ವಿಶ್ವಸಂಸ್ಥೆ: ‘ಕೋವಿಡ್–19 ಲಸಿಕೆಯ ರಫ್ತು ಪುನರಾರಂಭಿಸಲು ಆಸ್ಟ್ರಾಜೆನೆಕಾ, ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್‌ಐಐ) ಮತ್ತು ಭಾರತ ಸರ್ಕಾರದೊಂದಿಗೆ ಕಾರ್ಯನಿರ್ವಹಿಸಲಾಗುತ್ತಿದೆ’ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತಿಳಿಸಿದೆ.
‘ಹಲವು ದೇಶಗಳು ಕೋವಿಡ್ ಲಸಿಕೆಯ ಪೂರೈಕೆಯಲ್ಲಿ ಉಂಟಾಗಿರುವ ಕೊರತೆಯಿಂದಾಗಿ ಎರಡನೇ ಡೋಸ್ ವಿತರಣೆಯನ್ನು ಸ್ಥಗಿತಗೊಳಿಸಿವೆ’ ಎಂದು ಡಬ್ಲ್ಯುಎಚ್‌ಒನ ಹಿರಿಯ ಸಲಹೆಗಾರ ಬ್ರೂಸ್ ಐಲ್ವರ್ಡ್ ಮತ್ತು ಡಬ್ಲ್ಯುಎಚ್‌ಒ ಮುಖ್ಯಸ್ಥ ಟೆಡ್ರೋಸ್ ಅಡಾನೊಮ್ ಗೆಬ್ರೆಯೆಸಸ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘30–40 ರಾಷ್ಟ್ರಗಳಲ್ಲಿ ಆಸ್ಟ್ರಾಜೆನೆಕಾ ಲಸಿಕೆಯ ಎರಡನೇ ಡೋಸ್ ಅನ್ನು ನೀಡಬಹುದಾಗಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಹಾಗಾಗಿ ಲಸಿಕೆಯ ರಫ್ತನ್ನು ಆದಷ್ಟು ಬೇಗ ಆರಂಭಿಸಲು ಆಸ್ಟ್ರಾಜೆನೆಕಾ, ಭಾರತ ಸರ್ಕಾರ ಮತ್ತು ಎಸ್‌ಐಐಯೊಂದಿಗೆ ಸೇರಿ ಕೆಲಸ ಮಾಡುತ್ತಿದ್ದೇವೆ. ಲಸಿಕೆಯ ಎರಡನೇ ಡೋಸ್‌ನ ಪೂರೈಕೆಯು ನಾವು ಅಂದಾಜಿಸಿದ್ದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದೆ’ ಎಂದು ಐಲ್ವರ್ಡ್ ಹೇಳಿದರು.
‘ಲಸಿಕೆ ಪೂರೈಕೆಯಲ್ಲಿ ಉಂಟಾಗಿರುವ ಕೊರತೆಯಿಂದಾಗಿ ಲ್ಯಾಟಿನ್ ಅಮೆರಿಕ, ಮಧ್ಯಪ್ರಾಚ್ಯ, ದಕ್ಷಿಣ ಏಷ್ಯಾ ಸೇರಿದಂತೆ ಹಲವು ರಾಷ್ಟ್ರಗಳು ತೊಂದರೆಗೊಳಗಾಗಿವೆ’ ಎಂದು ಅವರು ತಿಳಿಸಿದರು.
‘ಭಾರತದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಏರಿಕೆಯಾದ್ದರಿಂದ ಅಲ್ಲಿಯೇ ಲಸಿಕೆಯ ಬೇಡಿಕೆ ಹೆಚ್ಚಾಯಿತು’ ಎಂದು ಅವರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.