ವಾಷಿಂಗ್ಟನ್: ಕಳೆದ ನಾಲ್ಕು ವರ್ಷಗಳಲ್ಲಿ ಬೈಡನ್ ಆಡಳಿತವು ಭಾರತದೊಂದಿಗಿನ ಸಂಬಂಧ ವಿಸ್ತರಿಸಿದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಹೇಳಿದ್ದಾರೆ.
‘ನಾವು ನ್ಯಾಟೊವನ್ನು ಬಲಪಡಿಸಿದ್ದೇವೆ. ನಾವು ಒಟ್ಟಾಗಿ ನ್ಯಾಟೊವನ್ನು ಬೆಳೆಸಿದ್ದೇವೆ. ಇಂಡೊ –ಪೆಸಿಫಿಕ್ ವಲಯದಲ್ಲಿ ನಾವು ಮಾಡಿದ ಕೆಲಸಗಳು ಅದ್ಭುತವಾಗಿದ್ದವು’ ಎಂದು ಅವರು ಫ್ಲೊರಿಡಾದಲ್ಲಿ ಮಾಧ್ಯಮದವರೊಂದಿಗೆ ಹೇಳಿದ್ದಾರೆ.
‘ಬೈಡನ್ ಆಡಳಿತದಲ್ಲಿ ಭಾರತದೊಂದಿನ ನಮ್ಮ ಸಂಬಂಧ ಮತ್ತಷ್ಟು ಸುಧಾರಿಸಿತು. ಜಪಾನ್ ಜೊತೆಗೆ ನಮ್ಮ ಸಂಬಂಧ ಮತ್ತಷ್ಟು ವೃದ್ಧಿಸಿತು. ಅವರ ಜೊತೆಗಿನ ರಕ್ಷಣಾ ಹೂಡಿಕೆ ದುಪ್ಪಟಾಯಿತು. ಉಕ್ರೇನ್ ಭದ್ರತಾ ನೆರವು ನೀಡುವುದು ಹಾಗೂ ತನ್ನ ಸಾರ್ವಭೌಮ ಪ್ರದೇಶವನ್ನು ರಕ್ಷಿಸಲು ಇಸ್ರೇಲ್‌ಗೆ ಸಹಕಾರ ನೀಡುವ ಜೊತೆಗೆ, ಇಂಡೊ–ಪೆಸಿಫಿಕ್ ಸಂಬಂಧದ ಬಗ್ಗೆಯೂ ನಮಗೆ ಗಮನ ಹರಿಸಲು ಸಾಧ್ಯವಾಯಿತು’ ಎಂದು ಹೇಳಿದ್ದಾರೆ.
‘ಫಿಲಿಪ್ಪಿನ್ಸ್ ಜೊತೆಗೆ ನಮ್ಮ ಸಂಬಂಧ ಹಳಸುವ ಹಂತದಲ್ಲಿತ್ತು. ಬೈಡನ್ ಆಡಳಿತದಲ್ಲಿ ಅದು ಸುಧಾರಣೆಗೊಂಡು, ಇದೀಗ ಅಮೆರಿಕ–ಫಿಲಿಪ್ಪಿನ್ಸ್ ನಡುವೆ ಉತ್ತಮ ಸಂಬಂಧ ಇದೆ’ ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷ ಸೋಲನುಭವಿಸಿದ ಬಳಿಕ ಲಾಯ್ಡ್ ಅವರ ಮೊದಲ ಪ್ರತಿಕ್ರಿಯೆ ಇದಾಗಿದೆ.
‘ಮತದಾರರ ಮನಸ್ಸಿನಲ್ಲಿ ಅತಿ ಮುಖ್ಯವಾದ ವಿಷಯ ಆರ್ಥಿಕತೆ ಇತ್ತು, ಅದಕ್ಕೆ ಜನರು ಮತ ಹಾಕಿದರು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಆರ್ಥಿಕತೆ ಜೊತೆಗೆ ಯುರೋಪ್ ಮತ್ತು ಮಧ್ಯಪ್ರಾಚ್ಯದ ವಿಷಯಗಳು ಕೂಡ ಬಹಳ ಮುಖ್ಯವಾಗಿದ್ದವು. ಅಲ್ಲಿನ ವಿಷಯಗಳನ್ನು ನಿರ್ವಹಿಸುವಲ್ಲಿ ಮತ್ತು ಸಂಪೂರ್ಣ ಪ್ರಾದೇಶಿಕ ಯುದ್ಧಕ್ಕೆ ಮಾರ್ಪಡಿಸದಂತೆ ತಡೆಯುವಲ್ಲಿ ನಾವು ಅದ್ಭುತ ಕೆಲಸ ಮಾಡಿದ್ದೇವೆ ಎಂದು ನಾನು ಭಾವಿಸುತ್ತೇನೆ’ ಎಂದು ಲಾಯ್ಡ್ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.