ADVERTISEMENT

ಲಸಿಕೆಗೆ ಸಿದ್ಧತೆ: 50 ಕೋಟಿ ಸಿರಿಂಜ್‌ ಸಂಗ್ರಹಕ್ಕೆ ಯುನಿಸೆಫ್‌ ನಿರ್ಧಾರ

ಕೋವಿಡ್‌–19ಗೆ ಲಸಿಕೆ ಲಭ್ಯವಾಗುವುದಕ್ಕೂ ಮುನ್ನವೇ ಈ ಸಿದ್ಧತೆ

ಪಿಟಿಐ
Published 20 ಅಕ್ಟೋಬರ್ 2020, 6:28 IST
Last Updated 20 ಅಕ್ಟೋಬರ್ 2020, 6:28 IST
   

ವಿಶ್ವಸಂಸ್ಥೆ:ಕೋವಿಡ್‌–19 ಗೆ ಲಸಿಕೆ ಲಭ್ಯವಾಗುವುದಕ್ಕಿಂತ ಮೊದಲೇ, ಈ ವರ್ಷಾಂತ್ಯಕ್ಕೆ 50 ಕೋಟಿ ಸಿರಿಂಜ್‌ಗಳನ್ನು ಸಂಗ್ರಹಿಸಲು ಯುನಿಸೆಫ್‌ ಮುಂದಾಗಿದೆ.

2021ರ ವೇಳೆಗೆ 100 ಕೋಟಿ ಸಿರಿಂಜ್‌ಗಳು ಸಂಗ್ರಹಿಸಲು ಯುನಿಸೆಫ್‌ ನಿರ್ಧರಿಸಿದೆ. ಒಂದೊಮ್ಮೆ ಲಸಿಕೆ ಲಭ್ಯವಾಗುತ್ತಿದ್ದಂತೆ, ಜನರಿಗೆ ಲಸಿಕೆ ನೀಡಲು ಅನುಕೂಲವಾಗಬೇಕು ಎಂಬ ಉದ್ದೇಶದಿಂದ ಸಂಸ್ಥೆ ಇಂಥ ಕ್ರಮಕ್ಕೆ ಮುಂದಾಗಿದೆ ಎಂದು ಮೂಲಗಳು ಹೇಳಿವೆ.

‘ಕೋವಿಡ್‌–19 ಲಸಿಕೆ ಲಭ್ಯತೆಗಾಗಿ ಇಡೀ ವಿಶ್ವವೇ ಎದುರು ನೋಡುತ್ತಿದೆ. ಲಸಿಕೆ ಲಭ್ಯವಾಗುತ್ತಿದ್ದಂತೆಯೇ ಅದರ ವ್ಯಾಪಕ ಬಳಕೆಗೆ ಹಿನ್ನಡೆಯಾಗಬಾರದು. ಹೀಗಾಗಿ ಸಿರಿಂಜ್‌ಗಳನ್ನು ಸುರಕ್ಷಿತವಾಗಿ, ತ್ವರಿತವಾಗಿ ಎಲ್ಲ ದೇಶಗಳಿಗೆ ತಲುಪಿಸಲು ಬೇಕಾದ ಸಿದ್ಧತೆಗಳಿಗೆ ಸಂಸ್ಥೆ ಚಾಲನೆ ನೀಡಿದೆ’ ಎಂದು ಯುನಿಸೆಫ್‌ ಹೇಳಿದೆ.

ADVERTISEMENT

‘ವಿಶ್ವದ ಎಲ್ಲ ಜನರಿಗೆ ಕೋವಿಡ್‌–19 ವಿರುದ್ಧದ ಲಸಿಕೆ ನೀಡುವುದು ಮಾನವ ಕುಲದ ಇತಿಹಾಸದಲ್ಲಿಯೇ ಬೃಹತ್‌ ಸಾಮೂಹಿಕ ಲಸಿಕೆ ಕಾರ್ಯಕ್ರಮವಾಗಲಿದೆ. ಹೀಗಾಗಿ, ಈ ಮಾರಕ ಸೋಂಕಿಗೆ ಲಸಿಕೆ ಲಭ್ಯವಾಗುತ್ತಿದ್ದಂತೆಯೇ ಸಮರೋಪಾದಿಯಲ್ಲಿ ಲಸಿಕೆ ಕಾರ್ಯಕ್ರಮ ಆರಂಭಿಸಬೇಕಾಗುತ್ತದೆ’ ಎಂದು ಯುನಿಸೆಫ್‌ನ ನಿರ್ದೇಶಕಿ ಹೆನ್ರಿಟಾ ಫೋರ್‌ ಹೇಳಿದರು.

‘ಲಸಿಕೆ ಕಾರ್ಯಕ್ರಮಕ್ಕೆ ಬಳಸುವ ಸಿರಿಂಜ್‌ಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಬೇಕು. ಬಳಸಿದ ಸಿರಿಂಜ್‌ಗಳಿಂದ ಉಂಟಾಗಬಹುದಾದ ಗಾಯ, ರಕ್ತದ ಮೂಲಕ ಕಾಯಿಲೆ ಪ್ರಸರಣವಾಗುವ ಅಪಾಯವನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಹೀಗಾಗಿ ಸಿರಿಂಜ್‌ಗಳ ವಿಲೇವಾರಿಗಾಗಿ 50 ಲಕ್ಷ ಸುರಕ್ಷತಾ ಬಾಕ್ಸ್‌ಗಳನ್ನು ಸಹ ಖರೀದಿ ಮಾಡಲಾಗುತ್ತದೆ’ ಎಂದು ಫೋರ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.