ADVERTISEMENT

ಏಡ್ಸ್‌ನಿಂದ ಪ್ರತಿ ನಿಮಿಷಕ್ಕೆ ಒಬ್ಬರ ಸಾವು: ವಿಶ್ವಸಂಸ್ಥೆಯ ವರದಿ

ಸುಮಾರು 4 ಕೋಟಿ ಜನರಲ್ಲಿ ಎಚ್ಐವಿ: ವಿಶ್ವಸಂಸ್ಥೆ ವರದಿ

ಏಜೆನ್ಸೀಸ್
Published 23 ಜುಲೈ 2024, 13:20 IST
Last Updated 23 ಜುಲೈ 2024, 13:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಿಶ್ವಸಂಸ್ಥೆ: ಕಳೆದ ವರ್ಷ ವಿಶ್ವದಾದ್ಯಂತ ಸುಮಾರು 4 ಕೋಟಿ ಮಂದಿಯಲ್ಲಿ ಎಚ್ಐವಿ ವೈರಸ್ ಪತ್ತೆಯಾಗಿದ್ದು ಈ ಪೈಕಿ 90 ಲಕ್ಷ ಜನರು ಯಾವುದೇ ರೀತಿಯ ಚಿಕಿತ್ಸೆ ಪಡೆದಿಲ್ಲ. ಇದರಿಂದಾಗಿ ಪ್ರತಿ ನಿಮಿಷಕ್ಕೆ ಒಬ್ಬರು ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ. 

ಏಡ್ಸ್‌ಗೆ ಸಂಬಂಧಿಸಿದ ಹೊಸ ವರದಿಯನ್ನು ವಿಶ್ವಸಂಸ್ಥೆಯು ಸೋಮವಾರ ಬಿಡುಗಡೆ ಮಾಡಿದೆ. ಇದರ ಪ್ರಕಾರ, ಏಡ್ಸ್ ಅನ್ನು ಕೊನೆಗಾಣಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ, ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ, ಪೂರ್ವ ಯುರೋಪ್, ಕೇಂದ್ರೀಯ ಏಷ್ಯಾ ಹಾಗೂ ಲ್ಯಾಟಿನ್ ಅಮೆರಿಕದಲ್ಲಿ ಕಾಯಿಲೆಪೀಡಿತರ ಸಂಖ್ಯೆ ಹೆಚ್ಚಳ ಮತ್ತು ಅಗತ್ಯ ಹಣಕಾಸಿನ ಅಲಭ್ಯತೆಯಿಂದಾಗಿ ಈ ನಿಟ್ಟಿನಲ್ಲಿ ನಿರೀಕ್ಷಿತ ಪ್ರಗತಿ ಕಂಡುಬಂದಿಲ್ಲ. 

2023ರಲ್ಲಿ ಜಾಗತಿಕವಾಗಿ 3.99 ಕೋಟಿ ಮಂದಿಯಲ್ಲಿ ಎಚ್ಐವಿ ಇತ್ತು. ಇದರಲ್ಲಿ ಶೇ 88ರಷ್ಟು ಮಂದಿಗೆ ತಾವು ಎಚ್ಐವಿ ಪೀಡಿತರು ಎಂಬುದು ತಿಳಿದಿತ್ತು. ಶೇ 77ರಷ್ಟು ಮಂದಿ ಚಿಕಿತ್ಸೆ ಪಡೆದಿದ್ದು, ಅವರಲ್ಲಿ ಶೇ 72ರಷ್ಟು ಪ್ರಮಾಣದ ವೈರಸ್ ತೀವ್ರತೆ ತಗ್ಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

2004ರಲ್ಲಿ ಎಚ್‌ಐವಿಯಿಂದ 21 ಲಕ್ಷ ಮಂದಿ ಮೃತಪಟ್ಟಿದ್ದರು. 2023ರಲ್ಲಿ 6.30 ಲಕ್ಷ ಮಂದಿ ಮೃತಪಟ್ಟಿದ್ದಾರೆ. 2004ಕ್ಕೆ ಹೋಲಿಸಿದರೆ, 2023ರಲ್ಲಿ ಮೃತರ ಸಂಖ್ಯೆ ಗಣನೀಯವಾಗಿ ತಗ್ಗಿದೆ. 2025ರ ವೇಳೆಗೆ ಏಡ್ಸ್‌ನಿಂದ ಮೃತರಾಗುವವರ ಸಂಖ್ಯೆಯನ್ನು 2.5 ಲಕ್ಷಕ್ಕಿಂತ ಕಡಿಮೆಗೊಳಿಸಬೇಕು ಎಂಬ ಗುರಿ ಹೊಂದಲಾಗಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ. 

ಆಫ್ರಿಕಾದಲ್ಲಿ ಎಚ್ಐವಿ ಸೋಂಕು ಹದಿಹರೆಯದ ಯುವತಿಯರಲ್ಲೇ ಹೆಚ್ಚಾಗಿ ಕಂಡುಬರುತ್ತಿದೆ. ಲೈಂಗಿಕ ಕಾರ್ಯಕರ್ತರು, ಪುರುಷ ಸಲಿಂಗಿಗಳು ಮತ್ತು ಇಂಜೆಕ್ಷನ್‌ಗಳಿಂದ ಎಚ್ಐವಿ ಹರಡುವ ಪ್ರಮಾಣ ಶೇ 55ಕ್ಕೆ ಏರಿಕೆಯಾಗಿದೆ. 2010ರಲ್ಲಿ ಈ ಪ್ರಮಾಣ ಶೇ 45 ಇತ್ತು ಎಂದು ವರದಿ ತಿಳಿಸಿದೆ. 

ಇಂಜೆಕ್ಷನ್ ಬೆಲೆ ₹33 ಲಕ್ಷ

ಎಚ್ಐವಿ ಚಿಕಿತ್ಸೆಯು ಪ್ರಗತಿಯ ಹಂತದಲ್ಲಿದ್ದು ಮಾನವನ ದೇಹದಲ್ಲಿ 6 ತಿಂಗಳ ಕಾಲ ಸಕ್ರಿಯವಾಗಿರಬಹುದಾದ ಎಚ್ಐವಿ ನಿರೋಧಕ ಸಾಮರ್ಥ್ಯದ ಇಂಜೆಕ್ಷನ್‌ಗಳು ಲಭ್ಯವಿವೆ. ಆದರೆ ಅದರ ಎರಡು ಡೋಸ್‌ಗೆ ವಾರ್ಷಿಕ ₹33.5 ಲಕ್ಷ (40000 ಡಾಲರ್) ವೆಚ್ಚವಾಗಲಿದ್ದು ಶ್ರೀಮಂತರಿಗೆ ಮಾತ್ರ ಕೈಗೆಟುಕಲಿದೆ. ಈ ಔಷಧ ಜನಸಾಮಾನ್ಯರ ಕೈಗೆಟುಕುವಂತೆ ಮಾಡಲು ಉತ್ಪಾದಕರಿಗೆ ಮನವಿ ಮಾಡಲಾಗುತ್ತಿದೆ ಎಂದು ವಿಶ್ವಸಂಸ್ಥೆಯ ಏಡ್ಸ್ ಯೋಜನೆಯ ನಿರ್ದೇಶಕರು ತಿಳಿಸಿದ್ದಾರೆ. 

‘2030ರೊಳಗೆ ಏಡ್ಸ್ ಅಂತ್ಯಕ್ಕೆ ಪಣ’

‘2030ರ ಒಳಗಾಗಿ ಏಡ್ಸ್ ಅನ್ನು ಕೊನೆಗಾಣಿಸುವುದಾಗಿ ವಿಶ್ವದ ನಾಯಕರು ಪ್ರಮಾಣ ಮಾಡಿದ್ದರು. ಏಡ್ಸ್ ನಿಯಂತ್ರಣಕ್ಕೆ ಅಗತ್ಯವಿರುವ ಸಂಪನ್ಮೂಲಗಳನ್ನು ಖಾತ್ರಿಪಡಿಸುವ ಮೂಲಕ ತಾವು ನೀಡಿದ ಭರವಸೆಯಂತೆ ನಡೆದುಕೊಳ್ಳಬಹುದು’ ಎಂದು ವಿಶ್ವಸಂಸ್ಥೆಯ ಏಡ್ಸ್ ಕಾರ್ಯಕಾರಿ ನಿರ್ದೇಶಕಿ ವಿನ್ನೀ ಬ್ಯಾನಿಮಾ ಹೇಳಿದರು.  ಏಡ್ಸ್ ಕೊನೆಗಾಣಿಸುವ ಭಾಗವಾಗಿ 2025ರ ಒಳಗೆ ಎಚ್ಐವಿ ಸೋಂಕಿತರ ಸಂಖ್ಯೆಯನ್ನು ವಾರ್ಷಿಕ 3.70 ಲಕ್ಷದಷ್ಟು ಕಡಿಮೆಗೊಳಿಸುವ ಗುರಿ ಹಾಕಿಕೊಳ್ಳಲಾಗಿತ್ತು. ಆದರೆ 2023ರಲ್ಲಿ ಹೊಸದಾಗಿ 13 ಲಕ್ಷ ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಅಂದರೆ ವಿಶ್ವನಾಯಕರು ಹಾಕಿಕೊಂಡ ಗುರಿಗಿಂತಲೂ ಸೋಂಕಿತರ ಸಂಖ್ಯೆ ಮೂರು ಪಟ್ಟು ಹೆಚ್ಚಿದೆ ಎಂದು ವರದಿ ಹೇಳಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.