ನ್ಯೂಯಾರ್ಕ್: ಡೊನಾಲ್ಡ್ ಟ್ರಂಪ್.. ಸದ್ಯ ಜಾಗತಿಕವಾಗಿ ಬಹು ಚರ್ಚಿತ ಹೆಸರು. ಉದ್ಯಮ ಕ್ಷೇತ್ರದಿಂದ ರಿಯಲ್ ಎಸ್ಟೇಟ್ ವಹಿವಾಟು, ರಿಯಾಲಿಟಿ ಟಿ.ವಿ. ಕಾರ್ಯಕ್ರಮದ ಸ್ಟಾರ್ ಪಟ್ಟದಿಂದ ಹಿಡಿದು ಕ್ರಿಮಿನಲ್ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಅಮೆರಿಕದ ಮೊದಲ ಮಾಜಿ ಅಧ್ಯಕ್ಷ ಎಂಬ ‘ಕುಖ್ಯಾತಿ’ವರೆಗೆ ಅವರದು ‘ಬಹುಮುಖ ಪ್ರತಿಭೆ’.
ಅಧ್ಯಕ್ಷೀಯ ಚುನಾವಣೆ ಪ್ರಚಾರದ ವೇಳೆ ಎರಡು ಬಾರಿ ನಡೆದಿದ್ದ ಹತ್ಯೆ ಯತ್ನಗಳಿಂದ ಸುರಕ್ಷಿತವಾಗಿ ಪಾರಾದ ಟ್ರಂಪ್ ಈಗ ಹೊಸ ಇತಿಹಾಸ ಬರೆದಿದ್ದಾರೆ.
ಈ ಪ್ರಕ್ರಿಯೆಯಲ್ಲಿ ಅವರು ಡೆಮಾಕ್ರಟಿಕ್ ಪಕ್ಷ ಮತ್ತು ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಅಸಂಖ್ಯ ಬೆಂಬಲಿಗರ ಕನಸುಗಳನ್ನು ನುಚ್ಚುನೂರು ಮಾಡಿದ್ದಾರೆ.
2020ರಲ್ಲಿ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಿ, 2024ರ ಚುನಾವಣೆಗೆ ಮತ್ತೆ ನಾಮಪತ್ರ ಸಲ್ಲಿಸುವ ನಡುವಿನ ನಾಲ್ಕು ವರ್ಷದಲ್ಲಿ ಎಂದಿಗೂ ಟ್ರಂಪ್ ಸುದ್ದಿಯ ತೆರೆಮರೆಗೆ ಸರಿಯಲೇ ಇಲ್ಲ. ಅಧಿಕಾರ ಇಲ್ಲದಿದ್ದಾಗಲೂ ಭಿನ್ನ ಕಾರಣಗಳಿಗಾಗಿ ಸುದ್ದಿಯಲ್ಲಿದ್ದರು. ಅವರು ಅಮೆರಿಕನ್ನರ ಪಾಲಿಗೆ ‘ಮಾಸದ’ ಅಧ್ಯಕ್ಷ!.
2020ರಲ್ಲಿ ಜೋ ಬೈಡನ್ ಚುನಾಯಿತರಾದರೂ, ಆ ಫಲಿತಾಂಶ ಒಪ್ಪಲು ಟ್ರಂಪ್ ಸಿದ್ಧರಿರಲಿಲ್ಲ. ಅವರ ಬೆಂಬಲಿಗರು ಆ ವರ್ಷ ಜನವರಿ 6ರಂದು ಅಮೆರಿಕದ ರಾಜಧಾನಿಗೆ ಲಗ್ಗೆ ಇಟ್ಟಿದ್ದರು. ದೊಂಬಿಯಾಯಿತು. ಈ ಬೆಳವಣಿಗೆಗಳನ್ನು ಖುದ್ದು ಅಮೆರಿಕವಷ್ಟೇ ಅಲ್ಲ, ಜಗತ್ತು ಬೆರಗುಕಣ್ಣುಗಳಿಂದ ನೋಡಿತು.
ಅಧ್ಯಕ್ಷ ಸ್ಥಾನದ ಓಟದಲ್ಲಿ ಈಗಿನದು ಅವರ 3ನೇ ಯತ್ನ. ಓಟದ ಹಾದಿಯಲ್ಲಿ ಅಡ್ಡಿಗಳಿದ್ದವು. ಬೆನ್ನಿಗೆ ಕ್ರಿಮಿನಲ್ ಆರೋಪಗಳಿದ್ದವು. ದಾಖಲೆ ತಿರುಚಿದ್ದ ಪ‍್ರಕರಣದಲ್ಲಿ ನ್ಯೂಯಾರ್ಕ್ ಕೋರ್ಟ್ ಶಿಕ್ಷೆಗೂ ಗುರಿಪಡಿಸಿತ್ತು. ಆಗಲೂ ಟ್ರಂಪ್ ಸುದ್ದಿಯಾದರು. ಆಗವರು ಶಿಕ್ಷೆಗೊಳಗಾದ ಮೊದಲ ಮಾಜಿ ಅಧ್ಯಕ್ಷ!
ಪೆನ್‌ಸಿಲ್ವೇನಿಯಾದಲ್ಲಿ ಚುನಾವಣೆ ರ‍್ಯಾಲಿಯಲ್ಲಿ ಟ್ರಂಪ್ ಗುರಿಯಾಗಿಸಿ ಗುಂಡಿನ ದಾಳಿ ನಡೆಯಿತು. ಒಂದು ಗುಂಡು ಅವರ ಬಲಕಿವಿಯನ್ನು ಸವರಿಕೊಂಡೇ ಹೋಯಿತು. ಟ್ರಂಪ್ ಪ್ರಾಣಾಪಾಯದಿಂದ ಪಾರಾಗಿದ್ದರು.
ಕಿವಿಗೆ ಬ್ಯಾಂಡೇಜ್ ಹಾಕಿದ ಸ್ಥಿತಿಯಲ್ಲೇ ಮಿಲ್ವಾಕಿಯಲ್ಲಿ ಜುಲೈನಲ್ಲಿ ನಡೆದಿದ್ದ ರಿಪಬ್ಲಿಕನ್ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಭಾಗಿಯಾಗಿದ್ದರು.
ಮತ್ತೊಮ್ಮೆ ಸೆಪ್ಟೆಂಬರ್ 15ರಲ್ಲಿ ಫ್ಲಾರಿಡಾ ಗಾಲ್ಫ್ ಕ್ಲಬ್‌ನಲ್ಲಿ ಅವರ ಮೇಲೆ ಹತ್ಯೆಗೆ ಸಂಚು ನಡೆದಿತ್ತು. ಯತ್ನ ನಡೆಯುವ ಮೊದಲೇ ಆರೋಪಿಯು ಸಿಕ್ಕಿಬಿದ್ದಿದ್ದ.
ಈ ಬೆಳವಣಿಗೆಗಳಿಂದ ಟ್ರಂಪ್ ಧೃತಿಗೆಡಲಿಲ್ಲ. ಬೆಂಬಲಿಗರ ಉತ್ಸಾಹವೂ ಕುಗ್ಗಲಿಲ್ಲ. ಅವರ ಅವಧಿಯ ನೀತಿಗಳನ್ನು ಮೆರೆಸುತ್ತಾ ಟ್ರಂಪ್ ಧ್ಯಾನ, ರ‍್ಯಾಲಿ ಅವಿರತ ನಡೆಯಿತು. ಆ ಯತ್ನಗಳೀಗ ಯಶಸ್ಸು ನೀಡಿವೆ.
2016ರಲ್ಲಿ ಟ್ರಂಪ್ ಮೊದಲ ಬಾರಿಗೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ವಿರುದ್ಧ ಜಯಗಳಿಸಿದ್ದರು. ಈಗ ಮತ್ತೆ ಅದೇ ಪಕ್ಷದ ಮಹಿಳಾ ಅಭ್ಯರ್ಥಿ ಕಮಲಾ ಹ್ಯಾರಿಸ್ ವಿರುದ್ಧ ಗೆದ್ದಿದ್ದಾರೆ.
ಟ್ರಂಪ್ ಪ್ರವೇಶಕ್ಕೆ ಶ್ವೇತಭವನವೀಗ ಕಾಯುತ್ತಿದೆ. ಅಮೆರಿಕಲ್ಲಿ ಮುಂದಿನ ನಾಲ್ಕು ವರ್ಷ ‘ಟ್ರಂಪ್‘ ಕಾಲ! ‘ತಂಪು ಕಾಲ’ ಎಂಬ ಸಂಭ್ರಮದಲ್ಲಿ ಅವರ ಬೆಂಬಲಿಗರಿದ್ದಾರೆ.
ಜೂನ್ 14, 1946ರಂದು ನ್ಯೂಯಾರ್ಕ್‌ನ ಕ್ವೀನ್ಸ್‌ನಲ್ಲಿ ಮೇರಿ–ಫ್ರೆಡ್ ಟ್ರಂಪ್ ದಂಪತಿ ಪುತ್ರನಾಗಿ ಡೊನಾಲ್ಡ್ ಜನನ. ದಂಪತಿಯ ಐವರು ಮಕ್ಕಳಲ್ಲಿ ಇವರು 4ನೇಯವರು. ತಂದೆ ರಿಯಲ್ ಎಸ್ಟೇಟ್ ಉದ್ಯಮಿ.
1968ರಲ್ಲಿ ಪೆನ್‌ಸಿಲ್ವೇನಿಯಾದ ವಾರ್ಟನ್ ಸ್ಕೂಲ್ ಆಫ್ ಫೈನಾನ್ಸ್ ಅಂಡ್ ಕಾಮರ್ಸ್‌ನಿಂದ ಪದವೀಧರನಾಗಿ ಹೊರಹೊಮ್ಮಿದರು.
1971ರಲ್ಲಿ ತಂದೆ ನಡೆಸುತ್ತಿದ್ದ ಕಂಪನಿಯ ಉಸ್ತುವಾರಿ ಪಡೆದ ಟ್ರಂಪ್ ಆರ್ಗನೈಸೇಷನ್ ಎಂದು
ನಾಮಕರಣ ಮಾಡಿದರು. ಹೋಟೆಲ್,
ರೆಸಾರ್ಟ್, ವಸತಿ, ವಾಣಿಜ್ಯ ಕಟ್ಟಡಗಳು, ಗಾಲ್ಫ್ ಕೋರ್ಸ್ ಹೀಗೆ ಉದ್ಯಮದ ಕವಲುಗಳು ವಿವಿಧ ಕ್ಷೇತ್ರಗಳಲ್ಲಿ ಬೆಳೆದವು.
2004ರಲ್ಲಿ ರಿಯಾಲಿಟಿ ಟಿ.ವಿ ಷೋ ‘ದ ಅಪ್ರೈಂಟೀಸ್’ ಕಾರ್ಯಕ್ರಮದಲ್ಲಿ ಭಾಗಿಯಾದರು. ಈ ಮೂಲಕ ಮನೆಮಾತಾದರು.
ಮುಂದೆ ಜೆಕ್ ಮೂಲದ ಅಥ್ಲೆಟಿಕ್ ಪಟು, ರೂಪದರ್ಶಿ ಇವಾನಾ ಜೆಲ್‌ನಿಕೊವಾ ಜೊತೆ ಮದುವೆ. ದಂಪತಿಗೆ ಮೂವರು ಮಕ್ಕಳು. ಡೊನಾಲ್ಡ್ ಜೂನಿಯರ್, ಇವಾಂಕಾ, ಎರಿಕ್, 1990ರಲ್ಲಿ ವಿಚ್ಛೇದನವೂ ಆಯಿತು.
1993ರಲ್ಲಿ ನಟಿ ಮಾರ್ಲಾ ಮ್ಯಾಪೆಲ್ಸ್ ಅವರನ್ನು ಟ್ರಂಪ್ ಮದುವೆ ಆದರು.1999ರಲ್ಲಿ ವಿಚ್ಛೇದನ ಆಯಿತು. ಈ ದಂಪತಿಗೆ ಒಂದು ಮಗುವಿದೆ.
ಟ್ರಂಪ್ ಅವರ ಹಾಲಿ ಪತ್ನಿ ಹೆಸರು ಮೆಲಾನಿಯಾ. 2005ರಲ್ಲಿ ಇವರ ಜೊತೆಗೆ ಮದುವೆಯಾಯಿತು. ಇವರು ಮಾಜಿ ರೂಪದರ್ಶಿ. ಈ ದಂಪತಿಗೆ ಬರೊನ್ ವಿಲಿಯಂ ಟ್ರಂಪ್ ಹೆಸರಿನ ಪುತ್ರನಿದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.