ವಿಶ್ವಸಂಸ್ಥೆ: ಪಾಕಿಸ್ತಾನ ಮೂಲದ ಜೈಷ್ –ಎ–ಮೊಹಮ್ಮದ್ ಮತ್ತು ಲಷ್ಕರ್ ಎ–ತಯ್ಬಾ ಭಯೋತ್ಪಾದಕ ಸಂಘಟನೆಗಳನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿ ನಿಷೇಧಿಸಿದ್ದು, ಈ ಗುಂಪುಗಳು ನಡೆಸುವ ಕೃತ್ಯಗಳನ್ನು ಕಠಿಣ ಪದಗಳಲ್ಲಿ ಖಂಡಿಸಬೇಕು ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ ಶೃಂಗ್ಲಾ ಹೇಳಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆ ನಂತರ ಸೋಮವಾರ ಸುದ್ದಿಗಾರರೊಂದಿಗೆ ಮಾತನಡಿದ ಅವರು, ‘ಅಫ್ಗಾನಿಸ್ತಾನ ಕುರಿತು ಭಾರತದ ಅಧ್ಯಕ್ಷತೆಯಲ್ಲಿ ನಡೆದ ಭದ್ರತಾ ಮಂಡಳಿ ಸಭೆಯಲ್ಲಿ ಅಂಗೀಕರಿಸಿದ ನಿರ್ಣಯದಲ್ಲಿ ವಿಶ್ವಸಂಸ್ಥೆ ನಿಷೇಧಿಸಿರುವ ಸಂಘಟನೆಗಳು, ಘಟಕಗಳು ಮತ್ತು ವ್ಯಕ್ತಿಗಳನ್ನು ಉಲ್ಲೇಖಿಸಲಾಗಿದೆ ಎಂದು ಹೇಳಿದರು.
‘ಸೋಮವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಅಂಗೀಕರಿಸಿದ ನಿರ್ಣಯ, ಈ ನಿಷೇಧಿತ ಸಂಘಟನೆಗಳು ಬೇರೆ ದೇಶಗಳ ಮೇಲೆ ದಾಳಿ ಮಾಡಲು ಮತ್ತು ಬೆದರಿಕೆ ಹಾಕಲು, ಅಫ್ಗನ್ ಸೇರಿದಂತೆ, ಭಯೋತ್ಪಾದನೆ ವಿರುದ್ಧ ಹೋರಾಟ ನಡೆಸುವ ಯಾವುದೇ ದೇಶಗಳನ್ನೂ ಬಳಸಿಕೊಳ್ಳುವಂತಿಲ್ಲ ಎಂದು ಹೇಳಿರುವುದಾಗಿ‘ ಶೃಂಗ್ಲಾ ತಿಳಿಸಿದರು.
ವಿಶ್ವಸಂಸ್ಥೆಯ ನಿರ್ಣಯ 1267 (1999) ಅಡಿಯಲ್ಲಿ ಲಷ್ಕರ್ – ಎ– ತೊಯ್ಬಾ (ಎಲ್‌ಇಟಿ) ಮತ್ತು ಜೈಷ್ – ಇ– ಮೊಹಮ್ಮದ್ (ಜೆಇಎಂ) ಹಾಗೂ ಹಕ್ಕಾನಿ ನೆಟ್‌ವರ್ಕ್ ಐಎಸ್ಐಎಲ್(ದಾಯೇಶ್), ಅಲ್–ಕೈದಾ ಮತ್ತು ಈ ಸಂಘಟನೆಗೆ ಸಂಬಂಧಿಸಿದ ವ್ಯಕ್ತಿಗಳು, ಗುಂಪುಗಳು, ಉದ್ಯಮಗಳು ಮತ್ತು ಘಟಕಗಳನ್ನು ಭಯೋತ್ಪಾದಕ ಸಂಘಟನೆಗಳೆಂದು ಪಟ್ಟಿ ಮಾಡಲಾಗಿದೆ. ಜೆಇಎಂ ಸಂಸ್ಥಾಪಕ ಮಸೂದ್ ಅಜರ್ ಮತ್ತು ಎಲ್ಇಟಿ ನಾಯಕ ಹಫೀಜ್ ಸಯೀದ್ ಅವರನ್ನು ಇದೇ ನಿರ್ಣಯ, ನಿರ್ಬಂಧಗಳ ಅಡಿಯಲ್ಲಿ ಜಾಗತಿಕ ಭಯೋತ್ಪಾದಕರು ಎಂದು ಪಟ್ಟಿ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.