ADVERTISEMENT

‘ಪಾಕಿಸ್ತಾನ ನಾಶವಾಗದ ಹೊರತು, ವಿಶ್ವ ಶಾಂತಿ–ಪ್ರಾದೇಶಿಕ ಭದ್ರತೆ ಅಸಾಧ್ಯ’

ಉಗ್ರರ ದಾಳಿಯನ್ನು ಕಟುವಾಗಿ ಟೀಕಿಸಿದ ಸಿಂಧಿ ರಾಜಕೀಯ ಕಾರ್ಯಕರ್ತ ಶಫಿ ಬರ್ಫಾತ್‌

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2019, 5:17 IST
Last Updated 15 ಫೆಬ್ರುವರಿ 2019, 5:17 IST
   

ಫ್ರಾಂಕ್‌ಫರ್ಟ್‌(ಜರ್ಮನಿ):ಶ್ರೀನಗರ–ಜಮ್ಮು ಹೆದ್ದಾರಿಯ ಅವಂತಿಪೋರಾದಲ್ಲಿ ಉಗ್ರರು ನಡೆಸಿದಘೋರ ಕೃತ್ಯವನ್ನು ಸದ್ಯಗಡಿಪಾರಾಗಿರುವ ಸಿಂಧಿ ರಾಜಕೀಯ ಕಾರ್ಯಕರ್ತ ಶಫಿ ಬರ್ಫಾತ್‌ ಖಂಡಿಸಿದ್ದಾರೆ.

ಜೇ ಸಿಂಧ್ ಮುತ್ತಾಹಿದಾ ಮಹಾಜ್ (ಜೆಎಸ್ಎಂಎಂ) ಮುಖ್ಯಸ್ಥರಾಗಿರುವಬರ್ಫಾತ್‌ ಈ ಕೃತ್ಯವನ್ನು ಕಟುವಾಗಿ ಟೀಕಿಸಿದ್ದು, ‘ಪಾಕಿಸ್ತಾನ ನಿರ್ಮೂಲನೆಯಾಗದ ಹೊರತು, ವಿಶ್ವದಲ್ಲಿ ಶಾಂತಿ ಸ್ಥಾಪಿಸಲು ಹಾಗೂ ದಕ್ಷಿಣ ಏಷ್ಯಾದಲ್ಲಿ ಭದ್ರತೆ ಕಲ್ಪಿಸಲು ಸಾಧ್ಯವಿಲ್ಲ ಎಂಬುದನ್ನುಅಂತರರಾಷ್ಟ್ರೀಯ ಸಮುದಾಯವು ಅರ್ಥಮಾಡಿಕೊಳ್ಳಬೇಕು’ಎಂದು ಒತ್ತಾಯಿಸಿದ್ದಾರೆ.

‘ಪಾಕಿಸ್ತಾನದ ಅಡಿಪಾಯದಲ್ಲಿ ಇಸ್ಲಾಂ ಮೂಲಭೂತವಾದಿ ತತ್ವವುಬೇರೂರಿದೆ. ಅದು ಆರಂಭದಿದಂದಲೂ ತೀವ್ರವಾದಿ ಭಯೋತ್ಪಾದನೆಗೆ ಮೂಲವಾಗಿದೆ. ದಶಕಗಳಿಗೂ ಹೆಚ್ಚುಕಾಲದಿಂದ ಭಾರತ, ಅಫ್ಘಾನಿಸ್ತಾನ ಹಾಗೂ ವಿಶ್ವದ ಬೇರೆಬೇರೆ ದೇಶಗಳಿಗೆಭಯೋತ್ಪಾದಕರನ್ನು ರವಾನಿಸುತ್ತಿರುವ ದೇಶ ಪಾಕಿಸ್ತಾನ. ಇದು ವಿಶ್ವದ ಶಾಂತಿ ಹಾಗೂ ಪ್ರಾದೇಶಿಕ ಭದ್ರತೆಗೆ ಬೆದರಿಕೆ ಒಡ್ಡುತ್ತಿರುವುದು ಮಾತ್ರವಲ್ಲ. ಸಿಂಧಿ, ಪಾಶೂನ್‌, ಬಲೂಚ್‌ಸಮುದಾಯಗಳ ಮೇಲೆ ರಾಜಕೀಯ ಪ್ರಭಾವ ಬೀರುವ, ಆರ್ಥಿಕ ಭಯೋತ್ಪಾದನೆಯನ್ನು ಹೇರಲು ಪ್ರಯತ್ನಿಸುತ್ತಿದೆ’ ಎಂದು ದೂರಿದ್ದಾರೆ.

ADVERTISEMENT

ಪಾಕಿಸ್ತಾನ ವಿರುದ್ಧ ವಾಗ್ದಾಳಿ ಮುಂದುವರಿಸಿದ ಅವರು, ಜಾಗತಿಕ ಶಾಂತಿ ಹಾಗೂ ಪ್ರಾದೇಶಿಕ ಭದ್ರತೆಗಾಗಿ ಪಾಕಿಸ್ತಾನವನ್ನು ವಿಭಜಿಸುವಂತೆ ವಿಶ್ವಸಂಸ್ಥೆಯನ್ನು ಒತ್ತಾಯಿಸಿದ್ದಾರೆ. ಪಾಕಿಸ್ತಾನ ವಿಭಜನೆ ಮಾತ್ರವೇ ಜಗತ್ತಿನ ಮತ್ತು ಪ್ರಾದೇಶಿಕ ಧಾರ್ಮಿಕ ಉಗ್ರವಾದಿತ್ವ, ಭಯೋತ್ಪಾದನೆಯನ್ನು ನಿಯಂತ್ರಿಸಲು ಇರುವ ಮಾರ್ಗ ಎಂದು ಸಮರ್ಥನೆ ನೀಡಿದ್ದಾರೆ.

ಕೇಂದ್ರ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್‌) ಸಿಬ್ಬಂದಿ ಪ್ರಯಾಣಿಸುತ್ತಿದ್ದ ಬಸ್‌ಗೆ ಜೈಷ್‌–ಎ–ಮೊಹಮ್ಮದ್‌ ಉಗ್ರನೊಬ್ಬ ಸ್ಫೋಟಕ ತುಂಬಿದ್ದ ಸ್ಕಾರ್ಪಿಯೊವನ್ನು ಡಿಕ್ಕಿ ಹೊಡೆಸಿದ್ದರಿಂದ44ಯೋಧರು ಹುತಾತ್ಮರಾಗಿದ್ದರು. ಸ್ಫೋಟದ ಸಂದರ್ಭದಲ್ಲಿ ಹೆದ್ದಾರಿಯ ವಿವಿಧೆಡೆ ಬೇರೆ ಬೇರೆ ಬಸ್‌ಗಳಲ್ಲಿ ಸಿಆರ್‌ಪಿಎಫ್‌ನ 2,547 ಸಿಬ್ಬಂದಿ ಸಂಚರಿಸುತ್ತಿದ್ದರು. ಇವರಲ್ಲಿ ಹಲವು ಮಂದಿ ರಜೆ ಕಳೆದು ಮತ್ತೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದರು.

ಪಾಕಿಸ್ತಾನ ಬೆಂಬಲಿತ ಜೈಷ್‌–ಎ–ಮೊಹಮ್ಮದ್‌ ಸಂಘಟನೆಯು ಆತ್ಮಹತ್ಯಾ ದಾಳಿಕೋರನ ಮೂಲಕ ಈ ದಾಳಿ ಸಂಘಟಿಸಿದ್ದಾಗಿ ಹೇಳಿಕೆ ನೀಡಿದ್ದು, ಕೃತ್ಯದ ಹೊಣೆ ಹೊತ್ತುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.