ADVERTISEMENT

ಪಾಕಿಸ್ತಾನ: ಇಮ್ರಾನ್‌ಖಾನ್‌ ಆಪ್ತನ ಬಂಧನ

ಪಿಟಿಐ
Published 22 ಜುಲೈ 2024, 14:02 IST
Last Updated 22 ಜುಲೈ 2024, 14:02 IST
ಇಸ್ಲಾಮಾಬಾದ್‌ನಲ್ಲಿರುವ ಪಿಟಿಐ ಕಚೇರಿಯನ್ನು ಸೋಮವಾರ ಪೋಲಿಸರು ಸುತ್ತುವರಿದಿದ್ದರು  – ಎಎಫ್‌ಪಿ ಚಿತ್ರ
ಇಸ್ಲಾಮಾಬಾದ್‌ನಲ್ಲಿರುವ ಪಿಟಿಐ ಕಚೇರಿಯನ್ನು ಸೋಮವಾರ ಪೋಲಿಸರು ಸುತ್ತುವರಿದಿದ್ದರು  – ಎಎಫ್‌ಪಿ ಚಿತ್ರ   

ಇಸ್ಲಾಮಾಬಾದ್‌: ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ ಅವರ ಪಿಟಿಐ ಪಕ್ಷದ ಕಚೇರಿಯ ಮೇಲೆ ಸೋಮವಾರ ದಾಳಿ ನಡೆಸಿದ ಪೊಲೀಸರು, ಪಕ್ಷದ ಸಂವಹನ ವಿಭಾಗದ ಕಾರ್ಯದರ್ಶಿ ರವೂಫ್‌ ಹಸನ್‌ ಅವರನ್ನು ಬಂಧಿಸಿದ್ದಾರೆ.

‌ಪಾಕಿಸ್ತಾನ ತೆಹ್ರಿಕ್‌–ಇ–ಇನ್ಸಾಫ್‌ (ಪಿಟಿಐ) ಪಕ್ಷದ ಅಧ್ಯಕ್ಷ ಗೋಹರ್‌ ಖಾನ್‌ ಅವರನ್ನು ಬಂಧಿಸಲಾಗಿದೆ ಎಂದು ಮೊದಲಿಗೆ ವರದಿಯಾಗಿತ್ತು, ಆದರೆ, ಅದನ್ನು ನಿರಾಕರಿಸಿದ ಪಕ್ಷದ ವಕ್ತಾರ ಜುಲ್ಫಿಕರ್‌ ಬುಖಾರಿ ಅವರು ಹಸನ್‌ ಬಂಧನವಾಗಿರುವುದನ್ನು ಖಚಿತಪಡಿಸಿದ್ದಾರೆ.

‘ಹಸನ್‌ ಅವರನ್ನು ಇಸ್ಲಾಮಾಬಾದ್‌ನ ಭಯೋತ್ಪಾದನೆ ನಿಗ್ರಹ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಬಳಿಕ ನ್ಯಾಯಾಲಯವು ಅವರನ್ನು ಏಳು ದಿನಗಳ ಪೊಲೀಸ್‌ ಕಸ್ಟಡಿಗೆ ನೀಡಿದೆ’ ಎಂದು ಬುಖಾರಿ ತಿಳಿಸಿದ್ದಾರೆ.

ADVERTISEMENT

‘ಹಸನ್‌ ಅವರ‌ನ್ನು ವಶಕ್ಕೆ ಪಡೆಯುವ ವೇಳೆ ಅವರ ‌ಬಳಿ ಸ್ಫೋಟಕಗಳು ಪತ್ತೆಯಾಗಿದ್ದವು ಮತ್ತು ನಿಷೇಧಿತ ಸಂಘಟನೆಯೊಂದಿಗೆ ಹಸನ್‌ ನಂಟು ಹೊಂದಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

‘ಪಿಟಿಐನ ಡಿಜಿಟಲ್‌ ಮಾಧ್ಯಮ ವಿಭಾಗದ ಬಗ್ಗೆ ತನಿಖೆ ನಡೆಸಲಾಗಿದೆ’ ಎಂದು ಪೊಲೀಸ್‌ ವಕ್ತಾರರೊಬ್ಬರು ತಿಳಿಸಿದ್ದಾರೆ. ಇತರ ಯಾವುದೇ ಮಾಹಿತಿಯನ್ನು ಅವರು ನೀಡಿಲ್ಲ. ಇಮ್ರಾನ್ ಆಪ್ತರ ಬಂಧನದ ಬಗ್ಗೆ ಪಾಕಿಸ್ತಾನ ಮಾಹಿತಿ ಮತ್ತು ಗೃಹ ಸಚಿವಾಲಯವು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪಕ್ಷದ ಕಚೇರಿಯ ಮೇಲೆ ದಾಳಿ ನಡೆಸಿದ ಪೊಲೀಸರು, ಕಂಪ್ಯೂಟರ್‌ ಮತ್ತು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಪಕ್ಷದ ನಾಯಕ ಖುರ್ರಮ್‌ ಶೇರ್‌ ಜಮಾನ್‌ ಅವರು ‘ಎಕ್ಸ್’ ಮೂಲಕ ತಿಳಿಸಿದ್ದಾರೆ.

ಹಸನ್‌ ಬಂಧನವನ್ನು ಖಂಡಿಸಿರುವ ಪಿಟಿಐ ನಾಯಕರು ಸರ್ಕಾರ‌ ಮತ್ತು ಪೊಲೀಸ್‌ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.