆಯ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.