ವಿಶ್ವಸಂಸ್ಥೆ: ಪಾಕಿಸ್ತಾನ ಮೂಲದ ಜೈಷ್–ಎ–ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್‌ನನ್ನು ಜಾಗತಿಕ ಉಗ್ರ ಎಂದು ವಿಶ್ವಸಂಸ್ಥೆ ಬುಧವಾರ ಘೋಷಿಸಿದೆ.
ಮಸೂದ್‌ನನ್ನು ಜಾಗತಿಕ ಉಗ್ರರ ಈ ಪಟ್ಟಿಗೆ ಸೇರಿಸಬೇಕು ಎಂಬ ಪ್ರಸ್ತಾವಕ್ಕೆ ತಡೆಯೊಡ್ಡಿದ್ದ ಚೀನಾ, ತನ್ನ ನಿಲುವನ್ನು ಬದಲಿಸಿಕೊಂಡ ನಂತರ ವಿಶ್ವಸಂಸ್ಥೆ ಈ ಘೋಷಣೆ ಮಾಡಿದೆ. ಇದು ಭಾರತಕ್ಕೆ ಸಿಕ್ಕ ಬಹುದೊಡ್ಡ ರಾಜತಾಂತ್ರಿಕ ಜಯ ಎಂದು ಬಣ್ಣಿಸಲಾಗಿದೆ.
ವಿಶ್ವಸಂಸ್ಥೆಯ ಈ ಕ್ರಮದಿಂದಾಗಿ ಮಸೂದ್‌ಗೆ ಸೇರಿದ ಆಸ್ತಿ ಹಾಗೂ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಪ್ರಯಾಣ ಹಾಗೂ ಶಸ್ತ್ರಾಸ್ತ್ರಗಳ ಬಳಕೆ ಮೇಲೆ ನಿರ್ಬಂಧ ಹೇರಲಾಗುತ್ತದೆ.
ಪುಲ್ವಾಮಾ ದಾಳಿಯ ಪ್ರಮುಖ ಸಂಚುಕೋರ ಮಸೂದ್ ಅಜರ್‌ನನ್ನು ಜಾಗತಿಕ ಭಯೋತ್ಪಾದಕ ಪಟ್ಟಿಗೆ ಸೇರಿಸಬೇಕು ಎಂಬ ಭಾರತದ ಮನವಿಗೆ ಬೆಂಬಲ ವ್ಯಕ್ತಪಡಿಸಿದ್ದ ಫ್ರಾನ್ಸ್, ಬ್ರಿಟನ್, ಅಮೆರಿಕ ನಾಲ್ಕು ಬಾರಿ ಪ್ರಸ್ತಾವ ಸಲ್ಲಿಸಿದ್ದವು. ಇದಕ್ಕೆ ತಡೆಯೊಡ್ಡಿದ್ದ ಚೀನಾ, ಸೂಕ್ತ ರೀತಿಯಲ್ಲಿ ಇದನ್ನು ಇತ್ಯರ್ಥ ಪಡಿಸಲಾಗುವುದು ಎಂದು ಹೇಳಿತ್ತು.
‘ಎಲ್ಲರೂ ಕೈಜೋಡಿಸಿದ್ದರಿಂದ ಮಸೂದ್‌ನನ್ನು ಜಾಗತಿಕ ಭಯೋತ್ಪಾದಕ ಪಟ್ಟಿಗೆ ಸೇರಿಸಲು ಸಾಧ್ಯವಾಗಿದೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು’ ಎಂದು ಭಾರತದ ರಾಯಭಾರಿ ಮತ್ತು ವಿಶ್ವಸಂಸ್ಥೆಯ ಕಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ಅವರು ಟ್ವೀಟ್ ಮಾಡಿದ್ದಾರೆ.
ಚೀನಾ ಕೂಡ ಇದಕ್ಕೆ ಬೆಂಬಲ ವ್ಯಕ್ತಪಡಿಸಿದೆಯೇ ಎಂದು ಕೇಳಿದ ಪ್ರಶ್ನೆಗೆ ‘ಹೌದು’ ಎಂದು ಉತ್ತರಿಸಿದ್ದಾರೆ.
ಮಸೂದ್ ಅಜರ್ ನೇತೃತ್ವದ ಜೈಷೆ–ಎ– ಮೊಹಮ್ಮದ್ ಉಗ್ರ ಸಂಘಟನೆ ಪುಲ್ವಾಮಾದಲ್ಲಿ ಆತ್ಮಹತ್ಯೆ ಬಾಂಬ್ ದಾಳಿ ನಡೆಸಿ 40 ಯೋಧರನ್ನು ಹತ್ಯೆ ಮಾಡಿತ್ತು. ಈ ಹಿನ್ನೆಯಲ್ಲಿ ಭಾರತ, ಜೈಷೆ–ಎ– ಮೊಹಮ್ಮದ್ ಉಗ್ರ ಸಂಘಟನೆಯನ್ನು ಜಾಗತಿಕವಾಗಿ ನಿಷೇಧಿಸಬೇಕು ಎಂದು ವಿಶ್ವಸಂಸ್ಥೆಯಲ್ಲಿ ಬಲವಾದ ವಾದ ಮಂಡಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.