ಬದಲಾವಣೆ ಜಗದ ನಿಯಮ. ಆದರೆ ವಿಶ್ವಮಾನ್ಯವಾದ ಸಂಸ್ಥೆಯೊಂದು ಕೆಲವೇ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಕಾರಣದಿಂದ ಸುಧಾರಣೆಯನ್ನೇ ಕಾಣದೆ ಸೊರಗುತ್ತಿರು ವುದು ವಿಷಾದನೀಯ. ವಿಶ್ವದ ಎಲ್ಲ ರಾಷ್ಟ್ರಗಳನ್ನೂ ಒಟ್ಟಿಗೆ ಮುನ್ನಡೆಸುವುದರ ಮೂಲಕ ಜಗದೋದ್ಧಾರದ ಸದುದ್ದೇಶದೊಂದಿಗೆ 1945ರಲ್ಲಿ ವಿಶ್ವಸಂಸ್ಥೆ ಅಸ್ತಿತ್ವಕ್ಕೆ ಬಂದಿತು. ಇದಾಗಿ ಸುಮಾರು 8 ದಶಕಗಳಾಗುತ್ತ ಬಂದಿದ್ದರೂ ಸಂಸ್ಥೆಯು ಕಾಲಕ್ಕೆ ತಕ್ಕಂತೆ ಬದಲಾಗದೆ ತನ್ನ ಮಹತ್ವವನ್ನೇ ಕಳೆದುಕೊಳ್ಳುತ್ತಿದೆ.
ದ್ವಿತೀಯ ಮಹಾಯುದ್ಧದ ನಂತರ, ಅಂತಹ ಮತ್ತೊಂದು ಯುದ್ಧ ನಡೆಯದಂತೆ ನೋಡಿಕೊಂಡು, ವಿಶ್ವದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಸಾಧಿಸಲೋಸುಗ ಜನ್ಮತಾಳಿದ ವಿಶ್ವಸಂಸ್ಥೆಯು ತನ್ನ ಮೂಲ ಉದ್ದೇಶದಲ್ಲಿ ಬಹುತೇಕ ಸಫಲವಾಗಿದೆ. ಆದರೂ ಮೂಲ ಸಂರಚನೆ ಯಲ್ಲಿನ ಹಲವಾರು ದೋಷಗಳಿಂದಾಗಿ ಅದು ತನ್ನ
ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತಿದೆ. ಬದಲಾದ ಪರಿಸ್ಥಿತಿ
ಯೊಂದಿಗೆ ಹೆಜ್ಜೆ ಹಾಕಿದರೆ ಮಾತ್ರ ಸಂಸ್ಥೆಯು ತನ್ನ ಪ್ರಸ್ತುತ ತೆಯನ್ನು ಉಳಿಸಿಕೊಳ್ಳಲು ಸಾಧ್ಯ ಎಂಬುದು ವಾಸ್ತವ.
ವಿಶ್ವಸಂಸ್ಥೆ ಆರಂಭವಾದ 1945ರ ಜಗತ್ತಿಗೂ 2023ರ ಆಧುನಿಕ ಜಗತ್ತಿಗೂ ಅಜಗಜಾಂತರ ಇದೆ. ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ, ‘20ನೇ ಶತಮಾನದ ಮಧ್ಯಭಾಗದ ನೀತಿಗಳು 21ನೇ ಶತಮಾನಕ್ಕೆ ಹೊಂದಿಕೆ ಆಗಲಾರವು. ಹೀಗಿರುವಾಗ, ಬದಲಾಗುತ್ತಿರುವ ವಾಸ್ತವಗಳನ್ನು ನಮ್ಮ ಅಂತರರಾಷ್ಟ್ರೀಯ ಸಂಸ್ಥೆಗಳು ಗುರುತಿಸಬೇಕು. ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಗಳನ್ನು ವಿಸ್ತರಿಸಬೇಕು. ಆದ್ಯತೆಗ ಳನ್ನು ಮರುಪರಿಶೀಲಿಸಬೇಕು, ಯಾವ ಧ್ವನಿಗಳಿಗೆ ಪ್ರಾತಿನಿಧ್ಯ ನೀಡಬೇಕೋ ಅಂತಹವುಗಳಿಗೆ ನೀಡಬೇಕು’ ಎಂದು ಪ್ರತಿಪಾದಿಸಿದ್ದಾರೆ.
1945ರಲ್ಲಿ ಬರೀ 51 ಸದಸ್ಯ ರಾಷ್ಟ್ರಗಳನ್ನು ಹೊಂದಿದ್ದ ವಿಶ್ವಸಂಸ್ಥೆಯು ಈಗ 193 ದೇಶಗಳನ್ನು ಒಳಗೊಂಡಿದೆ. ಸಂಸ್ಥೆಯ ಆರಂಭದ ವರ್ಷಗಳಲ್ಲಿ, ಜಾಗತಿಕ ರಾಜಕೀಯದಲ್ಲಿ ಪ್ರಮುಖ ಪಾತ್ರಧಾರಿಗಳು ಅಮೆರಿಕ, ಇಂಗ್ಲೆಂಡ್, ರಷ್ಯಾ, ಚೀನಾ, ಫ್ರಾನ್ಸ್ ಸೇರಿದಂತೆ ವಿಜಯಶಾಲಿ ಮಿತ್ರರಾಷ್ಟ್ರಗಳು ಮಾತ್ರ ಆಗಿದ್ದವು. ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳು ಇನ್ನೂ ವಸಾಹತುಗಳಾಗಿದ್ದವು ಅಥವಾ ಆಗತಾನೇ ವಸಾಹತುಶಾಹಿ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದಿದ್ದವು. ಜಾಗತಿಕವಾಗಿ ಸೀಮಿತ ಸವಾಲುಗಳಿದ್ದ ಕಾಲವದು.
2023ರ ಜಗತ್ತು ಬಹು ಭಿನ್ನವಾಗಿದೆ. ಚೀನಾ, ಭಾರತ, ಬ್ರೆಜಿಲ್‌ನಂತಹ ದೇಶಗಳನ್ನು ಒಳಗೊಂಡ ಹೊಸ ಜಾಗತಿಕ ಶಕ್ತಿಗಳ ಉದಯದೊಂದಿಗೆ ಬಹುಮುಖಿ ಆಯಾಮ ಪಡೆದಿದೆ. ಹವಾಮಾನ ಬದಲಾವಣೆ, ಭಯೋತ್ಪಾದನೆ, ಪರಮಾಣು ಪ್ರಸರಣ, ಆಂತರಿಕ ಮತ್ತು ಬಾಹ್ಯ ಸಂಘರ್ಷಗಳು, ಸೈಬರ್ ಬೆದರಿಕೆ, ಸಾಂಕ್ರಾಮಿಕ ರೋಗಗಳಂತಹ ವೈವಿಧ್ಯಮಯ ಸಂಕೀರ್ಣ ಸವಾಲುಗಳನ್ನು ಎದುರಿಸುತ್ತಿದೆ. ಭಾರತ ದಂತಹ ಉದಯೋನ್ಮುಖ ಶಕ್ತಿಗಳು ತಮ್ಮ ಆರ್ಥಿಕ ಶಕ್ತಿ, ಶಾಂತಿಪಾಲನಾ ಕಾರ್ಯಾಚರಣೆ ಹಾಗೂ ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ಕೊಡುಗೆಗಳನ್ನು ನೀಡುವ ಮೂಲಕ ಮಹತ್ವಪೂರ್ಣವಾದ ಸ್ಥಾನ ಪಡೆದಿವೆ.
ವಿಶ್ವಸಂಸ್ಥೆಯಲ್ಲಿ ಮುಖ್ಯವಾಗಿ ದೋಷ ಇರುವುದು ಅದರ ಭದ್ರತಾ ಮಂಡಳಿಯಲ್ಲಿ, ಪಿ– 5 ರಾಷ್ಟ್ರಗಳು ಎಂದು ಕರೆಯಲಾಗುವ ಅಮೆರಿಕ, ರಷ್ಯಾ, ಫ್ರಾನ್ಸ್, ಚೀನಾ ಮತ್ತು ಇಂಗ್ಲೆಂಡ್ ಹೊಂದಿರುವ ವಿಟೊ ಅಧಿಕಾರ. ಭದ್ರತಾ ಮಂಡಳಿಯು ಈ ಐದು ದೇಶಗಳಿಗೆ ವಿಟೊದಂಥ ವಿಶೇಷ ಅಧಿಕಾರ ಕೊಟ್ಟಿರುವುದರಿಂದ, ಸಂಸ್ಥೆಯ ಯಾವುದೇ ನಿರ್ಧಾರಗಳಿಗೆ ಇವುಗಳಲ್ಲಿನ ಯಾವುದೇ ಒಂದು ದೇಶ ಸಹ ಅಡ್ಡಗಾಲು ಹಾಕಿ ತಡೆಯಬಹುದಾಗಿದೆ. ಇದರಿಂದ, ವಿಶ್ವಸಂಸ್ಥೆಯು ಯಾವುದೇ ಮುಖ್ಯ ನಿರ್ಧಾರ ತೆಗೆದು
ಕೊಳ್ಳುವುದು ಕಷ್ಟಸಾಧ್ಯವಾಗಿದೆ.
ವಿಶ್ವಸಂಸ್ಥೆಯು ಪ್ರಬಲವಾಗಿ ಇದ್ದಿದ್ದರೆ, ಪ್ರಸ್ತುತ ನಡೆಯುತ್ತಿರುವ ಇಸ್ರೇಲ್– ಪ್ಯಾಲೆಸ್ಟೀನ್, ರಷ್ಯಾ– ಉಕ್ರೇನ್ ನಡುವಿನ ಯುದ್ಧಗಳು, ಭಯೋತ್ಪಾದನೆ, ಮಾನವ ಹಕ್ಕುಗಳ ಉಲ್ಲಂಘನೆ, ಅಣ್ವಸ್ತ್ರ ತಯಾರಿಕೆಯಲ್ಲಿನ ಪೈಪೋಟಿ ತಡೆಯಬಹುದಿತ್ತು. ದುರಂತವೆಂದರೆ, ಇಂತಹ ವಿಪತ್ತಿನ ಸಮಯದಲ್ಲೂ ಅದು ಅಸಹಾಯಕವಾಗಿ ಕುಳಿತಿದೆ. ಈ ಕಾರಣದಿಂದ, ಜಿ20, ಎಸ್‌ಸಿಒ (ಶಾಂಘೈ ಸಹಕಾರ ಸಂಘಟನೆ), ಇಯು (ಐರೋಪ್ಯ ಒಕ್ಕೂಟ), ಜಿ7ನಂತಹ ಗುಂಪುಗಳು ಮಹತ್ವ ಪಡೆದುಕೊಂಡು ವಿಶ್ವಸಂಸ್ಥೆಯ ಪ್ರತಿಷ್ಠೆಯನ್ನೇ ಕುಂದಿಸಿವೆ.
ಇನ್ನು ವಿಶ್ವಸಂಸ್ಥೆಯ ಸುಧಾರಣೆಯಾಗಿ, ಭದ್ರತಾ ಮಂಡಳಿಯಲ್ಲಿ ಭಾರತಕ್ಕೂ ಕಾಯಂ ಸದಸ್ಯತ್ವ ಸಿಗ ಬೇಕೆಂದು ವಾದಿಸಲು ಹಲವಾರು ಕಾರಣಗಳಿವೆ. ಅವುಗಳಲ್ಲಿ ಪ್ರಮುಖವಾದವೆಂದರೆ, ಭಾರತವು ವಿಶ್ವದ ಜನಸಂಖ್ಯೆಯ ಗಮನಾರ್ಹ ಪ್ರಮಾಣವನ್ನು ಪ್ರತಿನಿಧಿಸುತ್ತಿದೆ. ವಿಶ್ವಸಂಸ್ಥೆಯ ಪ್ರಕಾರ, ಈ ವರ್ಷದ ಏಪ್ರಿಲ್‌ನಲ್ಲೇ ಭಾರತದ ಜನಸಂಖ್ಯೆ ವಿಶ್ವದಲ್ಲೇ ಅತಿ ಹೆಚ್ಚಾಗಿದೆ. ಕೆಲವು ಮೂಲಗಳ ಪ್ರಕಾರ, ದೇಶದ ಜನಸಂಖ್ಯೆಯು ಒಟ್ಟು ಮಾನವ ಸಂಕುಲದ ಶೇಕಡ 17ರಷ್ಟಿದೆ. ಇಂದು ಭಾರತೀಯರು ಬಾಹ್ಯಾಕಾಶದಿಂದ ಹಿಡಿದು ತಂತ್ರಜ್ಞಾನ, ವೈದ್ಯಕೀಯ, ಆರ್ಥಿಕತೆಯಂತಹ ಎಲ್ಲ ರಂಗಗಳಲ್ಲೂ ಛಾಪು ಮೂಡಿಸಿದ್ದಾರೆ. ಈ ಮೂಲಕ ದೇಶವು ಜಾಗತಿಕ ಭೂಪಟದಲ್ಲಿ ನಿರ್ಣಾಯಕ ಪಾತ್ರಧಾರಿಯಾಗಿದೆ. ವಿಶ್ವದ 5ನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿರುವ ದೇಶ, ಸದ್ಯದಲ್ಲೇ 3ನೇ ಸ್ಥಾನಕ್ಕೆ ಏರಲಿದೆ. ಭಾರತದ ಆರ್ಥಿಕ ಪ್ರಭಾವವು ಅಂತರ ರಾಷ್ಟ್ರೀಯ ಆರ್ಥಿಕ ನೀತಿಗಳು ಮತ್ತು ವ್ಯಾಪಾರದ ಮೇಲೆ ಗಣನೀಯವಾಗಿ ಆಗುತ್ತಿದೆ. ಪರಮಾಣು ಶಕ್ತಿಯಾಗಿ ಹೊರಹೊಮ್ಮಿರುವ ದೇಶವು ‘ಮೊದಲು ಅಣ್ವಸ್ತ್ರ ಬಳಸುವುದಿಲ್ಲ’ ಎಂಬ ಜವಾಬ್ದಾರಿಯುತ ನೀತಿಯನ್ನು ಅನುಸರಿಸುವ ಮೂಲಕ ಜಗತ್ತಿಗೇ ಮಾದರಿಯಾಗಿದೆ.
‘ವಸುಧೈವ ಕುಟುಂಬಕಂ’ ಘೋಷಣೆಯೊಂದಿಗೆ ಭಾರತದ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಜಿ20 ಶೃಂಗಸಭೆಯು ದೇಶದ ಶಕ್ತಿ, ಸಾಮರ್ಥ್ಯಗಳನ್ನು ಜಗಜ್ಜಾಹೀರಾಗಿಸಿದೆ. ಅದರಲ್ಲೂ ಪ್ರಮುಖವಾಗಿ, ದೇಶದ ಪ್ರಯತ್ನದಿಂದ ಈ ಶೃಂಗಸಭೆಯಲ್ಲಿ ಒಡಮೂಡಿದ ಒಮ್ಮ ತದ ಜಂಟಿ ಘೋಷಣೆಯು ವಿವಿಧ ಹಿತಾಸಕ್ತಿಗಳಿಂದ ಕೂಡಿದ ದೇಶಗಳನ್ನು ಒಗ್ಗೂಡಿಸುವಲ್ಲಿ ಭಾರತ ತೋರಿದ ಶಕ್ತಿಯ ದ್ಯೋತಕವಾಗಿದೆ. ಅಲ್ಲದೆ ಶಾಂತಿಪಾಲನಾ ಪಡೆಗೆ ಭಾರತದ ಕೊಡುಗೆ, ವಿಪತ್ತಿನಲ್ಲಿ ಅನ್ಯ ದೇಶದವರಿಗೆ ನೆರವಾಗುವ ಗುಣ, ಬಹುಪಕ್ಷೀಯತೆಗೆ ಸಂಬಂಧಿಸಿದಂತೆ ದೇಶದ ಬದ್ಧತೆ, ಅದರ ವೈವಿಧ್ಯ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ, ಅಣ್ವಸ್ತ್ರಗಳ ಜವಾಬ್ದಾರಿಯುತ ನಿರ್ವಹಣೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ಮತ್ತು ಭಾರತೀಯರ ಗೌರವವನ್ನು ಹೆಚ್ಚಿಸಿವೆ.
ಇವೆಲ್ಲವುಗಳನ್ನೂ ಪರಿಗಣಿಸಿದರೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಭಾರತಕ್ಕಿಂತ ಉತ್ತಮ ಸದಸ್ಯ ರಾಷ್ಟ್ರ ಇನ್ನೆಲ್ಲೂ ಸಿಗಲಾರದು. ದೇಶದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಹಲವಾರು ವೇದಿಕೆಗಳಲ್ಲಿ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವಕ್ಕೆ ಭಾರತದ ದಾವೆಯನ್ನು ಸಮರ್ಥವಾಗಿ ಮಂಡಿಸುತ್ತಲೇ ಬರುತ್ತಿದ್ದಾರೆ. ಇತ್ತೀಚೆಗೆ ನಡೆದ ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಮಾತ ನಾಡುತ್ತಾ, ವಿಶ್ವದ ಕೆಲವೇ ದೇಶಗಳು ತಮಗೆ ಬೇಕಾದಂತೆ ವಿಶ್ವವನ್ನು ಕೊಂಡೊಯ್ಯುವ ದಿನಗಳು ಮುಗಿದಿದ್ದು, ಪ್ರಜಾಸತ್ತಾತ್ಮಕ ಹಾಗೂ ನ್ಯಾಯಯುತ ವ್ಯವಸ್ಥೆಗಳು ಬಂದು ಜಗವನ್ನು ಮುನ್ನಡೆಸಲಿವೆ ಎಂದಿದ್ದಾರೆ.
ವಿಶ್ವಸಂಸ್ಥೆಗೆ ಅತ್ಯಗತ್ಯವಾಗಿ ಆಗಬೇಕಾದ ಸುಧಾ ರಣೆಯ ಬೇಡಿಕೆಯನ್ನು ಹಲವು ದೇಶಗಳು ಮೂರು ದಶಕಗಳಿಂದಲೂ ಪ್ರತಿಪಾದಿಸುತ್ತಲೇ ಬಂದಿವೆ. ಇದರಲ್ಲಿ ಭಾರತದ ಧ್ವನಿ ಪ್ರಬಲವಾಗಿದೆ. ಜೊತೆಗೆ, ಬ್ರೆಜಿಲ್, ಜಪಾನ್, ಜರ್ಮನಿಯಂತಹ ಕೆಲವು ದೇಶಗಳೂ ಸುಧಾರಣೆಗಾಗಿ ಒತ್ತಾಯಿಸುತ್ತಿವೆ. ಭಾರತ, ಬ್ರೆಜಿಲ್, ದಕ್ಷಿಣ ಆಫ್ರಿಕಾ ದೇಶಗಳು ಐಬಿಎಸ್‌ಎ ಎಂಬ ಸಮೂಹ ರಚಿಸಿಕೊಂಡಿದ್ದು, ಸುಧಾರಣೆಗಾಗಿ ಒತ್ತಾಯಿಸುತ್ತಿವೆ.
ವಿಶ್ವಸಂಸ್ಥೆಯ ಸುಧಾರಣೆಗಾಗಿ ಅದರ ಸನ್ನದಿಗೆ ತಿದ್ದುಪಡಿ ತರಬೇಕು. ಅದಕ್ಕಾಗಿ ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಪಾಲ್ಗೊಳ್ಳುವ ಮೂರನೇ ಎರಡರಷ್ಟು ರಾಷ್ಟ್ರಗಳು ಹಾಗೂ ಭದ್ರತಾ ಮಂಡಳಿಯ ಎಲ್ಲಾ ಕಾಯಂ ಸದಸ್ಯ ರಾಷ್ಟ್ರಗಳ ಒಪ್ಪಿಗೆ ಅನಿವಾರ್ಯ. ಭದ್ರತಾ ಮಂಡಳಿಯ ಪಿ- 5 ದೇಶಗಳಲ್ಲಿ ಈ ಕುರಿತು ಸಹಮತ ಇಲ್ಲದಿರುವುದೇ ಸುಧಾರಣಾ ಕಾರ್ಯ ನನೆಗುದಿಗೆ ಬೀಳಲು ಕಾರಣ.
ಪಿ- 5ಗೆ ಸೇರಿದ ಕೆಲ ರಾಷ್ಟ್ರಗಳು ಸ್ವಹಿತಾಸಕ್ತಿ ಬದಿಗೊತ್ತಿ ಸುಧಾರಣೆಗೆ ಮನಸ್ಸು ಮಾಡದೇ ಇದ್ದರೆ, ವಿಶ್ವಸಂಸ್ಥೆ ತನ್ನ ಮಹತ್ವವನ್ನು ಸಂಪೂರ್ಣವಾಗಿ ಕಳೆದುಕೊಂಡು ಮೂಲೆಗುಂಪಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಭಾರತದ ದೃಷಿಯಿಂದಷ್ಟೇ ಅಲ್ಲದೆ, ಸಮಗ್ರ ವಿಶ್ವದ ಏಳಿಗೆಗಾಗಿ ಸುಧಾರಣೆಯ ಅಗತ್ಯವಿದೆ.
ಲೇಖಕ: ಅಂತರರಾಷ್ಟ್ರೀಯ ಕಾನೂನು ಸಲಹೆಗಾರ ವಿದೇಶಾಂಗ ಇಲಾಖೆ, ನವದೆಹಲಿ
(ಲೇಖನದಲ್ಲಿನ ಅಂಶಗಳು ಸಂಪೂರ್ಣವಾಗಿ ಲೇಖಕರ ವೈಯಕ್ತಿಕ ಅಭಿಪ್ರಾಯಗಳಾಗಿರುತ್ತವೆ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.