ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ನಿಷ್ಪಕ್ಷಪಾತದಿಂದ ಕಾರ್ಯ ನಿರ್ವಹಿಸಲು ಸಾಧ್ಯವಾಗದ ಸ್ಥಿತಿಯಲ್ಲಿದೆ. ಭೌಗೋಳಿಕವಾಗಿ ಉತ್ತರದಲ್ಲಿರುವ ರಾಷ್ಟ್ರಗಳ ಅಗತ್ಯಗಳನ್ನು ಪೂರೈಸುವುದೇ ಮಂಡಳಿಯ ಗುರಿಯಾಗಿದೆ ಎಂದು ವಿಶ್ವಸಂಸ್ಥೆಯ ಸಾಮಾನ್ಯಸಭೆ ಅಧ್ಯಕ್ಷ ಡೆನಿಸ್ ಫ್ರಾನ್ಸಿಸ್ ಹೇಳಿದ್ದಾರೆ.
‘ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಎಲ್ಲ ದೇಶಗಳಿಗೂ ಪ್ರಾತಿನಿಧ್ಯ ಹಾಗೂ ಸಮಾನ ಅವಕಾಶ ನೀಡುವುದು ಇಂದಿನ ಅಗತ್ಯ’ ಎಂದು ಪ್ರತಿಪಾದಿಸಿದ್ದಾರೆ.
ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿ ಕಚೇರಿ ಹಾಗೂ ‘ಆಬ್ಸರ್ವರ್ ರಿಸರ್ಚ್ ಫೌಂಡೇಷನ್’(ಒಆರ್‌ಎಫ್) ಸಂಯುಕ್ತವಾಗಿ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಭದ್ರತಾ ಮಂಡಳಿಯು ಹೆಚ್ಚು ಸಮತೋಲನದಿಂದ ಕೂಡಿರಬೇಕು. ಪ್ರಾತಿನಿಧಿಕ, ಸ್ಪಂದನಶೀಲ, ಪ್ರಜಾಸತ್ತಾತ್ಮಕ ಹಾಗೂ ಪಾರದರ್ಶಕತೆಯನ್ನು ಎತ್ತಿ ಹಿಡಿಯುವಂತೆಯೂ ಇರಬೇಕು ಎಂಬುದು ನನ್ನ ನಂಬಿಕೆ’ ಎಂದು ಫ್ರಾನ್ಸಿಸ್ ಹೇಳಿದರು.
‘ಪ್ರಸ್ತುತ ಸನ್ನಿವೇಶದಲ್ಲಿ ಜಗತ್ತಿನೆಲ್ಲೆಡೆ ಸಂಘರ್ಷಗಳನ್ನೇ ಕಾಣುತ್ತಿದ್ದೇವೆ. ಆದರೆ, ಜಾಗತಿಕವಾಗಿ ಶಾಂತಿ, ಸುರಕ್ಷತೆಯನ್ನು ಖಾತ್ರಿಪಡಿಸುವುದು ಭದ್ರತಾ ಮಂಡಳಿಯ ಮುಖ್ಯ ಜವಾಬ್ದಾರಿ. ಆದರೆ, ಈಗಿನ ಪರಿಸ್ಥಿಯನ್ನು ನೋಡಿದರೆ ತನ್ನ ಈ ಹೊಣೆಗಾರಿಕೆಯನ್ನು ನಿಭಾಯಿಸಲಾಗದ ಮಂಡಳಿಯು ಪಕ್ಷಪಾತದಿಂದ ವರ್ತಿಸುತ್ತಿದೆ’ ಎಂದು ವಿಶ್ಲೇಷಿಸಿದರು.
‘ಭದ್ರತಾ ಮಂಡಳಿಯು ತನ್ನ ಕರ್ತವ್ಯವನ್ನು ಪೂರ್ಣವಾಗಿ ನಿಭಾಯಿಸುವಲ್ಲಿ ವಿಫಲವಾಗಿರುವ ಕಾರಣ, ವಿಶ್ವಸಂಸ್ಥೆಯು ತನ್ನ ವಿಶ್ವಾಸಾರ್ಹತೆ ಕಳೆದುಕೊಳ್ಳುವಂತಾಗಿದೆ’ ಎಂದೂ ಅವರು ಕಳವಳ ವ್ಯಕ್ತಪಡಿಸಿದರು.
ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಮಾತನಾಡಿ, ‘ಆಯಾ ಕಾಲಕ್ಕೆ ತಕ್ಕಂತೆ ಬದಲಾವಣೆ ಹೊಂದುವಲ್ಲಿ ಭದ್ರತಾ ಮಂಡಳಿ ವಿಫಲವಾಗಿದೆ. ಅದರಲ್ಲೂ, ಕಳೆದ ಕೆಲ ದಶಕಗಳಲ್ಲಿ ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಆಗಿರುವ ಸ್ಥಿತ್ಯಂತರಕ್ಕೆ ತಕ್ಕಂತೆ ಬದಲಾಗಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.