ADVERTISEMENT

‘ಇರಾನ್‌ ಮೇಲೆ ದಾಳಿಯಾದರೆ ಯುದ್ಧ’

ಸಂಭಾವ್ಯ ಸೇನಾ ದಾಳಿ ವಿರುದ್ಧ ಇರಾನ್‌ ವಿದೇಶಾಂಗ ಸಚಿವರ ಎಚ್ಚರಿಕೆ

ರಾಯಿಟರ್ಸ್
Published 19 ಸೆಪ್ಟೆಂಬರ್ 2019, 19:34 IST
Last Updated 19 ಸೆಪ್ಟೆಂಬರ್ 2019, 19:34 IST
ಮಹಮ್ಮದ್‌ ಜವಾದ್‌ ಜರೀಫ್
ಮಹಮ್ಮದ್‌ ಜವಾದ್‌ ಜರೀಫ್   

ದುಬೈ: ‘ಇರಾನ್‌ ಮೇಲೆ ಸೌದಿ ಅರೇಬಿಯಾ ಅಥವಾ ಅಮೆರಿಕ ನಡೆಸಲಿರುವ ಸೇನಾ ದಾಳಿ ಪೂರ್ಣ ಯುದ್ಧಕ್ಕೆ ಕಾರಣವಾಗಲಿದೆ’ ಎಂದು ಇರಾನ್‌ನ ವಿದೇಶಾಂಗ ಸಚಿವ ಮಹಮ್ಮದ್‌ ಜವಾದ್‌ ಜರೀಫ್ ಎಚ್ಚರಿಕೆ ನೀಡಿದ್ದಾರೆ.

‘ನಾನು ಗಂಭೀರವಾಗಿ ಹೇಳುತ್ತಿದ್ದೇನೆ. ನಮಗೆ ಯುದ್ಧ ಬೇಕಿಲ್ಲ. ಸೇನಾ ಸಂಘರ್ಷ ಬಯಸುವುದಿಲ್ಲ. ಆದರೆ, ನಮ್ಮ ಗಡಿ ರಕ್ಷಣೆಗೆ ಹಿಂಜರಿಯುವುದಿಲ್ಲ. ದಾಳಿ ನಡೆಸಿದರೆ ವಿನಾಶಕ್ಕೆ ದಾರಿಯಾಗುತ್ತದೆ’ ಎಂದು ಸಿಎನ್‌ಎನ್‌ಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದರು. ಅಮೆರಿಕ ಅಥವಾ ಸೌದಿ ಅರೇಬಿಯ ಸೇನಾದಾಳಿ ನಡೆಸಿದರೆ ಪರಿಣಾಮ ಏನು ಎಂಬ ಪ್ರಶ್ನೆಗೆ, ‘ಪೂರ್ಣ ಪ್ರಮಾಣದ ಯುದ್ಧ’ ಎಂದು ಪ್ರತಿಕ್ರಿಯಿಸಿದರು.

ಸೌದಿ ಅರೇಬಿಯದ ತೈಲ ಘಟಕಗಳ ಮೇಲೆ ಶನಿವಾರ ನಡೆದ ದಾಳಿಗೆ ಇರಾನ್‌ ಹೊಣೆ ಎಂದು ಆರೋಪಿಸಿರುವ ಅಮೆರಿಕ ಈ ಕುರಿತು ಸೌದಿ ಅರೇಬಿಯ ಹಾಗೂ ಇತರೆ ಕೊಲ್ಲಿ ರಾಷ್ಟ್ರಗಳ ಪ್ರತಿಕ್ರಿಯೆ ಪಡೆಯುತ್ತಿದೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪೊಂಪಿಯೊ, ‘ಇದು ಯುದ್ಧಕ್ಕೆ ಸಮನಾದ ಕೃತ್ಯ’ ಎಂದು ಪ್ರತಿಕ್ರಿಯಿಸಿದ್ದರು.

ADVERTISEMENT

ದಾಳಿ ಒಪ್ಪಿದ ಇರಾನ್‌: ಈ ಮಧ್ಯೆ, ‘ಇರಾನ್‌ನ ಸರ್ವೋಚ್ಛ ನಾಯಕ ಅಯತೊಲ್ಹಾ ಅಲಿ ಖಮೇನಿ ಕಳೆದ ವಾರ ಸೌದಿ ಅರೇಬಿಯಾದ ತೈಲ ಘಟಕಗಳ ಮೇಲಿನ ದಾಳಿಯನ್ನು ಒಪ್ಪಿಕೊಂಡಿದ್ದಾರೆ’ ಎಂದು ಹೆಸರು ಹೇಳಲಿಚ್ಛಿಸದ ಅಮೆರಿಕದ ಅಧಿಕಾರಿ ಹೇಳಿಕೆ ಆಧರಿಸಿ ಸಿಬಿಎಸ್‌ ನ್ಯೂಸ್‌ ವರದಿ ಮಾಡಿದೆ.

‘ದಾಳಿ ತಡೆಯುವುದು ಕಷ್ಟ’

ತೈಲೋದ್ಯಮದ ಬೆಂಬಲದಲ್ಲಿ ಕೊಟ್ಯಂತರ ವೆಚ್ಚ ಮಾಡಿ ನಿರ್ಮಿಸಿರುವ ಸೌದಿ ಅರೇಬಿಯಾವನ್ನು, ಇರಾನ್‌ನ ಶಂಕಿತ ಡ್ರೋನ್‌ ಮತ್ತು ಕ್ಷಿಪಣಿ ದಾಳಿಯಿಂದ ರಕ್ಷಿಸುವುದು ಅಸಾಧ್ಯ. ಅಮೆರಿಕದ ಅತ್ಯಾಧುನಿಕ ಪರಿಕರಗಳು ಕೂಡಾ ಇದರಲ್ಲಿ ವಿಫಲವಾಗಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ವಾರದ ದಾಳಿಗೆ ಪ್ರತಿರೋಧ ತೋರುವ ಮೊದಲು ಸೌದಿ ಮತ್ತು ಅದರ ಅಮೆರಿಕದ ಸಹವರ್ತಿಗಳು, ಈಗ ಮತ್ತೆ ಅಂಥ ದಾಳಿಯನ್ನು ತಡೆಯುವ ಬಗೆ ಹೇಗೆ ಎಂದು ಚಿಂತನೆ ನಡೆಸಿವೆ. ಕುಡಿಯುವ ನೀರು ಪೂರೈಕೆಯ ಘಟಕಗಳು ಅಥವಾ ಸೌದಿಯ ರಫ್ತು ಸೌಲಭ್ಯಗಳ ಮೇಲೆ ದಾಳಿ ನಡೆಯಬಹುದು ಎಂಬ ಆತಂಕ ಈಗ ಮನೆ ಮಾಡಿದೆ.

ತೈಲಘಟಕಗಳ ಮೇಲೆ ದಾಳಿ: ಹುತಿಸ್‌ ಹೊಣೆ– ಫ್ರೆಂಚ್‌ ಶಂಕೆ

ಪ್ಯಾರಿಸ್‌: ‘ಸೌದಿ ಅರೇಬಿಯಾ ತೈಲ ಘಟಕಗಳ ಮೇಲೆ ದಾಳಿ ನಡೆಸಿರುವುದಾಗಿ ಯೆಮೆನಿ ಬಂಡಾಯಗಾರರಾದ ಹುತಿಸ್‌ ಹೇಳಿಕೆ ನಂಬಲರ್ಹವಲ್ಲ’ ಎಂದು ಫ್ರೆಂಚ್‌ನ ವಿದೇಶಾಂಗ ಸಚಿವ ಜೀನ್‌ ವೆಸ್‌ ಲೆ ಡ್ರಿಯಾನ್‌ ಹೇಳಿದರು.

ಸೌದಿ ಅರೇಬಿಯದ ದಕ್ಷಿಣ ಗಡಿಗೆ ಹೊಂದಿಕೊಂಡಿರುವ ಯೆಮೆನ್‌ನ ಹುತಿಸ್‌ ಬಂಡಾಯಗಾರರಿಗೆ ತೆಹ್ರಾನ್‌ ಬೆಂಬಲವಿದೆ. ದಾಳಿಯಿಂದಾಗಿ ಸೌದಿಯ ತೈಲ ಉತ್ಪಾದನೆ ಪ್ರಕ್ರಿಯೆ ಏರುಪೇರಾಗಿದೆ.

ಈ ಮಧ್ಯೆ, ದಾಳಿಯ ಹಿಂದೆ ಸೌದಿಯ ಬದ್ಧ ವೈರಿಯಾಗಿರುವ ಇರಾನ್‌ನ ಪಾತ್ರವಿರಬಹುದು ಎಂದು ಅಮೆರಿಕ ಮತ್ತು ಸೌದಿ ಅರೇಬಿಯಾ ಶಂಕೆ ವ್ಯಕ್ತಪಡಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.